ಗದಗ: ಶಿವಮೊಗ್ಗದ ಡಾ.ಪುಟ್ಟರಾಜ ಗವಾಯಿಗಳ ಉಚಿತ ಸಂಗೀತ ಹಾಗೂ ಸಂಸ್ಕೃತ ಪಾಠಶಾಲೆಗೆ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ನೀಡಿರುವ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಕಾರ್ಯ ಅಭಿನಂದನೀಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಬಸವ ಜಯಂತಿ ದಿನದಂದು ತೋಂಟದಾರ್ಯ ಮಠದಲ್ಲಿ ಬಸವಣ್ಣನಿಗೆ ಪ್ರಿಯವಾದ ಶ್ರಮಜೀವಿಗಳಿಗೆ ಸನ್ಮಾನ ಹಾಗೂ ಜ್ಞಾನದಾಸೋಹದಂಥ ಸತ್ಕಾರ್ಯಗಳು ನಡೆದಿರುವುದು ವಿಶೇಷವಾಗಿದ್ದು, ವಿಜಯನಗರದ ಪ್ರಸಿದ್ಧ ದೊರೆ ಪ್ರೌಢದೇವರಾಯನ ಕಾಲದಲ್ಲಿ ಕನ್ನಡ ಸಾಹಿತ್ಯದ ಸ್ಥಿತಿಗತಿಗಳ ಕುರಿತು ವಿವರಣೆ ನೀಡುವ ಅಪರೂಪದ ಕೃತಿ ಬಿಡುಗಡೆಯಾಗಿರುವುದು ಸಂತಸದ ಸಂಗತಿ. ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳೇ ಈ ಕೃತಿಯ ಪರಿಷ್ಕರಣೆ ಕಾರ್ಯ ಮಾಡಿರುವುದು ಸಾಹಿತ್ಯ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಮಾನವಕುಲವನ್ನು ಕಾಡುತ್ತಿರುವ ಸಮಕಾಲೀನ ಸಮಸ್ಯೆಗಳಿಗೆ ಬಸವತತ್ವವು ಎಳೆ ಎಳೆಯಾಗಿ ಪರಿಹಾರ ಸೂಚಿಸಿದ್ದು, ಬಸವತತ್ವವ ಅಧ್ಯಯನ ಮಾಡುವ ವ್ಯವಧಾನ ನಮ್ಮಲ್ಲಿ ಇಲ್ಲವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ರಾಗ-ದ್ವೇಷಗಳಿಲ್ಲದ ಸಮಾಜ ನಿರ್ಮಾಣವಾಗಬೇಕಾದರೆ ಬಸವತತ್ವಗಳು ಅತ್ಯವಶ್ಯವಾಗಿವೆ ಎಂದರು.ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಲಿಂಬಯ್ಯಸ್ವಾಮಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂಬಯ್ಯಸ್ವಾಮಿ ಪ್ರತಿಷ್ಠಾನ ನಮ್ಮ ತಂದೆಯವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಸದುದ್ದೇಶದಿಂದ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಪರಿಸರವಾದಿಗಳು, ವಿಕಲಾಂಗ ಸಂಸ್ಥೆ ಹಾಗೂ ಆದರ್ಶ ದಂಪತಿಗಳು ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತಿದ್ದೇವೆ. ಈ ಬಾರಿ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳ ಮಾರ್ಗದರ್ಶನದ ಮೇರೆಗೆ ಶಿವಮೊಗ್ಗದ ಪುಟ್ಟರಾಜ ಗವಾಯಿಗಳ ಉಚಿತ ಸಂಗೀತ ಪಾಠಶಾಲೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜಕ್ಕೆ ಅರ್ಪಿತವಾದ ಸಂಸ್ಥೆಯೊಂದಕ್ಕೆ ಪ್ರಶಸ್ತಿ ನೀಡುತ್ತಿರುವುದು ತೃಪ್ತಿ ತಂದಿದೆ ಎಂದರು.
ಈ ವೇಳೆ ಡಾ.ಶಿವಾನಂದ ವಿರಕ್ತಮಠ ರಚಿಸಿದ ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ ಲೋಕಾರ್ಪಣೆಗೊಂಡಿತು. ಹಂಪಿ ಕನ್ನಡ ವಿಶ್ವವಿದ್ಯಾಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ.ಕೆ ರವೀಂದ್ರನಾಥ ಗ್ರಂಥ ಲೋಕಾರ್ಪಣೆ ಮಾಡಿ ಗ್ರಂಥದ ವೈಶಿಷ್ಟ್ಯಗಳ ಕುರಿತು ಮಾತನಾಡಿದರು.
ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಆಶೀರ್ವಚನ ನೀಡಿದರು. ರೇವಣಸಿದ್ಧಯ್ಯ ಮರಿದೇವರಮಠ ಹಾಗೂ ಡಾ. ಪುಟ್ಟರಾಜ ಕವಿ ಗವಾಯಿಗಳ ಉಚಿತ ಸಂಗೀತ ಮತ್ತು ಸಂಸ್ಕೃತ ಪಾಠಶಾಲೆಯ ಅಂಧ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನೆರವೇರಿತು.ಸಿಪಿಐ ಹಾಗೂ ಸಾಹಿತಿಗಳಾದ ಜ್ಯೋತಿರ್ಲಿಂಗ ಹೊನಕಟ್ಟಿ, ಆನಂದಸ್ವಾಮಿ ಗಡ್ಡದ್ದೇವರಮಠ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಚ್. ಬೇಲೂರ, ಕಾರ್ಯದರ್ಶಿ ಪ್ರವೀಣ ವಾರಕರ, ಶ್ರೀದೇವಿ ಶೆಟ್ಟರ, ಶೇಖಣ್ಣ ಕಳಸಾಪೂರ, ಅಮರೇಶ ಅಂಗಡಿ ಮುಂತಾದವರಿದ್ದರು.