ಶ್ರೀಶೈಲ ಮಠದ
ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ ಇದೀಗ ಕುಂದಾನಗರಿ ಬೆಳಗಾವಿಯ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ನಗರದ ಹಲವು ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೆಲವು ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಪರಿಸ್ಥಿತಿ ಎದುರಾಗಿದೆ.
ನಗರದ ಆರ್‌ಪಿಡಿ ವೃತ್ತದಲ್ಲಿರುವ ಅಜೆಂತಾ ಹೋಟೆಲ್ ಗ್ಯಾಸ್ ಸಿಲಿಂಡರ್ ಸಿಗದ ಕಾರಣದಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹೋಟೆಲ್ ಮುಂದೆ ಕ್ಲೋಸ್ಡ್ ಎಂದು ಬೋರ್ಡ್ ಹಾಕಿ ಹೋಟೆಲ್ ಮುಚ್ಚಿರುವುದು ಗ್ರಾಹಕರ ಗಮನ ಸೆಳೆಯುತ್ತಿದೆ. ಪ್ರತಿದಿನ ಅಡುಗೆ ಕಾರ್ಯಗಳಿಗೆ ಸುಮಾರು ಮೂರು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ, ಕಳೆದ ಒಂದು ವಾರದಿಂದ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಏಜೆನ್ಸಿಗಳಿಗೆ ಸಂಪರ್ಕಿಸಿದರೂ ಸಿಲಿಂಡರ್ ಸ್ಟಾಕ್ ಇಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಹೋಟೆಲ್ ನಡೆಸುವುದು ಕಷ್ಟಕರವಾಗಿದ್ದು, ತಾತ್ಕಾಲಿಕವಾಗಿ ಹೋಟೆಲ್ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಟೇಲ್ ಮಾಲೀಕರು ತಿಳಿಸಿದ್ದಾರೆ.ಸಿಲಿಂಡರ್ ಕೊರತೆ ಕೇವಲ ಒಂದೇ ಹೋಟೆಲ್‌ಗೆ ಮಾತ್ರ ಸೀಮಿತವಾಗಿಲ್ಲ. ಬೆಳಗಾವಿ ನಗರದಲ್ಲಿನ ಅನೇಕ ಸಣ್ಣ ಹೋಟೆಲ್‌ಗಳು, ಊಟದ ಗೃಹಗಳು, ಟಿಫಿನ್ ಕೇಂದ್ರಗಳು ಹಾಗೂ ಬೀದಿ ಬದಿ ಟೀ ಅಂಗಡಿಗಳಿಗೂ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಡುಗೆ ಗ್ಯಾಸ್ ಇಲ್ಲದೆ ವ್ಯಾಪಾರ ನಡೆಸುವುದು ಸಾಧ್ಯವಾಗುತ್ತಿಲ್ಲ ಎಂದು ಹೋಟೆಲ್ ಉದ್ಯಮಿಗಳು ಹೇಳುತ್ತಿದ್ದಾರೆ.
ದೊಡ್ಡ ಹೋಟೆಲ್‌ಗಳಿಗೆ ಕೆಲವು ದಿನಗಳ ಸ್ಟಾಕ್ ಇರುವುದು ಸಾಧ್ಯವಾದರೂ, ಸಣ್ಣ ಹೋಟೆಲ್‌ಗಳು ಮತ್ತು ಟೀ ಅಂಗಡಿಗಳಿಗೆ ದಿನನಿತ್ಯ ಸಿಲಿಂಡರ್ ಅಗತ್ಯ. ಹೀಗಾಗಿ, ಪೂರೈಕೆ ವ್ಯತ್ಯಯವಾದರೆ ಮೊದಲ ಹೊಡೆತ ಸಣ್ಣ ವ್ಯಾಪಾರಸ್ಥರ ಮೇಲೆಯೇ ಬೀಳುತ್ತಿದೆ. ಗ್ಯಾಸ್ ಸಿಲಿಂಡರ್ ಸಮಸ್ಯೆ ಇನ್ನೂ ಕೆಲವು ದಿನಗಳು ಮುಂದುವರಿದರೆ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ. ಇದರ ಪರಿಣಾಮದಿಂದ ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ಕೆಲಸದ ಅನಿಶ್ಚಿತತೆ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಕೋಟ್
- ಮಂಜುನಾಥ ಪೂಜಾರಿ, ಹೋಟೆಲ್ ಉದ್ಯಮಿ-----