ವಿದೇಶದಲ್ಲಿ ಉದ್ಯೋಗ ವ್ಯಾಮೋಹ ಕುರಿತು ಬೀದಿ ನಾಟಕ ಪ್ರದರ್ಶನ

KannadaprabhaNewsNetwork |  
Published : Jun 08, 2024, 12:34 AM IST
ಃ7ಕೆಡಿವಿಜಿ33, 34ಃದಾವಣಗೆರೆಯ ರಾಂ ಅಂಡ್ ಕೋ ಸರ್ಕಲ್‌ನಲ್ಲಿ ದವನ್ ಕಾಲೇಜು ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗ ವ್ಯಾಮೋಹ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.  | Kannada Prabha

ಸಾರಾಂಶ

ದಾವಣಗೆರೆಯ ರಾಂ ಅಂಡ್ ಕೋ ಸರ್ಕಲ್‌ನಲ್ಲಿ ದವನ್ ಕಾಲೇಜು ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗ ವ್ಯಾಮೋಹ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು ವಿಚಾರಿಸಿ ಯೋಚಿಸಿದಾಗ ವಿಷಯ ತಿಳಿವುದು. ಹೀಗೆ ಬೋರ್ಗರೆದ ದನಿ ಇಂದು ನಗರದ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ನೆರೆದಿದ್ದವರ ಮನಕ್ಕೆ ನಾಟಿತು.

ನಗರದ ದವನ್ ಕಾಲೇಜು ವಿದ್ಯಾರ್ಥಿಗಳು ಇತ್ತಿಚೆಗೆ ಇಲ್ಲಿನ ಹರಳೆಣ್ಣೆ ಕೊಟ್ರಬಸಪ್ಪ ಸರ್ಕಲ್ (ರಾಮ್ ಅಂಡ್ ಕೋ ಸರ್ಕಲ್)ನಲ್ಲಿ ಬೀದಿನಾಟಕ ಮಾಡುವ ಮೂಲಕ ಇಂದಿನ ಯುವ ಪೀಳಿಗೆಯಲ್ಲಿ ಅದರಲ್ಲೂ ವಿದೇಶ ವ್ಯಾಮೋಹದಿಂದ ದೇಶ ತೊರೆಯಲು ಹಾತೊರೆಯುವವರ ಮನ ಮಿಡಿಯುವಂತೆ ಬೀದಿ ನಾಟಕವನ್ನು ಪ್ರಸ್ತುತಪಡಿಸಿದರು.

ದಿಢೀರನೇ ಶ್ರೀಮಂತನಾಗಬೇಕೆನ್ನುವ ಹವಣಿಕೆಗೆ, ವಿದೇಶಿ ಕಂಪನಿಗಳಲ್ಲಿ ಪ್ರಕಟಿಸುವ ಸೌಲಭ್ಯ ಮತ್ತು ಪ್ಯಾಕೇಜ್‌ಗೆ ಮಾರುಹೋದ ಯುವಕನೊಬ್ಬ ತನ್ನ ತಾಯಿಯ ಬಳಿ ವಿದೇಶದಲ್ಲಿ ನೌಕರಿ ಮಾಡುವ ಆಸೆಯನ್ನು ಹೇಳಿಕೊಳ್ಳುವ ಮತ್ತು ಇದಕ್ಕಾಗಿ ಮಧ್ಯಮ ವರ್ಗದ ಆ ಕುಟುಂಬ ಇತರರೆಡಯಿಂದ ಸಾಲ ಮಾಡಿ ಮಗನನ್ನು ವಿದೇಶಕ್ಕೆ ಕಳಿಸುವ ಸನ್ನಿವೇಶ ಮನ ಕಲಕುವಂತಿತ್ತು. ಮಗ ವಿದೇಶದಲ್ಲಿ ನೆಲೆಗೊಂಡ ನಂತರ ಮಗನೊಂದಿಗೆ ಮಾತನಾಡಲು ಆತನ ಸ್ನೇಹಿತನ ಮೊಬೈಲಿನಿಂದ ಮಾತನಾಡುವ ತಾಯಿ, ಕೆಲಸದ ಒತ್ತಡದಲ್ಲಿ ಸಿಡುಕುವ ಮಗ, ತಾಯಿಯ ಕ್ಷೇಮ-ಸಮಾಚಾರಕ್ಕೆ ಸ್ಪಂದಿಸದಿದ್ದಾಗ ಹಾಸಿಗೆ ಹಿಡಿದು ಒಂದು ದಿನ ಸಾವನ್ನಪ್ಪುತ್ತಾಳೆ. ಸ್ನೇಹಿತನಿಂದ ತಾಯಿಯ ಅಗಲಿಕೆಯ ಸುದ್ದಿ ತಿಳಿದ ಮಗನಿಗೆ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ತಾನು ದುಡಿಯುತ್ತಿರುವ ಕಂಪನಿ ನಿರಾಕರಿಸಿದಾಗ ತನ್ನ ದೇಶ, ಭಾಷೆ, ಸಂಸ್ಕೃತಿಯನ್ನು ಬಿಟ್ಟು ಅನ್ಯ ದೇಶದಲ್ಲಿ ಬಂದು ತಪ್ಪು ಮಾಡಿದೆ ಎಂಬ ಭಾವ ಮೊಳೆಯುತ್ತದೆ. ಇಂತಹ ಒಂದು ಬೀದಿ ನಾಟಕ ಆಡಿದ ವಿದ್ಯಾರ್ಥಿಗಳು ತಾವು ಹೇಳಬೇಕೆಂದಿರುವ ವಿಷಯವನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

ಬೀದಿ ನಾಟಕದಲ್ಲಿ ಬಿಬಿಎ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ದವನ್ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ್ದರು. ಈ ಒಂದು ಬೀದಿ ನಾಟಕಕ್ಕೆ ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ನೆರೆದಿದ್ದವರಿಂದ ಉತ್ತಮ ಪ್ರತಿಕ್ರಿಯೆ ಮೂಡಿಬಂದಿತು.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಸುಹಾಸ್, ಕಲ್ಲೇಶ, ಭರತ್, ಶ್ರೀರಕ್ಷಾ, ಗಂಗಮ್ಮ, ನೇಹಾ, ಉಲ್ಲಾಸ್, ಪೂರ್ಣ ಚಂದ್ರ, ತಿಲಕ್, ಶಶಾಂಕ್, ಅಭಿಜಿತ್, ತರಗತಿ ಪ್ರತಿನಿಧಿಗಳಾದ ಶ್ರೇಯಾ ಎಸ್.ರೇವಣಕರ್, ಹರನ್ ಸುರ್ವೆ, ಮೊಹಮ್ಮದ್ ರಿಜ್ವಾನ್, ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