ಒಂಟಿ ಮಹಿಳೆ ಮೇಲೆ 10 ಜನರಿಂದ ಗ್ಯಾಂಗ್ ರೇಪ್‌!

KannadaprabhaNewsNetwork |  
Published : Jun 10, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಕುಡಿದು ಬಂದ ಗಂಡನೊಡನೆ ಮುನಿಸಿಕೊಂಡು, ಜಗಳ ಮಾಡಿಕೊಂಡು ತವರು ಮನೆಗೆ ಹೊರಟಿದ್ದ ಮಹಿಳೆಗೆ ತಂಪು ಪಾನೀಯ ಕೊಟ್ಟು, ಊರಿಗೆ ಬಿಡುವುದಾಗಿ ಹೇಳಿ, ಹೊಲವೊಂದಕ್ಕೆ ಕರೆದೊಯ್ದು ಗುಂಪು ಅತ್ಯಾಚಾರ ಎಸಗಿರುವ ಘಟನೆ ಚನ್ನಗಿರಿ ತಾಲೂಕು ಯಲೋದಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

- ಬಸವಾಪಟ್ಟಣ ಠಾಣೆ ವ್ಯಾಪ್ತಿ ಗ್ರಾಮದ ಮಹಿಳೆ । ಯುಪಿ, ಬಿಹಾರ, ಪಶ್ಚಿಮ ಬಂಗಾಳ‍ ನೆನೆಪಿಸುವಂಥ ಪೈಶಾಚಿಕ ಕೃತ್ಯ

- - -

- ಕುಡಿದು ಬಂದ ಪತಿ ಜೊತೆಗೆ ಜಗಳವಾಡಿ ಅಣ್ಣನ ಮನೆಗೆ ಹೊರಟಿದ್ದ ಮಹಿಳೆ

- ಊರಿಗೆ ಬಿಡುವುದಾಗಿ ಬೈಕ್‌ನಲ್ಲಿ ಕೂಡಿಸಿ, ಕರೆದೊಯ್ದು ಹೊಲದಲ್ಲಿ ಸಾಮೂಹಿಕ ಅತ್ಯಾಚಾರ

- ಸಂತ್ರಸ್ಥೆ ಪ್ರತಿರೋಧ ತಡೆಯಲು ಬೆತ್ತಲೆ ಫೋಟೋ-ವೀಡಿಯೋ ವೈರಲ್ ಮಾಡಿದ್ದ ಆರೋಪಿಗಳು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕುಡಿದು ಬಂದ ಗಂಡನೊಡನೆ ಮುನಿಸಿಕೊಂಡು, ಜಗಳ ಮಾಡಿಕೊಂಡು ತವರು ಮನೆಗೆ ಹೊರಟಿದ್ದ ಮಹಿಳೆಗೆ ತಂಪು ಪಾನೀಯ ಕೊಟ್ಟು, ಊರಿಗೆ ಬಿಡುವುದಾಗಿ ಹೇಳಿ, ಹೊಲವೊಂದಕ್ಕೆ ಕರೆದೊಯ್ದು ಗುಂಪು ಅತ್ಯಾಚಾರ ಎಸಗಿರುವ ಘಟನೆ ಚನ್ನಗಿರಿ ತಾಲೂಕು ಯಲೋದಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಯಲೋದಹಳ್ಳಿ ಗ್ರಾಮದ ವಾಸಿಗಳಾದ ಚಟಾಕಿ ನಾಗರಾಜ, ಇಸ್ತ್ರೀ ನಾಗರಾಜ, ಮಧು, ಅರ್ಜುನ, ಬಸವಂತ, ಕುಂದೂರ ಮಾರುತಿ, ಹೆಗ್ಗ ಮಾರುತಿ, ಮನು, ಜೋಗಿ ಸುನೀಲ ಹಾಗೂ ಪ್ರದೀಪ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಒಂದು ಬೈಕ್, ಫೋಟೋ ಮತ್ತು ವಿಡಿಯೋ ಮಾಡಿದ ಸಾಧನ ಜಪ್ತಿ ಮಾಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆತ್ತಲೆ ಫೋಟೋ-ವಿಡಿಯೋ ವೈರಲ್‌:

ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಸುಮಾರು 41 ವರ್ಷ ವಯಸ್ಸಿನ ಮಹಿಳೆ (ಹೆಸರು, ಊರು ಗೌಪ್ಯವಾಗಿಡಲಾಗಿದೆ) ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ಬೆತ್ತಲೆ ಫೋಟೋ ಮತ್ತು ವೀಡಿಯೋ ಮಾಡಿಕೊಂಡ ಆರೋಪಿಗಳ ಪೈಕಿ ಯಾರೋ ವಾಟ್ಸಪ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಈ ಪ್ರಕರಣ ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

ವೈದ್ಯಕೀಯ ಪರೀಕ್ಷೆ:

ಅತ್ಯಾಚಾರ ಎಸಗಿದ್ದ ಯುವಕರು ಆಕೆಗೆ ಬೆದರಿಕೆ ಹಾಕಿದ್ದರು. ಸಂತ್ರಸ್ಥೆ ಅದಕ್ಕೆಲ್ಲಾ ಜಗ್ಗದ ಕಾರಣಕ್ಕೆ ಆಕೆಯ ಬೆತ್ತಲೆ ವೀಡಿಯೋ, ಫೋಟೋಗಳನ್ನು ಆರೋಪಿಗಳು ವೈರಲ್ ಮಾಡಿದ್ದರು ಎಂದು ಹೇಳಲಾಗಿದೆ. ಸಂತ್ರಸ್ಥೆ ಸಂಬಂಧಿಗಳ ಜೊತೆಗೆ ಬಸವಾಪಟ್ಟಣ ಠಾಣೆಗೆ ಬಂದು ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥೆ ಹಾಗೂ ಅತ್ಯಾಚಾರ ಎಸಗಿದ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

ಗಂಡ-ಹೆಂಡತಿ ಜಗಳ:

ಜೂ.3ರ ಸಂಜೆ 7 ಗಂಟೆ ವೇಳೆಗೆ ಪತಿ ಕುಡಿದು ಬಂದಿದ್ದರಿಂದ ಮತ್ತೆ ಕುಡಿದು ಬಂದಿದ್ದೀಯಾ ಎಂಬುದಾಗಿ ಜಗಳ ಮಾಡಿ, ಕೂಲಿ ಮಾಡಿಕೊಂಡು ದುಡಿದಿದ್ದನ್ನೆಲ್ಲಾ ಕುಡಿತಕ್ಕೆ ಇಟ್ಟರೆ ಮನೆ ಹೇಗೆ ನಡೆಸಲಿ, ಇಬ್ಬರು ಮಕ್ಕಳನ್ನು ಹೇಗೆ ಸಾಕಲೆಂದು ಮುನಿಸಿಕೊಂಡಿದ್ದರಿಂದ ಇಬ್ಬರ ಮಧ್ಯೆ ಜಗಳವಾಗಿದೆ. ಅದರಿಂದ ಬೇಜಾರ ಮಾಡಿಕೊಂಡ ಆಕೆ ತನ್ನ ಗಂಡನ ಊರಿನಿಂದ ಯಲೋದಹಳ್ಳಿಯತ್ತ ಹೊರಟಿದ್ದಳು.

ತಂಪು ಪಾನೀಯ ಕುಡಿದಿದ್ದರಿಂದ ಮತ್ತು:

