ಸ್ವಾಸ್ಥ್ಯ ಸಂಕಲ್ಪ ವಿಶೇಷ ಉಪನ್ಯಾಸ ಕಾರ್ಯಕ್ರಮ
ಯುವ ಜನಾಂಗ ದುಶ್ಚಟದಿಂದ ಮುಕ್ತವಾದಲ್ಲಿ ಸದೃಢ ದೇಶ ಕಟ್ಟಲು ಸಾಧ್ಯ ಎಂದು ದೇಶಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಹೇಳಿದರು.
ಸಮಾಜಶಾಸ್ತ್ರ ವಿಭಾಗ ವೈಡಿಡಿ ಕಾಲೇಜು, ದೇಶಭಕ್ತರ ಬಳಗ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿಯಾಗಿ ಆಯೋಜಿಸಿದ ‘ಸ್ವಾಸ್ಥ್ಯ ಸಂಕಲ್ಪ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ವ್ಯಸನ ಮತ್ತು ವ್ಯಸನದಿಂದ ಮುಕ್ತಿ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯುವ ಜನಾಂಗ ಎಚ್ಚೆತ್ತುಕೊಂಡು ತಮ್ಮ ಜವಾಬ್ದಾರಿ ಅರಿತು ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿ ಅಭ್ಯಾಸ ಮಾಡಿಕೊಂಡರೆ ಇಂದಿನ ಮಕ್ಕಳೇ ಮುಂದಿನ ಸತ್ಪ್ರಜೆಗಳು ಎಂಬ ನುಡಿಯನ್ನು ಸಾಕ್ಷಾತ್ಕಾರಗೊಳಿಸಲು ಸಾಧ್ಯವಾಗುತ್ತದೆ. ಮಾದಕ ವ್ಯಸನದಲ್ಲಿ ವಿಪರೀತವಾಗಿ ಮೊಬೈಲ್ ಚಟ ಬೆಳೆಸಿಕೊಂಡಿರುವುದು ಹಲವರು ಮಾದಕ ಸಿರಪ್‌ಗಳನ್ನು ಕುಡಿಯುವುದು. ಮದ್ಯಪಾನ ಮಾಡುವುದು. ಸಿಗರೇಟ್ ಸೇವನೆ ಮುಂತಾದ ಚಟಗಳಿಂದ ದೂರವಿದ್ದಷ್ಟು ಮುಂದಿನ ಜೀವನವನ್ನು ಸಂತಸ, ಸಂಭ್ರಮ, ಉಲ್ಲಾಸಗಳಿಂದ ಕಳೆಯಬಹುದಾಗಿದೆ ಎಂದು ತಿಳಿಸಿದರು..
ದೇಶಭಕ್ತ ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ ಮೆಡಿಕಲ್ಸ್ ಮಹೇಶ್ ಮಾತನಾಡಿ, ದೇಶಭಕ್ತ ಬಳಗದಿಂದ ಇಂತಹ 10 ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಇನ್ನು ಮುಂದೆಯೂ ಇಂಥ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತೇವೆ ಎಂದು ತಿಳಿಸಿದರು.
ವೈಡಿಡಿ ಕಾಲೇಜ್ ಪ್ರಾಂಶುಪಾಲ ಮಹೇಶ್ ಮಾತನಾಡಿ, ಇನ್ನು ಮುಂದೆಯೂ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಇದೇ ರೀತಿಯ ಜವಾಬ್ದಾರಿಯುತ ಸಂಘಟನೆಗಳ ಮೂಲಕ ನಡೆಸಿಕೊಂಡು ಬರುತ್ತೇವೆ ಎಂದರು.
ದೇಶಭಕ್ತರ ಬಳಗ ಖಜಾಂಜಿ ಪ್ರಕಾಶ್ ಪವನ್ ಗ್ಲಾಸ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ, ವೈಡಿಡಿ ಕಾಲೇಜ್ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.