ಹಾವೇರಿ: ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರ ಇದೆ. ಈಗ ಧರ್ಮ, ಜಾತಿ, ಮಂದಿರ ಹಾಗೂ ಮಾಂಗಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಚಿತ್ರನಟ ಪ್ರಕಾಶ ರೈ ಹೇಳಿದರು.
ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟದಿಂದ ಬುಧವಾರ ಇಲ್ಲಿ ಆಯೋಜಿಸಿದ್ದ ಮೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ನಾಯಕರು ರಾಜರಂತೆ ಓಡಾಡುತ್ತಿದ್ದಾರೆ. ಈಗಿನ ಮಹಾಪ್ರಭು ಕೈ ಮಾಡಿಕೊಂಡು ಓಡಾಡುತ್ತಿದ್ದಾರೆ. ಪುಷ್ಪಕ ವಿಮಾನದಲ್ಲಿ ಓಡಾಡುತ್ತಿದ್ದಾರೆ. ನಮ್ಮನ್ನು ಸ್ಪರ್ಶಿಸದ ವ್ಯಕ್ತಿ ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಾರಾ? ಎಂದು ಪ್ರಧಾನಿ ಮೋದಿ ಹೆಸರು ಉಲ್ಲೇಖಿಸದೇ ಟೀಕಿಸಿದರು.
ಕೇಂದ್ರ ಸರ್ಕಾರದಿಂದ ಉದ್ಯೋಗದ ಗ್ಯಾರಂಟಿ ಇಲ್ಲ. ಕಳಪೆ ಮಟ್ಟದ ಆಹಾರ ನೀಡುತ್ತಿದೆ. ಎಲ್ಲ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಹಚ್ಚಲಾಗುತ್ತಿದೆ. ಆಗಾಗ ಬಿಟ್ಟಿ ಭಾಗ್ಯ ಕೊಡುವುದು, ಮುಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಬೆಂಬಲ ಬೆಲೆ ಕೇಳಿದರೆ ರಸ್ತೆ ಅಗೆದು , ವಾಟರ್ ಗನ್ ಹೊಡೆಯುತ್ತಾರೆ. ಈ ಬಗ್ಗೆ ಮಾತನಾಡಿದರೆ ತುಕಡೇ ತುಕಡೇ ಗ್ಯಾಂಗ್ ಅಂತಾರೆ. ಚುನಾವಣೆಯ ಚಾಣಕ್ಯ ಈ ಬಗ್ಗೆ ಮಾತನಾಡಲಿ? ಎಂದು ಸವಾಲು ಹಾಕಿದರು.ಹಾಸನದಲ್ಲಿ ಒಬ್ಬ ವಿಕೃತ ಕಾಮಿ ಇದ್ದಾನೆ. 2800 ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಈ ಚುನಾವಣೆಯಲ್ಲಿ ಮಹಾಪ್ರಭುವನ್ನು ಕೆಳಗಡೆ ಇಳಿಸಬೇಕು. ನಾನು ಯಾವ ಪಕ್ಷದವನೂ ಅಲ್ಲ. ನಾನು ನಿಮ್ಮ ಪಕ್ಷದವನು. ಮಾಧ್ಯಮ ಮತ್ತು ನಾವು ಒಂದೇ ವಿರೋಧ ಪಕ್ಷದವರು. ಯಾವುದೇ ಸರ್ಕಾರ ಇದ್ದರೂ ನಾವು ವಿರೋಧ ಪಕ್ಷದವರು ಎಂದರು.
ಅಖಿಲ ಭಾರತ ಕಾರ್ಮಿಕ ಒಕ್ಕೂಟದ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಅಕ್ಷತಾ ಕೆ.ಸಿ., ಎಂ.ಎನ್. ನಾಯಕ, ಬಸವರಾಜ ಹಾದಿಮನಿ ಇತರರು ಇದ್ದರು.