ಈ ಸಮಯದಲ್ಲಿ ಅದೇ ಗ್ರಾಮದ ಚಿಕನ್ ಅಂಗಡಿ ಬಳಿ ಸಂಜೆ 7.30ರ ವೇಳೆ ಅಳುತ್ತಾ ಬರುತ್ತಿದ್ದ ಸಂತ್ರಸ್ಥೆಯನ್ನು ಅಲ್ಲಿದ್ದ ಓರ್ವ ಯುವಕ ಮಾತನಾಡಿಸಿದ್ದಾನೆ. ಕಣ್ಣೀರು ಹಾಕುತ್ತ ಯಲೋದಹಳ್ಳಿ ಕಡೆಗೆ ಹೊರಟಿದ್ದಾಕೆಗೆ ಆ ಯುವಕ ಅಕ್ಕಾ 7 ಅಪ್ ಕುಡಿತಿಯಾ ಅಂತಾ ಕೇಳಿದ್ದಾನೆ. ನಡೆದುಕೊಂಡು ಬಂದು ಸುಸ್ತಾಗಿದ್ದ ಆಕೆ ಹಸಿರು ಬಣ್ಣದ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ತಂಪು ಪಾನೀಯ ಕುಡಿದಿದ್ದಾಳೆ. ಅಷ್ಟರಲ್ಲಿ ಆಕೆಗೆ ಮತ್ತು ಬಂದಂತಾಗಿದೆ. ಆಗ ಆ ಯುವಕ, ಆತನ ಜೊತೆಗಿದ್ದ ಇನ್ನೊಬ್ಬ ನಿನ್ನನ್ನು ಮನೆಗೆ ಬಿಡುತ್ತೇವೆ ಬಾ ಎಂಬುದಾಗಿ ಬೈಕ್‌ನಲ್ಲಿ ಕೂಡಿಸಿಕೊಂಡು, ಜಮೀನೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಹೋದಾಗ ಒಬ್ಬಂಟಿ ಮಹಿಳೆಯ ಸುತ್ತಾ ತುಂಬಾ ಹುಡುಗರು ಸೇರಿಕೊಂಡಿದ್ದಾರೆ. ಪಾನೀಯ ಕುಡಿದ ನಂತರ ಮಂಪರಿನಲ್ಲಿದ್ದ ಆಕೆ ಸುಸ್ತಾಗಿದ್ದು, ಎಲ್ಲಿದ್ದೇನೆಂಬ ಅರಿವಿಲ್ಲದೇ ನಿದ್ದೆಗೆ ಜಾರಿದ್ದಾಳೆ. ಸಂತ್ರಸ್ಥೆಗೆ ಎಚ್ಚರವಾಗಿ ಅಲ್ಲಿಂದ ಎದ್ದು ಯಲೋದಹಳ್ಳಿಯ ತನ್ನ ಸಹೋದರನ ಮನೆಗೆ ಬೆಳಗಿನ ಜಾವ 3.20ಕ್ಕೆ ತಲುಪಿದ್ದಾಳೆ.

ಅನಂತರ ಬೆಳಗ್ಗೆ 11ರ ವೇಳೆಗೆ ಅಲ್ಲಿಂದ ತನ್ನ ಅಕ್ಕನ ಊರಾದ ಕುಂಚೇನಹಳ್ಳಿಗೆ ಹೋಗುವಾಗ ಜೂ.8ರಂದು ಆಕೆಯ ಅಣ್ಣನ ಮಗ ಸತೀಶ ಎಂಬಾತ ಕರೆ ಮಾಡಿ, ನಿನ್ನ ಬೆತ್ತಲೆ ಫೋಟೋ ಮತ್ತು ವೀಡಿಯೋ ಯಲೋದಹಳ್ಳಿ ಗ್ರಾಮಸ್ಥರ ಮೊಬೈಲ್‌ನಲ್ಲಿ ಹರಿದಾಡುತ್ತಿದೆಯೆಂಬ ಬೆಚ್ಚಿ ಬೀಳಿಸುವ ಸಂಗತಿ ತಿಳಿಸಿದ್ದಾನೆ. ಆಗ ಕಳೆದ ರಾತ್ರಿ ಆದ ಘಟನೆಯನ್ನೆಲ್ಲಾ ಆಕೆ ಸತೀಶನ ಗಮನಕ್ಕೆ ತಂದಿದ್ದಾರೆ. ತಕ್ಷಣ ಆಕೆಯನ್ನು ಕುಂಚೇನಹಳ್ಳಿಯಿಂದ ಯಲೋದಹಳ್ಳಿಗೆ ಕರೆಸಿಕೊಂಡು ಸಂಬಂಧಿಗಳು ಇಡೀ ಘಟನೆ ಬಗ್ಗೆ ತಿಳಿದುಕೊಂಡಿದ್ದಾರೆ.

