ಕುಷ್ಟಗಿ:
ಸದೃಢ ಆಡಳಿತದಿಂದ ಕೃಷಿ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೆಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.ಪಟ್ಟಣದ ಎಸ್‌ವಿಸಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವತಂತ್ರ ನಂತರ ಕಾಲಘಟ್ಟದಲ್ಲಿ ಶೇ.75ರಷ್ಟು ಕುಟುಂಬಗಳು ಜೀವನಕ್ಕಾಗಿ ಕೃಷಿ ಅವಲಂಭಿಸಿದ್ದವು. ಈಗ ಕೃಷಿಯಲ್ಲಿ ತೊಡಗಿರುವವರ ಸಂಖ್ಯೆ ಇಳಿಮುಖವಾಗಿದೆ. ಆದರೆ, ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದಿವೆ. ಕೃಷಿ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಸದೃಢವಾಗಬೇಕು. ಈ ವ್ಯವಸ್ಥೆಯ ತಿಳಿವಳಿಕೆ ಶಾಲಾ ಹಂತದಲ್ಲಿ ಆದಾಗ ಸಾರ್ವಜನಿಕ ಆಡಳಿತ ವ್ಯವಸ್ಥೆ ಸದೃಢಗೊಳ್ಳಲು ಸಾಧ್ಯ ಎಂದರು. ಇಂದು ಎಲ್ಲ ರಂಗಗಳಲ್ಲಿ ಸಶಕ್ತ ನಾಯಕತ್ವದ ಕೊರತೆ ಇದೆ. ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಚುನಾವಣೆ ನಡೆದು ವಿವಿಧ ಹುದ್ದೆಗೆ ಚುನಾಯಿತರಾದ ವಿದ್ಯಾರ್ಥಿಗಳು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಹಾಗಾದಾಗ ಮುಂದೊಂದು ದಿನ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾಯಕರಾಗಲು ಸಾಧ್ಯವಾಗುತ್ತದೆ. ಆ ಮೂಲಕ ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸುವ ಅವಕಾಶ ಸಿಗುತ್ತದೆ ಎಂದು ಹೇಳಿದರು.ಮೊಬೈಲ್ ಗೀಳಿನಿಂದ ಮಕ್ಕಳು ಮುಕ್ತವಾಗುವ ತನಕ ಯಶಸ್ಸು ಸಾಧ್ಯವಿಲ್ಲ. ಕೇವಲ ಪದವಿಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಬದುಕಿನಲ್ಲಿ ನೈತಿಕತೆ ಮೈಗೂಡಿಸಿಕೊಂಡಾಗ ದೇಶ ಕಟ್ಟಲು ಸಾಧ್ಯವೆಂದು ತಿಳಿಸಿದರು.ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ಜವಾಬ್ದಾರಿ, ಮೌಲ್ಯಗಳು, ನಾಯಕತ್ವದ ಗುಣ ಹಾಗೂ ಶಿಸ್ತು ಮಕ್ಕಳಲ್ಲಿ ಇರಬೇಕು ಎಂಬ ಕಾರಣಕ್ಕೆ ಸರ್ಕಾರ ಶಾಲಾ ಸಂಸತ್ ಪರಿಕಲ್ಪನೆ ಪರಿಚಯಿಸಿದೆ. ಈ ಭಾಗದ ಮಕ್ಕಳು ವಿಧಾನಸೌಧದಲ್ಲಿ ಆಡಳಿತ ನಡೆಸುವಂತಾಗಲು ಶಾಲಾ ಸಂಸತ್ ಕಾರ್ಯಕ್ರಮಗಳು ನೆರವಾಗುತ್ತವೆ. ಇದಕ್ಕೆ ಪೂರಕವಾಗಿ ಶಿಕ್ಷಕರಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಳವಾಗಬೇಕು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಾವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕಿರುವುದು ಅನಿವಾರ್ಯವಾಗಿದೆ ಎಂದು ಹೇಳಿದರು.ಎಸ್‌ವಿಸಿ ಸಂಸ್ಥೆ ಅಧ್ಯಕ್ಷ ಸಿ.ವಿ. ಚಂದ್ರಶೇಖರ ಮಾತನಾಡಿ, ನರೇಂದ್ರ ಮೋದಿ, ದ್ರೌಪದಿ ಮುರ್ಮು, ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾನ್ಯ ಹಿನ್ನೆಲೆಯಿಂದ ಬಂದು ಮಹಾನ್ ನಾಯಕರಾಗಿ ರುಪುಗೊಂಡಿದ್ದಾರೆ. ಇದು ಈ ದೇಶದ ಸಂವಿಧಾನದಿಂದ ಸಾಧ್ಯವಾಗಿದೆ. ನಮ್ಮ ಮಕ್ಕಳು ಅವರ ಹಾಗೆ ಮಹಾನ್ ನಾಯಕರಾಗಲು ಶಾಲಾ ಹಂತದಿಂದಲೇ ವೇದಿಕೆಗಳು ಸಿಗಬೇಕು. ಶಾಲಾ ಸಂಸತ್ತಿಗೆ ಆಯ್ಕೆಯಾದ ಮಕ್ಕಳಲ್ಲಿ ಜವಾಬ್ದಾರಿ ಹಾಗೂ ಪ್ರಗತಿಪರತೆ ಹೆಚ್ಚುತ್ತದೆ ಎಂದರು.ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಪ್ರಾಂಶುಪಾಲ ಮಹದೇವ ಮಧಾಲೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ಸಿಇಒ ಡಾ. ಜಗದೀಶ್ ಅಂಗಡಿ, ರಾಜ್ಯ ಪಠ್ಯಕ್ರಮ ಶಾಲೆಯ ಮುಖ್ಯೋಪಾಧ್ಯಾಯರಾದ ಭೀಮರಾವ್ ಕುಲಕರ್ಣಿ, ಪ್ರಾಂಶುಪಾಲರಾದ ಭೀಮಸೇನ್ ಆಚಾರ್, ಡಾ. ತಿಪ್ಪಾಶೆಟ್ಟಿ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಅರುಣ ಕರ್ಮಕರ್ ಉಪಸ್ಥಿತರಿದ್ದರು.