ಕನ್ನಡಪ್ರಭ ವಾರ್ತೆ ವಿಜಯಪುರ

ಸತ್ತವರ ಹೆಸರಿನಲ್ಲಿ ಮತ ಚಲಾಯಿಸಿರುವ ನಗರದ ಕಾಂಗ್ರೆಸ್‌ ಮುಖಂಡರಿಗೆ ಭಯವಾಗಿದ್ದು, ಗೂಂಡಾಗಿರಿ ಮಾಡುತ್ತಿದ್ದಾರೆ. ಎಸ್‌ಐಆರ್‌ ಆಗುವುದರಿಂದ ಸತ್ತವರ ಹಾಗೂ ಹೊರಗಿನಿಂದ ಬಂದವರ ಮತಗಳು ಡಿಲಿಟ್ ಆಗಲಿವೆ. ಹಾಗಾಗಿ ಕಾಂಗ್ರೆಸ್‌ ಮುಖಂಡರು ಅಡ್ಡಿ ಮಾಡುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದರು.

ಎಸ್‌ಐಆರ್‌ ಪ್ರಕ್ರಿಯೆ ವೇಳೆ ಶನಿವಾರ ಸಂಜೆ ಶಾಸಕ ಯತ್ನಾಳರ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ನಡೆದ ವಾಗ್ವಾದದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅವರ್ಯಾಕೆ ಬಂದ್ರು ಇವರ್ಯಾಕೆ ಬಂದ್ರು ಎಂದು ಪ್ರಶ್ನಿಸಲು ಅವರ್ಯಾರು?. ಯಾರಿಗಾದರೂ ಎಸ್‌ಐಆರ್‌ ಫಾರ್ಮ್‌ ತುಂಬುವುದು ಗೊತ್ತಿರದಿದ್ದರೆ ಗೊತ್ತಿದ್ದವರು ತಿಳಿಸಿದರೆ ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದ ಅವರು, ಹಿಂದೂಗಳ ಏರಿಯಾದಲ್ಲಿ ಬಂದು ಸರಿಯಾಗಿ ಎಸ್‌ಐಆರ್‌ ಆಗದಂತೆ ಮಾಡುವುದು, ಗೂಂಡಾಗಿರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದೂಗಳು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನಾಳೆಯಿಂದ ನಾನೇ ನಗರದಲ್ಲಿ ಸಂಚರಿಸಲಿದ್ದೇನೆ. ಅಧಿಕಾರವಿಲ್ಲದ ಪಾಲಿಕೆ ಮಾಜಿ ಸದಸ್ಯ ಬಿಎಲ್‌ಒ ಗಳ ಸಭೆ ನಡೆಸಲು ಅಧಿಕಾರ ನೀಡಿದವರು ಯಾರು?. ಅನಧಿಕೃತವಾಗಿ ಸಭೆ ನಡೆಸಿದ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ಸಭೆ ನಡೆಸಿದ ಅಬ್ದುಲ್‌ ರಜಾಕ್ ಹೊರ್ತಿ ಮೇಲೆ ಹಾಗೂ ಆತನಿಗೆ ಪ್ರಚೋದಿಸಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಬೇಕು. ಶಾಸಕನಾಗಿರುವ ನನಗೆ ಬಿಎಲ್‌ಒ ಗಳ ಸಭೆ ನಡೆಸಲು ಅವಕಾಶವಿದ್ದರೆ ಅನುಮತಿ ನೀಡಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಜಿಲ್ಲಾಧಿಕಾರಿಗೆ ಹಾಗೂ ನಗರ ಚುನಾವಣಾಧಿಕಾರಿಯಾಗಿರುವ ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.