ವೈದ್ಯಕೀಯ ವೃತ್ತಿಯಲ್ಲಿ ಸೇವಾಮನೋಭಾವ ಪ್ರಮುಖ

KannadaprabhaNewsNetwork |  
Published : Jul 13, 2026, 01:45 AM IST
ಸಿಂಗ್ | Kannada Prabha

ಸಾರಾಂಶ

ವೈದ್ಯಕೀಯ ವೃತ್ತಿಯಲ್ಲಿ ಸೇವಾಮನೋಭಾವ ಪ್ರಮುಖ

ಮೂಡುಬಿದಿರೆ: ವೈದ್ಯಕೀಯ ವೃತ್ತಿಯಲ್ಲಿ ರೋಗಿಯ ಸುರಕ್ಷತೆ, ನೈತಿಕತೆ ಹಾಗೂ ಸೇವಾ ಮನೋಭಾವವೇ ಅತ್ಯಂತ ಪ್ರಮುಖ ಮೌಲ್ಯಗಳಾಗಿದ್ದು, ವೈದ್ಯ-ರೋಗಿ ಸಂಬಂಧವು ಪರಸ್ಪರ ನಂಬಿಕೆ ಮತ್ತು ಜವಾಬ್ದಾರಿಯ ಆಧಾರದ ಮೇಲೆ ನಿರ್ಮಾಣವಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಮೂಡುಬಿದಿರೆಯ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮೂಡುಬಿದಿರೆ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೈದ್ಯರ ಸಮಸ್ಯೆಗಳಿಗೆ ಸಂಘಟನೆ ಅಗತ್ಯ: ಐಎಂಎ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಾ. ಟಿ.ಎ. ವೀರಭದ್ರಯ್ಯ ಮಾತನಾಡಿ, ವೈದ್ಯರಿಗೆ ಸಂಘಟನೆಯಿಂದ ವಿಮೆ, ಭದ್ರತೆ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳು ದೊರೆಯುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು ಐಎಂಎ ಸದಸ್ಯರಾಗುವ ಮೂಲಕ ಸಂಘವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.

ವೈದ್ಯರ ಜವಾಬ್ದಾರಿ ದೊಡ್ಡದು: ಕರ್ನಾಟಕ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ಸಂಸ್ಕೃತಿಗೂ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಮೂಡುಬಿದಿರೆಯನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬೆಳೆಸುವಲ್ಲಿ ಆಳ್ವಾಸ್ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ ಎಂದರು.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಹಭಾಗಿತ್ವ: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿ, ಆಳ್ವಾಸ್ ಸಂಸ್ಥೆಯು ಈಗಾಗಲೇ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಹಕಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಬೆಳ್ತಂಗಡಿಯಲ್ಲಿಯೂ ಇದೇ ರೀತಿಯ ಸಹಭಾಗಿತ್ವದ ನಿರೀಕ್ಷೆ ಇದೆ ಎಂದು ಹೇಳಿದರು.

ವೈದ್ಯರು ಎದುರಿಸುತ್ತಿರುವ ಸವಾಲುಗಳಿಗೆ ಒಗ್ಗಟ್ಟು ಅಗತ್ಯ: ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಅಧೀಕ್ಷಕ ಡಾ. ಡಿ.ಎಸ್. ಶಿವಪ್ರಕಾಶ್ ಮಾತನಾಡಿ, ವೈದ್ಯರು ಸವಾಲುಗಳನ್ನು ಒಗ್ಗಟ್ಟಿನಿಂದ ಎದುರಿಸಿ ವೈದ್ಯಕೀಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಮೂಡುಬಿದಿರೆಯಲ್ಲಿ ಐಎಂಎಯ 183ನೇ ಘಟಕ ಸ್ಥಾಪನೆ: ಐಎಂಎ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಮೂಡುಬಿದಿರೆಯಲ್ಲಿ ಐಎಂಎಯ 183ನೇ ಘಟಕ ಸ್ಥಾಪನೆಯಾಗುತ್ತಿರುವುದು ಸಂತಸದ ಸಂಗತಿ ಎಂದರು.

ಐಎಮ್‌ಒ ಕರ್ನಾಟಕ ಘಟಕ ವಿಭಾಗೀಯ ಸಂಯೋಜಕ ಡಾ. ಜಿ.ಕೆ. ಭಟ್ ಮಾತನಾಡಿ, ವೈದ್ಯರು ಒಟ್ಟಾಗಿ ತಮ್ಮ ವೃತ್ತಿಯ ಗೌರವ ಹಾಗೂ ಏಳಿಗೆಗಾಗಿ ಶ್ರಮಿಸಬೇಕು ಎಂದರು.

ವೈದ್ಯರ ಸನ್ಮಾನ: ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಡಾ. ಪ್ರಭಾಚಂದ್ರ ಜೈನ್, ಡಾ. ಕೆ.ಆರ್. ಜೋಯಿಷಿ, ಡಾ. ಜಯಗೋಪಾಲ್ ತೊಳ್ಪಾಡಿ ಹಾಗೂ ಡಾ. ಲೀಲಾ ಎಸ್. ಭಟ್, ಡಾ ಪ್ರದೀಪ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮೂಡುಬಿದಿರೆಯ ಚೊಚ್ಚಲ ಐಎಂಎ ಘಟಕದ ನೂತನ ಪದಾಧಿಕಾರಿಗಳಿಗೆ ಪದಗ್ರಹಣದ ಬ್ಯಾಡ್ಜ್‌ ಧ್ವಜವಂದನೆಯನ್ನು ನೆರೆವೇರಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಮಹಾಬಲ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಶಮಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಡಾ. ಆಶೀಶ್ ಶರ್ಮ ವಂದಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಘಟಕದ ಕೋಶಾಧಿಕಾರಿ ಡಾ. ದಿಲೀಪ್ ಕುಮಾರ್ ಪ್ರತಿಜ್ಞಾವಿಧಿ ಧ್ವಜವಂದನೆಯನ್ನು ನೆರೆವೇರಿಸಿದರು. ಡಾ ಮೀನಾ ಕಿರಣ್ ಸನ್ಮಾನಿತರರನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಹರೀಶ್ ದೇಲಂತಬೆಟ್ಟು, ಡಾ. ಮೋಹನ್ ಅಪ್ಪಾಜಿ, ಡಾ. ಅವಿನ್ ಆಳ್ವ, ಡಾ. ವೆಂಕಟಾಚಲಪತಿ, ಡಾ. ವಿನಯ ಆಳ್ವ, ವಿವೇಕ್ ಆಳ್ವ, ಡಾ ಹನ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂತನ ಮನೆಗೆ ಎಂ.ಬಿ. ಪಾಟೀಲರ ಹೆಸರಿಟ್ಟ ರೈತ
ಲೋಕ್ ಅದಾಲತ್‌; ಪ್ರಕರಣ ಇತ್ಯರ್ಥದಲ್ಲಿ ರಾಜ್ಯದಲ್ಲೇ ವಿಜಯಪುರಕ್ಕೆ 2ನೇ ಸ್ಥಾನ