ಕನ್ನಡಪ್ರಭ ವಾರ್ತೆ ಕೋಲಾರಎಸ್ಸೆಸ್ಸೆಲ್ಸಿ ಪರೀಕ್ಷೆ-೧ ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-೨ ಬರೆಯಲು ಅನುವಾಗುವಂತೆ ಮೇ.೧೫ ರಿಂದ ಜೂ.೫ ರವರೆಗೂ ಬೆಳಗ್ಗೆ ೧೦ ರಿಂದ ೪-೩೦ ರವರೆಗೂ ರಜಾದಿನಗಳು ಒಳಗೊಂಡಂತೆ ವಿಶೇಷ ತರಗತಿ ನಡೆಸಲು ಡಿಡಿಪಿಐ ಕೃಷ್ಣಮೂರ್ತಿ ಸೂಚಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ-೧ ರಲ್ಲಿ ಅನುತ್ತೀರ್ಣರಾದ ಮಕ್ಕಳ ಕಲಿಕಾಭಿವೃದ್ದಿ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದು, ವಿಶೇಷ ತರಗತಿಗಳಿಗೆ ಹಾಜರಾಗುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಕ್ರಮವಹಿಸಲು ಮುಖ್ಯಶಿಕ್ಷಕರಿಗೆ ಆದೇಶಿಸಿದ್ದಾರೆ.ಶಿಕ್ಷಕರ ಹಾಜರಿ ಕಡ್ಡಾಯ
ಶೇ.೭೫ ಹಾಜರಾತಿ ಕೊರತೆಯಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ-೧ ಬರೆಯಲಾಗದೇ ವಂಚಿತರಾದ ೧೫ ವರ್ಷ ತುಂಬಿದ ವಿದ್ಯಾರ್ಥಿಗಳಿಗೂ ಸಹಾ ಪರೀಕ್ಷೆ-೨ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಪರೀಕ್ಷೆ -೧ಕ್ಕೆ ನೋಂದಣಿಯಾಗದವರಿಗೆ ಪರೀಕ್ಷೆ-೨,೩ ಬರೆಯಲು ಅವಕಾಶವಿಲ್ಲ ಎಂದು ತಿಳಿಸಲಾಗಿತ್ತು. ಮೇ.೧೫ ರ ನಂತರ ಮುಖ್ಯಶಿಕ್ಷಕರ ಲಾಗಿನ್‌ನಲ್ಲಿ ಮಾಹಿತಿ ಬಿಡುಗಡೆಯಾಗಲಿದ್ದು, ಇಂತಹ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿ ನೋಂದಣಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.