ಕನ್ನಡಪ್ರಭ ವಾರ್ತೆ ವಿಜಯಪುರ

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ ಹಿರೇಮಠ ಕುಟುಂಬದ ಸಹೋದರರು ನೀರಾವರಿ ಕ್ರಾಂತಿಯ ಮೂಲಕ ಬರದ ನಾಡಿನಲ್ಲಿ ರೈತರ ಬಾಳು ಬಂಗಾರವಾಗಲು ಕಾರಣರಾದ ನೆಚ್ಚಿನ ನಾಯಕ ಎಂ.ಬಿ. ಪಾಟೀಲರ ಹೆಸರನ್ನು ಕಟ್ಟಿಸಿದ ಹೊಸ ಮನೆಗೆ ನಾಮಕರಣ ಮಾಡಿ, ಅದ್ಧೂರಿಯಾಗಿ ವಾಸ್ತು ಶಾಂತಿ ಮತ್ತು ಗೃಹ ಪ್ರವೇಶ ಪೂಜೆ ಮಾಡಿದ್ದಾರೆ.ಹಿರೇಮಠ ಸಹೋದರರಾದ ಸಿದ್ದಯ್ಯ, ಸಾತಯ್ಯ, ಬಸಯ್ಯ ಹಾಗೂ ಮಲ್ಲಯ್ಯ ಅವರು ನಗರದ ಅಥಣಿ ರಸ್ತೆಯಲ್ಲಿರುವ ರಾಜಕುಮಾರ ಲೇಔಟ್‌ನ ಸುವರ್ಣ ನಗರದಲ್ಲಿ ಬೃಹತ್ ಮನೆ ನಿರ್ಮಿಸಿದ್ದು, ಈ ಮನೆಗೆ ತಮ್ಮ ಬಾಳು ಹಸನಾಗಲು ಕಾರಣರಾದ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರ ಹೆಸರನ್ನು ನಾಮಕರಣ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಹಿರೇಮಠ ಸಹೋದರರು, ಸೋಮದೇವರಹಟ್ಟಿಯಲ್ಲಿ ನಮ್ಮ ಕುಟುಂಬಕ್ಕೆ ಸೇರಿದ 40 ಎಕರೆ ಜಮೀನಿದೆ. ಒಣಬೇಸಾಯ ಮಾಡುತ್ತಿದ್ದ ನಮಗೆ 2013-18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾದ ಎಂ.ಬಿ. ಪಾಟೀಲರು ಕೈಗೊಂಡ ಜಲಕ್ರಾಂತಿಯಿಂದಾಗಿ ನಮ್ಮ ಹೊಲಗಳಿಗೆ ನೀರು ಬಂತು. ಪರಿಣಾಮ ನಾವು ಉತ್ಕೃಷ್ಠವಾದ ದ್ರಾಕ್ಷಿ ಬೆಳೆದು 100 ಟನ್ ಒಣ ದ್ರಾಕ್ಷಿ ಮಾಡಿದ್ದು, ಎರಡು ವರ್ಷಗಳ ಹಿಂದೆ ಒಣದ್ರಾಕ್ಷಿ ₹1.50 ಕೋಟಿ ಇದ್ದ ಆದಾಯ ಈಗ ₹4 ಕೋಟಿಗೆ ತಲುಪಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗಲು ಆಧುನಿಕ ಭಗೀರಥ ಎಂ.ಬಿ. ಪಾಟೀಲರೇ ಕಾರಣವಾಗಿದ್ದಾರೆ. ಹಾಗಾಗಿ ಅವರ ಹೆಸರು ಕೇವಲ ನಮ್ಮ ಮನಸ್ಸಿನಲ್ಲಿ ಮಾತ್ರವಲ್ಲದೆ ನಮ್ಮ ನೂತನ ಮನೆಗೆ ಶ್ರೀ ಎಂ.ಬಿ.ಪಾಟೀಲ ನಿಲಯ ಎಂದು ಹೆಸರು ಇಟ್ಟಿದ್ದೇವೆ ಎಂದು ಹೇಳಿದರು.

ಮನೆಯ ವಾಸ್ತು ಶಾಂತಿ ಮತ್ತು ಗೃಹಪ್ರವೇಶಕ್ಕೆ ಆಗಮಿಸಿದ ವಿಧಾನ ಪರಿಷತ್‌ ಶಾಸಕ ಸುನೀಲಗೌಡ ಪಾಟೀಲ, ಕರ್ನಾಟಕ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ಸ್ ಅಧ್ಯಕ್ಷ ಧ್ರುವ ಎಂ. ಪಾಟೀಲ, ಮುಖಂಡರಾದ ಡಾ.ಮಹಾಂತೇಶ ಬಿರಾದಾರ, ರಾಜಕುಮಾರ ಕುಮಾನಿ, ಜಕ್ಕಪ್ಪ ಯಡವೆ, ಗುರು ಮಾಳಿ, ಸೋಮನಾಥ ಬಾಗಲಕೋಟ, ವಿ.ಎಸ್. ಪಾಟೀಲ ಮುಂತಾದವರು ಹಿರೇಮಠ ಸಹೋದರರಿಗೆ ಶುಭ ಹಾರೈಸಿದರು.

ರೈತರ ಹೆಮ್ಮೆಯ ಕಾರ್ಯದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ. ಪಾಟೀಲ, ಅನ್ನದಾತನ ಕನಸಿನ ಮನೆಯ ಮೇಲೆ ನನ್ನ ಹೆಸರು ಹಾಕಿದ್ದಾರೆ. ಇದು ನನಗೆ ಸಿಕ್ಕ ಅಪೂರ್ವ ಗೌರವ. ಈ ಸುದ್ದಿ ನನ್ನನ್ನು ಭಾವುಕವಾಗಿಸಿದೆ. ಇದು ಕೇವಲ ನಾಕರವಲ್ಲ, ರೈತರ ಪ್ರೀತಿ, ವಿಶ್ವಾಸ ಮತ್ತು ಕೃತಜ್ಞತೆಯ ಸಂಕೇತ. ನಾವು ಮಾಡಿದ ಕೆಲಸವನ್ನು ಮರೆಯುವವರೇ ಹೆಚ್ಚು ಎನ್ನುವ ಕಾಲದಲ್ಲಿ, ನಮ್ಮ ರೈತರು ಮಾತ್ರ ತಾವು ಬೆಳೆದ ಹಣ್ಣು, ತರಕಾರಿ, ಹಾಲು ತಂದು ಪ್ರೀತಿಯಿಂದ ಕೊಡುತ್ತಾರೆ. ಈಗ ತಮ್ಮ ಕನಸಿನ ಮನೆಗೂ ನನ್ನ ಹೆಸರಿಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.


- ಎಂ.ಬಿ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರು