ಬಾಗಲಕೋಟೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇದಕ್ಕೆ ನಿದರ್ಶನ ಎಂಬಂತೆ ಹಲವು ಘಟನೆಗಳು ಸಾಕ್ಷಿಕರಿಸಿವೆ. ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕು ಮುದಗಲ್ಲನಲ್ಲಿ ದಲಿತ ವ್ಯಕ್ತಿ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಕುಟುಂಬದವರು ದಲಿತ ಮೇಲೆ ದೌರ್ಜನ್ಯ ಮಾಡಿದ್ದಾರೆ. ನಂತರ ಅವರ ಕಾಲೋನಿಗೆ ಹೋಗಿ ದಾಂಧಲೆ ಮಾಡಿದ್ದಾರೆ. ಹಲ್ಲೆಕೋರರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗಟ್ಟಿದೆ ಎಂದು ದೂರಿದರು.
ಬಜೆಟ್ ನಲ್ಲಿ ಎಸ್ಎಪಿ, ಟಿಎಸ್ಪಿಗೆ ಶೇ.24 ಅನುದಾನ ಮೀಸಲಿಟ್ಟಿದ್ದನ್ನು ಬಳಕೆ ಮಾಡಿದ್ದಾರೆ. ನಿಜವಾಗಿ ರಾಜ್ಯ ಸರ್ಕಾರದ ಮೇಲೆ ಪ್ರಕರಣ ದಾಖಲಿಸಬೇಕು. ಮೇಲ್ನೂಟಕ್ಕೆ ಮಾತ್ರ ದಲಿತರ ಕಾಳಜಿ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಸುಖಾಸುಮ್ಮನೆ ಬಿಜೆಪಿ ವಿರುದ್ಧ ಬೊಟ್ಟು ಮಾಡುತ್ತಿದೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ತೀವ್ರ ಬರ ಕಾಡುತ್ತಿದೆ. ಜನ, ಜಾನುವಾರು ತತ್ತರಿಸಿ ಹೋಗಿವೆ. ಹಳ್ಳಿ ಜನರು ಗುಳೇ ಹೊರಟ್ಟಿದ್ದಾರೆ. ಅವರ ನೆರವಿಗೆ ಧಾವಿಸಬೇಕಾದ ಸರ್ಕಾರ ನಿಷ್ಕ್ರಿಯಗೊಂಡಿದೆ. ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಏನೇನೋ ಮಾತನಾಡುತ್ತಿದ್ದಾರೆ ಎಂದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸಿ ಜೀವ ಉಳಿಸಿದ್ದಾರೆ. 130 ಕೋಟಿ ಭಾರತೀಯರ ಜೀವ ರಕ್ಷಣೆಯಾಗಿದೆ. ಈ ಬಾರಿ ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬರುವುದು ನಿಶ್ಚಿತ. 5ನೇ ಬಾರಿ ಪಿ.ಸಿ.ಗದ್ದಿಗೌಡರ ಗೆಲವು ನಿಶ್ಚಿತ ಎಂದು ಹೇಳಿದ ಅವರು, ಪ್ರಜ್ವಲ್ ರೇವಣ್ಣ ವಿಷಯ ವೈಯಕ್ತಿಕ. ಯಾರೇ ತಪ್ಪು ಮಾಡಿದರೂ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮುಖಂಡರಾದ ಬಸವರಾಜ ಯಂಕಂಚಿ, ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ ಇತರರು ಇದ್ದರು.ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಮಗೆ ರಾಷ್ಟ್ರಧರ್ಮ ಮುಖ್ಯ. ರಾಷ್ಟ್ರದ ಹಿತ ಮುಖ್ಯ. ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಸಮಸ್ತ ಹಿಂದು ಸಮಾಜವು ರಾಷ್ಟ್ರ ಧರ್ಮ ಪಾಲನೆ ಮಾಡಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸಲು ಪಣತೊಡಬೇಕು.
-ವೀರಣ್ಣ ಚರಂತಿಮಠ ಮಾಜಿ ಶಾಸಕ