ಕನ್ನಡಪ್ರಭ ವಾರ್ತೆ ರಾಮದುರ್ಗ
ಭಾರತ ಹಿಂದು ರಾಷ್ಟ್ರ. ಬಲಿಷ್ಠ ಭಾರತವನ್ನು ಇಬ್ಭಾಗ ಮಾಡಲು ಅಂತಾರಾಷ್ಟ್ರೀಯ ರಾಷ್ಟ್ರಮಟ್ಟದಲ್ಲಿ ಹುನ್ನಾರ ನಡೆಯುತ್ತಿದೆ. ಮುಂದುವರೆದ ಭಾಗವೇ ಲಂಬಾಣಿ ತಾಂಡೆಗಳಲ್ಲಿ ಮತಾಂತರ ನಿರಂರತವಾಗಿ ಜರುಗುತ್ತಿವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.ತಾಲೂಕಿನ ಓಬಳಾಪುರದಲ್ಲಿ ಮತಾಂತರ ನಡೆದಿದೆ ಎನ್ನಲಾದ ಪ್ರಕರಣದ ಹಿನ್ನೆಲೆಯಲ್ಲಿ ತಾಂಡಾ ಜನರಿಗೆ ಜಾಗೃತಿ ಸಭೆ ನಡೆಸಿ ಮಾತನಾಡಿದ ಅವರು, ಲಂಬಾಣಿಗಳು ಎಂದಿಗೂ ಪರರ ಹಂಗಿನಲ್ಲಿ ಬದುಕುವರಲ್ಲ. ಕೆಲವರನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಂಬಾಣಿಗಳು ಜಾಗರೂಕರಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ನಮ್ಮ ಮಕ್ಕಳು ಅಭಿವೃದ್ಧಿ ಹೊಂದುತ್ತಿದ್ದಾರೆ. ಅಂಥ ಸಂದರ್ಭದಲ್ಲಿ ಕೆಲವರು ಕುತಂತ್ರ ಎಸಗಿ ಒಂದು ಧರ್ಮವನ್ನು ಹಾಳು ಮಾಡಲು ಚಿಂತನೆ ನಡೆಸಿದ್ದಾರೆ. ಮತಾಂತರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಗ್ರಾಮಸ್ಥರು ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಪ ಆಮೀಷಕ್ಕೆ ಒಳಗಾಗಿ ನಮ್ಮ ಸಂಪ್ರದಾಯವನ್ನು ಮರೆಯಬಾರದು ಎಂದು ಕೋರಿದರು.ದೇಶದ ಆರ್ಥಿಕತೆಯನ್ನು ಹಾಳು ಮಾಡುವ ಉದ್ದೇಶದಿಂದ ಮತಾಂತರ ಮಾಡುವ ಮಷೀನರಿಗಳು ದೇಶದಲ್ಲಿ ನಿರಂತರವಾಗಿ ಶ್ರಮಿಸುತ್ತಿವೆ. ತಮ್ಮ ಬಂಡವಾಳ ಹೂಡಿಕೆ ಮತ್ತು ವ್ಯಾಪರವನ್ನು ಸ್ಥಿರವಾಗಿಟ್ಟುಕೊಳ್ಳಲು ಇಂಥ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ಮೂಲದ ಗುರುಪ್ರಸಾದ ಮಾತನಾಡಿ, ಲಂಬಾಣಿಗಳು ಹಿಂದು ಧರ್ಮದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡಿದ್ದಾರೆ. ಆಮೀಷಕ್ಕೆ ಒಳಗಾಗಿ ಧರ್ಮ ತೊರೆಯುವುದು ಸೂಕ್ತವಲ್ಲ. ಮತಾಂತರ ಹೊಂದಿದ್ದರೇ ನಮ್ಮತನವನ್ನು ಮಾಡಿಕೊಂಡಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮಹಾರಾಷ್ಟ್ರದ ಬಂಜಾರ ಯುವ ಬ್ರಿಗೇಡ್ ಅಧ್ಯಕ್ಷ ರವಿಕಾಂತ ರಾಠೋಡ ಮಾತನಾಡಿ, ಉಳಿದ ಜನಾಂಗದವರು ಬೇರೆ ಪ್ರದೇಶಗಳಿಗೆ ಹೋದರೆ ಅಲ್ಲಿನ ಭಾಷೆಗಳಿಗೆ ಒಗ್ಗಿಕೊಳ್ಳುತ್ತಾರೆ. ಅದರೆ, ಲಂಬಾಣಿಗಳು ದೇಶದ ಎಲ್ಲಿ ಹೋದರೂ ಅಲಿಖಿತ ಲಂಬಾಣಿ ಭಾಷೆಯನ್ನೇ ಮಾತನಾಡುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಧರ್ಮ ಬದಲಾಯಿಸುವುದು ಮಾತೃ ಧರ್ಮಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಗ್ರಾಮದ ಮುಖಂಡ ಸೋಮಪ್ಪ ಕಾರಬಾರಿ ಮಾತನಾಡಿ, ಗ್ರಾಮದಲ್ಲಿಯ ಮತಾಂತರದ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಜರುಗಿಸಲಿಲ್ಲ. ಹೀಗಾಗಿ ಮತಾಂತರ ಎಗ್ಗಿಲ್ಲದೇ ನಡೆಯುತ್ತಿದೆ. ಅಂಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಮುಖಂಡ ಚಂದು ಲಮಾಣಿ ಮಾತನಾಡಿ, ಹಿಂದು ಧರ್ಮದ ಹೆಸರಿನಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಈಗ ಮತಾಂತರವಾಗುವವರು ಸೌಲಭ್ಯಗಳನ್ನು ಸರ್ಕಾರಕ್ಕೆ ಮರಳಿಸಿ. ಮತಾಂತರ ಹೊಂದಿದರೇ ತಮ್ಮ ಅಭ್ಯಂತರವಿಲ್ಲ ಎಂದು ಅಸಮಧಾನ ಹೊರಹಾಕಿದರು.
ಪಿಎಸೈ ಸುನೀಲಕುಮಾರ ನಾಯ್ಕ, ಬಿಜೆಪಿಯ ಮಲ್ಲಣ್ಣ ಯಾದವಾಡ, ಡಾ.ಕೆ.ವಿ.ಪಾಟೀಲ ಇತರರು ಸಭೆಯಲ್ಲಿ ಇದ್ದರು.---------
ಕೋಟ್...ಮೊದಲಿಗೆ ಚಾಕಲೇಟ್, ಬಿಸ್ಕಟ್, ಊಟ, ಫೋಟೋ ನೀಡಿ ಸಲೀಗೆ ಬೆಳೆಸುತ್ತಾರೆ. ತಮ್ಮ ಧರ್ಮದ ಫೋಟೋ ಇಟ್ಟು ಪೂಜಿಸಲು ಸೂಚಿಸುತ್ತಾರೆ. ಇದರಿಂದ ನಮ್ಮ ಕುಲದೇವರ ಫೋಟೋ ಹೊರಗಿಡಲು ಸೂಚಿಸುವ ಅವರು ಗುಪ್ತವಾಗಿ ತಮ್ಮ ಧರ್ಮದ ಪ್ರಚಾರ ಮಾಡುತ್ತಿದ್ದಾರೆ. ಮತಾಂತರವಾದರೇ ನಮ್ಮ ರಕ್ತ ಸಂಬಂಧಗಳು ಕಳಚಿ ಹೋಗುತ್ತವೆ. ಇದರಿಂದ ಜಾಗೃತರಾಗಬೇಕು.
-ಪಿ.ರಾಜೀವ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ.