ಮಣ್ಣಿನ ಗಣೇಶನಲ್ಲಿ ಅರಳಿದ ವಿಶೇಷ ಚೇತನ

KannadaprabhaNewsNetwork |  
Published : Sep 06, 2024, 01:09 AM IST

ಸಾರಾಂಶ

ನಾಡಿನಾದ್ಯಂತ ಗೌರಿಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಮಾರುಕಟ್ಟೆಯಲ್ಲಿ ನೋಡಲು ಕಾಣುವ ಅಂದಚಂದದ ಗಣಪತಿ ತಯಾರಿಸಲು ಸಾಕಷ್ಟು ಕಲಾವಿದರು ಶ್ರಮಿಸುತ್ತಿದ್ದಾರೆ. ಆದರೆ ಯಾವುದೇ ತರಬೇತಿ ಇಲ್ಲದಿದ್ದರೂ ವಿಶೇಷ ಚೇತನ ಮಕ್ಕಳು ತಮ್ಮ ಮಾರ್ಗದರ್ಶಕರ ಅಣತಿಯಂತೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ನಾಡಿನಾದ್ಯಂತ ಗೌರಿಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಮಾರುಕಟ್ಟೆಯಲ್ಲಿ ನೋಡಲು ಕಾಣುವ ಅಂದಚಂದದ ಗಣಪತಿ ತಯಾರಿಸಲು ಸಾಕಷ್ಟು ಕಲಾವಿದರು ಶ್ರಮಿಸುತ್ತಿದ್ದಾರೆ. ಆದರೆ ಯಾವುದೇ ತರಬೇತಿ ಇಲ್ಲದಿದ್ದರೂ ವಿಶೇಷ ಚೇತನ ಮಕ್ಕಳು ತಮ್ಮ ಮಾರ್ಗದರ್ಶಕರ ಅಣತಿಯಂತೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಅಚ್ಚರಿ ಮೂಡಿಸಿದ್ದಾರೆ.ವಿವೇಕ ನಗರದಲ್ಲಿರುವ ವಿಜಯಲಕ್ಷ್ಮೀ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಯಲ್ಲಿ ಇಂತಹದ್ದೊಂದು ವಿಶೇಷ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಬುದ್ಧಿಮಾಂದ್ಯ, ಕುಬ್ಜ, ಕೈಕಾಲು ಸ್ವಾಧೀನ ಇಲ್ಲದ ಹಾಗೂ ವಿವಿಧ ರೀತಿಯಲ್ಲಿ ದೈಹಿಕ ವಿಕಲಚೇತನ ಹೊಂದಿದ ಸುಮಾರು 40ಕ್ಕೂ ಅಧಿಕ ಮಕ್ಕಳಿಂದ ವಿಶೇಷ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಲಾಗಿದೆ.ಹಣ್ಣುಗಳ ಬೀಜಗಳ ಬಳಕೆ:

ವಿಶೇಷಚೇತನ ಮಕ್ಕಳು ನಿಸರ್ಗಕ್ಕೆ ರಕ್ಷಣೆಯಾಗುವ ನಿಟ್ಟಿನಲ್ಲಿ ಕೇವಲ ಮಣ್ಣನ್ನು ಬಳಸಿ 20ಕ್ಕೂ ಅಧಿಕ ಅಂದವಾದ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಮೂರ್ತಿಗಳು ಇನ್ನಷ್ಟು ಚೆಂದ ಕಾಣುವಂತೆ ಮಾಡಲು ನೈಸರ್ಗಿಕವಾದ ತುಳಸಿ ಬೀಜ, ಸೀತಾಫಲ ಹಣ್ಣಿನ ಬೀಜ, ಕರಿಬೇವಿನ ಬೀಜ, ಮೆಂತೆ ಕಾಳುಗಳು, ಕೊತ್ತಂಬರಿ ಬೀಜ, ಸೋಂಪು ಬೀಜಗಳನ್ನು ಬಳಸಿ ಅಲಂಕಾರ ಮಾಡಲಾಗಿದೆ. ಮಣ್ಣಿನ ಗಣಪತಿಗಳ ವಿಸರ್ಜನೆ ಬಳಿಕ ನೀರಲ್ಲಿ ಕರಗುವುದರಿಂದ ಹಾಗೂ ಅದರಲ್ಲಿನ ಬೀಜಗಳು ಭೂಮಿಗೆ ಬಿದ್ದು ಸಸಿ ಹಾಗೂ ಗಿಡಗಳಾಗಿ ಬೆಳೆಯುವುದರಿಂದ ಪರಿಸರಕ್ಕೆ ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ವಿಶೇಷಚೇತನ ಮಕ್ಕಳು ಪರಿಸರಕ್ಕೆ ವಿಶೇಷ ಕೊಡುಗೆ ಕೊಟ್ಟಿದ್ದಾರೆ. ಇಷ್ಟೆಲ್ಲ ಸಾಧನೆಗೆ ಬೆಂಬಲ ನಿಡಿದ್ದು ಇಲ್ಲಿನ ಇನ್ನರ್‌ವ್ಹೀಲ್ ಕ್ಲಬ್ ಸಂಸ್ಥೆ ಹಾಗೂ ಅಗಸ್ತ್ಯ ಫೌಂಡೇಶನ್ ಸದಸ್ಯರು.ತಯಾರಿಯೇ ವಿಶೇಷ:

