ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆ

KannadaprabhaNewsNetwork | Published : Sep 6, 2024 1:09 AM

ಸಾರಾಂಶ

ಗಣೇಶ ಚತುರ್ಥಿ ಆಚರಿಸಲು ಜನರು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ತಯಾರಿಕೆ ಕೂಡ ಭರದಿಂದ ಸಾಗಿದೆ.

ಬಸವರಾಜ ನಂದಿಹಾಳ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಗಣೇಶ ಚತುರ್ಥಿ ಆಚರಿಸಲು ಜನರು ಅಗತ್ಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ತಯಾರಿಕೆ ಕೂಡ ಭರದಿಂದ ಸಾಗಿದೆ. ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಂಘಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಮಂಟಪ ಹಾಕಲು ಬೇಕಾದ ತಯಾರಿ, ಸಿದ್ಧತೆ ಭರದಿಂದ ಸಾಗಿದೆ. ಶನಿವಾರವೇ ಗಣೇಶ ಚತುರ್ಥಿ ಇರುವದರಿಂದಾಗಿ ಗಣಪತಿ ಮೂರ್ತಿಗಳ ತಯಾರಕರು ಈಗಾಗಲೇ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಕೆಲವು ಮೂರ್ತಿಗಳು ಸಿದ್ಧಗೊಂಡಿದ್ದು, ಗಣಪತಿ ಮೂರ್ತಿಗಳ ಖರೀದಿಯಲ್ಲಿಯೂ ಗ್ರಾಹಕರು ಬ್ಯುಸಿಯಾಗಿದ್ದಾರೆ.ಹಬ್ಬಕ್ಕೆ ಅಗತ್ಯವಿರುವ ಮಂಟಪಗಳ ಅಲಂಕಾರಿಕ ವಸ್ತುಗಳು, ವಿವಿಧ ವಿನ್ಯಾಸದ ಅಲಂಕಾರಿಕ ವಿದ್ಯುತ್‌ ದೀಪಗಳು ಸೇರಿದಂತೆ ವಿವಿಧ ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ಗಣೇಶ ಚತುರ್ಥಿಯಂದು ಈ ವಸ್ತುಗಳ ಮಾರಾಟ ಭರಾಟೆ ಜೋರಾಗುತ್ತದೆ. ಪಟ್ಟಣ ಸೇರಿದಂತೆ ಮನಗೂಳಿ, ಮುತ್ತಗಿ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲವರು ಮಣ್ಣಿನ ಗಣಪತಿ ಮೂರ್ತಿಗಳನ್ನು ಕಳೆದ ಒಂದೂವರೆ ತಿಂಗಳಿಂದ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.ತಾಲೂಕಿನ ಮನಗೂಳಿ ಪಟ್ಟಣದ ಭೀಮರಾವ ಕುಂಬಾರ, ಮುತ್ತಗಿಯ ಚಂದ್ರಕಾಂತ ಪತ್ತಾರ, ಬ.ಬಾಗೇವಾಡಿಯ ಮೋಹನ ಬಡಿಗೇರ ಸೇರಿದಂತೆ ತಮ್ಮ ಕುಟುಂಬ ಸದಸ್ಯರೊಂದಿಗೆ ಒಂದೂವರೆ ತಿಂಗಳಿನಿಂದ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಗಣಪತಿ ಮೂರ್ತಿ ತಯಾರಕರು ಮೂರ್ತಿಗಳ ತಯಾರಿಕೆಗೆ ಬೇಕಾದ ಮಣ್ಣನ್ನು ತಂದು ಅದನ್ನು ಹತ್ತಿಯೊಂದಿಗೆ ನೆನಸಿಟ್ಟು ಮಣ್ಣು ಹದಗೊಂಡ ನಂತರ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತಾರೆ.₹೧೦೦ ರಿಂದ ₹೧೫೦೦ ರವರೆಗೆ ಮಾರಾಟ:

ಒಂದೂವರೆ ತಿಂಗಳಿನಿಂದಲೂ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಇದುವರೆಗೂ ೧೦೦ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದು, ಅವುಗಳಿಗೆ ಬಣ್ಣ ಮಾಡಲಾಗಿದೆ. ಗಾತ್ರಕ್ಕೆ ತಕ್ಕಂತೆ ₹೧೦೦ ರಿಂದ ₹೧೫೦೦ ರವರೆಗೆ ಮಾರಾಟ ಮಾಡಲಾಗುತ್ತದೆ. ಇಂದು ಬಹುತೇಕ ಕಡೆಗಳಲ್ಲಿ ಮಣ್ಣಿನ ಗಣಪತಿಕ್ಕಿಂತಲೂ ಪಿಒಪಿ ಗಣೇಶ ಮೂರ್ತಿಗಳಿಗೆ ಬೇಡಿಕೆಯಿದೆ.

ಕಳೆದ ನಾವು ತಯಾರಿಸಿದ ಗಣಪತಿಗಳು ಮಾರಾಟ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಕೆಲವರು ಈಗಾಗಲೇ ಗಣಪತಿ ಮೂರ್ತಿಗಳನ್ನು ಬುಕ್‌ ಮಾಡಿದ್ದಾರೆ. ಮಣ್ಣಿನಿಂದ ಬೃಹತ್ ಗಾತ್ರದ ಗಣಪತಿ ಮೂರ್ತಿ ತಯಾರಿಸಬಹುದು. ಆದರೆ, ಅವುಗಳನ್ನು ತೆಗೆದುಕೊಂಡು ಹೋಗಲು ಕಷ್ಟವಾಗುತ್ತದೆ. ಅದಕ್ಕಾಗಿ ಬೃಹತ್ ಗಾತ್ರದ ಮೂರ್ತಿಗಳು ಪಿಒಪಿಗಳಲ್ಲಿ ತಯಾರಿಸಲಾಗುತ್ತಿದೆ.

-ಭೀಮರಾವ ಕುಂಬಾರ, ಮೂರ್ತಿ ತಯಾರಕರು.

ನಮ್ಮ ತಂದೆಯ ಕಾಲದಿಂದಲೂ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿದ್ದೇವೆ. ೪೦ ವರ್ಷಗಳಿಂದ ಮೂರ್ತಿಗಳನ್ನು ತಯಾರಿಸುತ್ತಿದ್ದೇನೆ. ಬೃಹತ್ ಮೂರ್ತಿ ಬೇರೆಡೆ ತಂದು ಮಾರಾಟ ಮಾಡುತ್ತೇವೆ. ₹ ೫೦ರಿಂದ ₹೨೫ ಸಾವಿರವರೆಗೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಸಲ ಮಣ್ಣಿನ ೨೦೦, ೨,೦೦೦ ಪಿಒಪಿ ಮೂರ್ತಿಗಳನ್ನು ತಯಾರಿಸಿದ್ದೇವೆ. ೧೦ ಬೃಹತ್ ಗಾತ್ರದ ಮೂರ್ತಿಗಳನ್ನು ಬೇರೆಡೆಯಿಂದ ತರಿಸಲಾಗಿದೆ.

ಚಂದ್ರಕಾಂತ ಪತ್ತಾರ, ಮೂರ್ತಿ ತಯಾರಕ ಮುತ್ತಗಿ.

Share this article