ಉತ್ತಮ ಶಿಕ್ಷಣದಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ: ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್

KannadaprabhaNewsNetwork |  
Published : Feb 28, 2025, 12:51 AM IST
ಕ್ಯಾಪ್ಷನ27ಕೆಡಿವಿಜಿ31, 32 ದಾವಣಗೆರೆಯ ಮಿಲ್ಲತ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್,  ಶಾಸಕ ಕೆ. ಎಸ್.ಬಸವಂತಪ್ಪ ಇತರರು ಇದ್ದರು. | Kannada Prabha

ಸಾರಾಂಶ

ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಯಶಸ್ಸು ಸಾಧಿಸಿದರೆ ಭಾರತ ದೇಶವು ಬಲಿಷ್ಠಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯತೆ ಇದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಮಿಲ್ಲತ್ ಕನ್ನಡ, ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಸಮಾರಂಭ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಯಶಸ್ಸು ಸಾಧಿಸಿದರೆ ಭಾರತ ದೇಶವು ಬಲಿಷ್ಠಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯತೆ ಇದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಬಾಷಾ ನಗರದ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಿಲ್ಲತ್ ಕನ್ನಡ, ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಾಸಕರು, ಸಚಿವರು, ಸಂಸದರು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತರೆ ದೇಶ ಬಲಿಷ್ಠಗೊಳ್ಳದು. ಅಧಿಕಾರಿಗಳು ಸಹ ಕಚೇರಿಯೊಳಗೆ ಇದ್ದು ಕಾರ್ಯನಿರ್ವಹಿಸಿದರೆ ಸಾಲದು. ಈಗಿನ ಮಕ್ಕಳ ವಿದ್ಯಾಭ್ಯಾಸ ಉತ್ಕೃಷ್ಟ ಗುಣಮಟ್ಟದ್ದಾದರೆ, ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಉನ್ನತ ಸಾಧನೆ ಮಾಡಿದಾಗ ಮಾತ್ರ ಭಾರತ ವಿಶ್ವಭೂಪಟದಲ್ಲಿ ಗುರುತಿಸುವಂತಾಗಲು ಸಾಧ್ಯ ಆಗುತ್ತದೆ ಎಂದು ಹೇಳಿದರು.

ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ನೀಡಿ. ಬಡತನ, ಹಣ ಇಲ್ಲ ಎಂಬ ಕಾರಣಕ್ಕೆ ಶಾಲೆಯಿಂದ ಬಿಡಿಸಬೇಡಿ. ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೇ ಸಾಯಬೇಕೆಂದೆನಿಲ್ಲ. ಸಾಧನೆ ಮಾಡಿ ನೀವೂ ಶ್ರೀಮಂತರಾಗಬಹುದು. ಇದಕ್ಕೆ ಕಠಿಣ ಓದು, ಉತ್ತಮ ಶಿಕ್ಷಣ ಪಡೆದರೆ ಸಾಧನೆ ಕಷ್ಟವಾಗದು. ಸ್ವಾಭಿಮಾನದ ಜೀವನ ಸಾಗಿಸಬೇಕಾದರೆ ಶಿಕ್ಷಣ ಬೇಕೇ ಬೇಕು. ಮನೆಯಲ್ಲಿನ ಕಷ್ಟ ನಿಮ್ಮ ಓದಿಗೆ ಅಡ್ಡಿಯಾಗಬಾರದು. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ, ಓದಿನತ್ತ ಹೆಚ್ಚಿನ ಗಮನ ಹರಿಸಿ. ಭವಿಷ್ಯದಲ್ಲಿ ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಉನ್ನತ ಸ್ಥಾನಕ್ಕೇರಲಿ. ಈ ಶಾಲೆ, ಪೋಷಕರು, ಶಿಕ್ಷಕರು, ದಾವಣಗೆರೆ ಕೀರ್ತಿ ಪತಾಕೆ ಹಾರಿಸುವಂಥ ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.

ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಸೈಫುಲ್ಲಾ ಅಧ್ಯಕ್ಷತೆವಹಿಸಿ ಮಾತನಾಡಿ, ಯು.ಟಿ.ಖಾದರ್ ಅವರ ವಿನಯತೆ, ಸರಳತೆ ಖುಷಿ ಕೊಟ್ಟಿದೆ. ವಿದ್ಯಾರ್ಥಿಗಳು ಓದಿನ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಶಿಕ್ಷಕರು ಹೇಳಿಕೊಟ್ಟ ಪಾಠ ಸರಿಯಾಗಿ ಆಲಿಸಿ, ಮನೆಯಲ್ಲಿ ಮನನ ಮಾಡಿದರೆ ಭವಿಷ್ಯದಲ್ಲಿ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಶಾಸಕ ಕೆ. ಎಸ್.ಬಸವಂತಪ್ಪ, ಕಾಂಗ್ರೆಸ್ ಮುಖಂಡ ಕೆ.ಚಮನ್ ಸಾಬ್, ಅಯೂಬ್ ಪೈಲ್ವಾನ್, ನಸೀರ್ ಅಹ್ಮದ್, ಮನ್ಸೂರ್ ಅಲಿ, ಶಾಲೆಯ ಆಡಳಿತಾಧಿಕಾರಿ ಸೈಯದ್ ಅಲಿ, ಸಂಸ್ಥೆಯ ಶಿಕ್ಷಣ ಸಂಯೋಜಕ ಸಿದ್ಧಪ್ಪ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