ಗೌರಿ ಗಣೇಶ ಹಬ್ಬದಲ್ಲಿ ಒಂದು ವಿಶೇಷ ಕಾರ್ಯ ಮಾಡಬೇಕು ಎಂದುಕೊಂಡ ಸಂಸ್ಥೆಯ ಸಿಬ್ಬಂದಿಗಳಾದ ಅಶೋಕ ಹೀರೆಮಠ, ಪ್ರತಿಭಾ ಅಲಗೂರ, ರೂಪಾ ಶೆಟ್ಟಿ, ಅಶ್ವಿನಿ ಬುರಣಾಪೂರ, ಕಸ್ತೂರಿ ಕಾಂಬಳೆ, ಮಂಜುನಾಥ ಕಾಂಬಳೆ, ಜ್ಯೋತಿ ತಾಡ, ಗುರು ಸೇರಿದಂತೆ ಅನೇಕರು ಈ ವಿಶೇಷ ಸಾಮರ್ಥ್ಯದ ಮಕ್ಕಳೊಂದಿಗೆ ಗಣೇಶ ತಯಾರಿಸುವ ಯೋಜನೆ ರೂಪಿಸಿದರು. ಓರ್ವ ಮಾರ್ಗದರ್ಶಕ ಹಾಗೂ ಐವರು ವಿಶೇಷಚೇತನ ವಿದ್ಯಾರ್ಥಿಗಳ ತಂಡಗಳನ್ನ ರಚನೆ ಮಾಡಿ ವಾರಗಟ್ಟಲೇ ಶ್ರಮವಹಿಸಿ ಅವರಿಂದಲೇ ಒಂದು ಅಡಿಯಿಂದ ಎರಡು ಅಡಿ ಎತ್ತರದ ಕಲಾತ್ಮಕ ಗಣೇಶನ ಮೂರ್ತಿಗಳನ್ನು ತಯಾರಿಸಿದ್ದಾರೆ.

ಸಮಾಜಕ್ಕೆ ನಮ್ಮದೂ ಕೊಡುಗೆ ನೀಡಬೇಕು ಎಂದು ವಿಶೇಷ ಚೇತನ ಮಕ್ಕಳಿಗಾಗಿ ಕಳೆದ 5ವರ್ಷದ ಹಿಂದೆ ಸಂಸ್ಥೆ ಆರಂಭಿಸಿದ್ದೇವೆ. ಇಲ್ಲಿನ ಮಕ್ಕಳಿಗೆ ಶಿಕ್ಷಣ ಹಾಗೂ ಫಿಜಿಯೋಥೆರಪಿ, ಯೋಗಥೆರಪಿ, ಮಶೀನ್ ಥೆರಪಿ, ಸ್ಪೀಚ್ ಥೆರೆಪಿ ನೀಡಿ ಅವರ ಕೈ, ಕಾಲುಗಳನ್ನು ಸ್ವಾಧಿನಕ್ಕೆ ತರಲಾಗುತ್ತಿದೆ. ಇಂತಹ ಮಕ್ಕಳಿಂದಲೇ ಕಳೆದ ಬಾರಿ ಪರಿಸರ ಸ್ನೇಹಿ ರಾಖಿ ತಯಾರಿಸಾಗಿತ್ತು. ಮೊದಲ ಬಾರಿಗೆ ಗಣೇಶನ ಮೂರ್ತಿಗಳನ್ನು ತಯಾರಿಸಿದ್ದು ವಿಶೇಷವಾಗಿದೆ.

ಪ್ರಶಾಂತ ದೇಶಪಾಂಡೆ,

ಸಂಸ್ಥಾಪಕರು.

ಸ್ವತಂತ್ರವಾಗಿ ನಡೆದಾಡಲೂ ಆಗದಿರುವ ವಿಶೇಷಚೇತನ ಮಕ್ಕಳು ಅದ್ಭುತವಾಗಿ ಪರಿಸರಸ್ನೇಹಿ ಗಣೇಶ ಮುರ್ತಿಗಳನ್ನು ತಯಾರಿಸಿರುವುದು ನೋಡಿ ಬಹಳ ಖುಷಿ ಆಗುತ್ತದೆ. ತಮ್ಮದೇ ಕಾಲ್ಪನಿಕ ರೀತಿಯಲ್ಲಿ ಗಣೇಶ ಮೂರ್ತಿಗಳನ್ನು ತಯಾರು ಮಾಡಿರುವ ಈ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಅಗತ್ಯವಿದೆ.

- ಪೂಜಾ ಜಡಗೆ,

ಸಾಮಾಜಿಕ ಕಾರ್ಯಕರ್ತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!