ಕನ್ನಡಪ್ರಭ ವಾರ್ತೆ ನಾಗಮಂಗಲ
ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ತಾಲೂಕಿನಾದ್ಯಂತ ವಿಶೇಷ ರೀತಿಯಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.ತಾಲೂಕಿನಲ್ಲಿ ಒಟ್ಟು 290 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ಪ್ರೌಢಶಾಲೆಗಳ ಪೈಕಿ 25 ಸರ್ಕಾರಿ ಪ್ರೌಢಶಾಲೆ, 6 ವಸತಿ ಶಾಲೆ, ೧೩13 ಅನುದಾನಿತ ಪ್ರೌಢಶಾಲೆ ಹಾಗೂ 8 ಖಾಸಗಿ ಪ್ರೌಢಶಾಲೆಗಳಿವೆ. ಎಲ್ಲಾ ಶಾಲೆಗಳನ್ನೂ ತಳಿರು ತೋರಣಗಳಿಂದ ಅಲಂಕರಿಸಿ ಹಬ್ಬದ ರೀತಿಯಲ್ಲಿ ಸಿಂಗಾರಗೊಳಿಸಿ ಮಕ್ಕಳನ್ನು ಸ್ವಾಗತಿಸಲು ಸಜ್ಜುಗೊಳಿಸಲಾಗಿತ್ತು. ತಾಲೂಕಿನ ಹರಳಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳನ್ನು ಗ್ರಾಮದ ಮುಖ್ಯರಸ್ತೆಯಲ್ಲಿ ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ಕರೆತಂದು ಶಾಲೆಯ ಮುಖ್ಯಧ್ವಾರದಲ್ಲಿ ಅರಿ ಬೆಳಗಿ ಗುಲಾಬಿ ಹೂವಿನೊಂದಿಗೆ ನೋಟ್ ಪುಸ್ತಕ ಕೊಟ್ಟು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.
ಶಾಲೆ ಮುಖ್ಯ ಶಿಕ್ಷಕ ಎಲ್.ಜಿ.ಶ್ರೀನಿವಾಸಗೌಡ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಉಚಿತವಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವೂ ಸಿಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.ಕರಡಹಳ್ಳಿ ಸಿಆರ್‌ಸಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುರೇಶ್, ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್‌ಕುಮಾರ್, ಸದಸ್ಯ ರಾಮಕೃಷ್ಣ, ಮರೀಗೌಡ, ಮುಖಂಡರಾದ ರುಕ್ಮಾಂಗದ, ನವೀನ್ ಸೇರಿದಂತೆ ಶಾಲೆಯ ಶಿಕ್ಷಕರು ಇದ್ದರು.
ತಾಲೂಕಿನ ತೊರೆಮಲ್ಲನಾಯ್ಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಬೆಳ್ಳೂರು ಹೋಬಳಿ ನಾಗಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಟ್ರಾಕ್ಟರ್‌ನಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು.ತಾಲೂಕಿನ ಕರಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೆಂಗಳೂರಿನ ರವಿ ಮಣೆಗಾರ್ ಅವರು ಉಚಿತವಾಗಿ ನೀಡಿದ್ದ ಸಿದ್ದ ಉಡುಪುಗಳನ್ನು ವಿತರಿಸಿ ಆರತಿ ಬೆಳಗಿ ಸಿಹಿ ತಿನಿಸಿ ಗುಲಾಬಿ ಹೂವು ಕೊಟ್ಟು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ತಾಲೂಕಿನ ಹಲವು ಶಾಲೆಗಳಿಗೆ ಭೇಟಿ ಕೊಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್, ಶಾಲಾ ಪ್ರಾರಂಭೋತ್ಸವದ ಮೊದಲ ದಿನದಂದು ಮಕ್ಕಳನ್ನು ಶಾಲೆಗೆ ಕರೆತರಲು ಮಾಡಿಕೊಂಡಿದ್ದ ಸಿದ್ದತೆ ಸಿಂಗಾರವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ದಾಖಲಾತಿ ಆಂದೋಲನದ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವಂತೆ ಪೋಷಕರಲ್ಲಿ ಅರಿವು ಮೂಡಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.