ಸತೀಶನು ಯಲೋದಹಳ್ಳಿಯ ಇಸ್ತ್ರಿ ನಾಗರಾಜ ಎಂಬಾತನ ಬಳಿ ಹೋಗಿ ವಿಚಾರಿಸಿದಾಗ ಪಿರ್ಯಾದಿಗೆ ಎಚ್ಚರವಿಲ್ಲದ ವೇಳೆ ಆಕೆಯ ಮೇಲೆ ಚಟಾಕಿ ನಾಗರಾಜ, ಇಸ್ತ್ರಿ ನಾಗರಾಜ, ಮಧು, ಅರ್ಜುನ, ಬಸವಂತ, ಕುಂದೂರ ಮಾರುತಿ, ಹೆಗ್ಗ ಮಾರುತಿ, ಮನು, ಜೋಗಿ ಸುನೀಲ, ಪ್ರದೀಪ ಎಲ್ಲರೂ ಸೇರಿ ಸಾಮೂಹಿಕ ಅತ್ಯಾತಾರ ಎಸಗಿದ್ದಾರೆ. ಅನಂತರ ಸಂತ್ರಸ್ಥೆಯ ಬೆತ್ತಲೆ ಫೋಟೋ ಮತ್ತು ವೀಡಿಯೋ ಮಾಡಿಕೊಂಡಿದ್ದಾರೆಂಬ ವಿಚಾರ ಬಾಯಿ ಬಿಟ್ಟಿದ್ದಾನೆ. ಈ ಎಲ್ಲರ ಬಗ್ಗೆ ವಿಳಾಸ ತಿಳಿಯುವ ಕಾರಣದಿಂದಾಗಿ ಸಂತ್ರಸ್ಥೆ ಮತ್ತು ಆಕೆಯ ಕುಟುಂಬಸ್ಥರು ತಡವಾಗಿ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಸವಾಪಟ್ಟಣದ ಪೊಲೀಸ್ ಠಾಣೆ ಗುನ್ನೆ ನಂ.88/2026 ಕಲಂ 70, 77 ರೆ/ವಿ 190 ಬಿ.ಎನ್.ಎಸ್-2023 ಮತ್ತು ಕಲಂ 67(ಎ) ಐಟಿ ಆಕ್ಟ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜೂ.3ರ ರಾತ್ರಿ 7.30ರಿಂದ ಜೂ.4ರ ಬೆಳಗಿನ ಜಾವ 3.20ರ ಅವಧಿಯಲ್ಲಿ ಯಲೋದಹಳ್ಳಿ ಗ್ರಾಮದ ಬಳಿ ಜಮೀನೊಂದರಲ್ಲಿ ಅತ್ಯಾಚಾರ ನಡೆದ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.

- - -

-9ಕೆಡಿವಿಜಿ: ಚನ್ನಗಿರಿ ತಾ. ಯಲೋದಹಳ್ಳಿಯ ಮಹಿಳೆ ಮೇಲೆ 10 ಜನರಿಂದ ಸಾಮೂಹಿಕ ಅತ್ಯಾಚಾರವಾದ ಹಿನ್ನೆಲೆಯಲ್ಲಿ ಬಸವಾಪಟ್ಟಣ ಪೊಲೀಸ್ ಠಾಣೆ ಬಳಿ ಸೇರಿರುವ ಜನರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಮಗುವಿಗೂ ಪಲ್ಸ್ ಪೋಲಿಯೋ ಹಾಕಲು ಕ್ರಮ ವಹಿಸಿ
ತಮಿಳುನಾಡಿನ ಯುನೈಟೆಡ್ ಸ್ಟ್ರೈಕರ್ಸ್ ತಂಡ ಪ್ರಥಮ