---------ಕನ್ನಡಪ್ರಭ ವಾರ್ತೆ ನಂಜನಗೂಡುವಿ. ಶ್ರೀನಿವಾಸಪ್ರಸಾದ್ ಅವರು ಸಾಮಾಜಿಕ ನ್ಯಾಯದ ಹರಿಕಾರರು ಜೊತೆಗೆ ಯಾವುದೇ ಕಪ್ಪುಚುಕ್ಕೆ ಇಲ್ಲದ ನಿಷ್ಕಳಂಕ ರಾಜಕಾರಣಿಯಾಗಿದ್ದು, ಇತರ ರಾಜಕಾರಣಿಗಳಿಗೆ ಅವರ ವ್ಯಕ್ತಿತ್ವ ಪ್ರೇರಣೆಯಾಗಿದೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಿ. ಚಿಕ್ಕರಂಗನಾಯಕ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಆಯೋಜಿಸಿದ್ದ ವಿ. ಶ್ರೀನಿವಾಸ ಪ್ರಸಾದ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.ವಿ. ಶ್ರೀನಿವಾಸ ಪ್ರಸಾದ್ ಅವರು 50 ವರ್ಷ ಗಳ ರಾಜಕೀಯ ಜೀವನದಲ್ಲಿ ಎಲ್ಲ ವರ್ಗಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಿ ಎಲ್ಲ ವರ್ಗದ ನಾಯಕರಾಗಿ ಹೊರಹೊಮ್ಮಿದ್ದವರು, ನಂಜಗೂಡು ಪುರಸಭೆಗೆ ಪೌರಕಾರ್ಮಿಕರನ್ನು ಆಯ್ಕೆಮಾಡಿದ್ದು, ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಉದಾಹರಣೆಗೆ ಕೇಂದ್ರ ಸಚಿವರಾಗಿ, ರಾಜ್ಯ ಕಂದಾಯ ಸಚಿವರಾಗಿ ಅಭಿವೃದ್ದಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಹಿಂದುಳಿದವರು, ದಲಿತರು, ಶೋಷಿತರ ಪರವಾದ ಗಟ್ಟಿಧ್ವನಿಯಾಗಿದ್ದ ಪ್ರಸಾದ್ ಎಂದಿಗೂ ಕೂಡ ತತ್ವ ಆದರ್ಶಗಳಲ್ಲಿ ರಾಜಿ ಮಾಡಿಕೊಳ್ಳದ ರಾಜಕಾರಣಿ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ತಕ್ಷಣವೇ ಪಕ್ಷಬಿಟ್ಟು ಹೋರಾಟಕ್ಕೆ ನಿಂತು ಎದುರಾಳಿಗಳನ್ನು ಮಣ್ಣುಮುಕ್ಕಿಸುತ್ತಿದ್ದರು. ಅವರು ಹೋದ ಪಕ್ಷಗಳಿಗೆ ಅವರು ಆಸ್ತಿಯಾಗಿದ್ದರು. ಡಿ.ಟಿ. ಜಯಕುಮಾರ್ ಅವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಪ್ರಸಾದ್ ಅವರು ಡಿ.ಟಿ. ಜಯಕುಮಾರ್ ಸಚಿವರಾಗಲೂ ಕಾರಣೀಭೂತರಾಗಿದ್ದರು. ಅವರ ಅಗಲಿಕೆ ಕೇಂದ್ರ ಹಾಗೂ ರಾಜ್ಯ ರಾಜಕಾರಣಕ್ಕೆ ವಿಶೇಷವಾಗಿ ಶೋಷಿತ ವರ್ಗಕ್ಕೆ ತುಂಬಲಾರದ ನಷ್ಟ ಎಂದರು.ತಾಲೂಕು ಕಸಾಪ ಅಧ್ಯಕ್ಷೆ ಲತಾ ಮೋಹನ್ ಮಾತನಾಡಿ, ವಿ. ಶ್ರೀನಿವಾಸ ಪ್ರಸಾದ್ ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ ಸಹ ಅವರ ಅಭಿವೃದ್ದಿ ಕೆಲಸಗಳು ಜೀವಂತವಾಗಿವೆ. ಅವರು ಎಂದಿಗೂ ಕೂಡ ದೀನ ದಲಿತರ ಪರವಾಗಿ, ಶೋಷಿತರ ಪರವಾಗಿ ಯೋಚನೆ ಮಾಡುತ್ತಿದ್ದರು. ಅಲ್ಲದೆ ಪ್ರತಿಯೊಂದು ಸಮುದಾಯಕ್ಕೂ ಕೂಡ ತಮ್ಮದೇ ಆದಕೊಡುಗೆಗಳನ್ನು ನೀಡುವ ಮೂಲಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದವರು. ಅವರು ಇನ್ನಷಟು ಕಾಲ ಬದುಕಿ ಯುವಕರಿಗೆ ಮಾರ್ಗದರ್ಶನ ನೀಡಬೇಕಿತ್ತು ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಕಸಾಪ ಕಾರ್ಯದರ್ಶಿ ಎಂ.ಕೆ. ಮಂಜುನಾಥ್, ಎಂ. ರಂಗಸ್ವಾಮಿ, ಪ್ರಭಾಕರ್, ಶೋಭಾ, ಸಿ.ಎಂ. ಮಂಜುಳಾ, ಸತೀಶ್ ದಳವಾಯಿ, ಮಂಜುಳಾ ಅರಸ್, ತಾಲೂಕು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸಿದ್ದರಾಜು ಇದ್ದರು.--