ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಜಿಲ್ಲೆಯಲ್ಲಿ ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯ ಮೂಲಕ ಅವರ ಆರೋಗ್ಯ ಜಾಗೃತಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಜವಾಬ್ದಾರಿ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬಳ್ಳಾರಿ(ನಗರ) ಹಾಗೂ ಗ್ರಾಮಾಂತರ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಗಾಂಧಿನಗರ ವಲಯದ ಸತ್ಯಸಾಯಿ ಕಾಲನಿ ಮತ್ತು ಗೊಲ್ಲ ನರಸಪ್ಪ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆರೋಗ್ಯವಂತ ಮಕ್ಕಳಿಂದ ದೇಶ ಸದೃಢವಾಗುತ್ತದೆ. ಗರ್ಭಿಣಿಯರಿಗೆ ರಾಷ್ಟ್ರೀಯ ಪೋಷಣ್ ಅಭಿಯಾನದ ಮೂಲಕ ಪೌಷ್ಟಿಕಾಂಶ ಭರಿತ ಆಹಾರ ನೀಡಲಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಪೋಷಣೆ ಅಭಿಯಾನ ಯೋಜನೆಯ ಅಂಗವಾಗಿ ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯನ್ನು ಪೋಷಣೆ ಮಾಸಾಚರಣೆ ಆಚರಿಸಲಾಗುತ್ತಿದ್ದು, ಇದರ ಉದ್ದೇಶ ಪೌಷ್ಠಿಕತೆ, ಕೈತೋಟದ ನಿರ್ಮಾಣ, ಅಪೌಷ್ಠಿಕ ಮಕ್ಕಳ ಗುರುತಿಸುವಿಕೆ ಮತ್ತು ಮಕ್ಕಳ ಪೂರಕ ಪೌಷ್ಠಿಕತೆಯ ಹಾಗೂ ರಕ್ತ ಹೀನತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.
ಬಳ್ಳಾರಿ ನಗರ ಮತ್ತು ಗ್ರಾಮಾಂತರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮೋಹನ್ ಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಈ ಒಂದು ವಾಕ್ಯ ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಆರೋಗ್ಯವಂತರಾಗಿ ಇರಬಹುದು ಎಂದರು.
ಈ ಸಂದರ್ಭ ಶಿಶು ಅಭಿವೃದ್ಧಿ ಯೋಜನೆ ಬಳ್ಳಾರಿ (ನಗರ)ದ ಎಂಟು ವೃತ್ತಗಳಾದ ಬಂಡಿಹಟ್ಟಿ, ಕೌಲ್‌ಬಜಾರ್, ಬ್ರೂಸ್‌ಪೇಟೆ, ಗಾಂಧಿನಗರ, ದೇವಿನಗರ, ಗುಗ್ಗರಹಟ್ಟಿ, ಮರಿಸ್ವಾಮಿ ಮಠ, ಮಿಲ್ಲರಪೇಟೆ ವಲಯದ ಎಲ್ಲಾ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಪೋಷಣೆ ಅಭಿಯಾನ ಸಿಬ್ಬಂದಿಗಳು ಮತ್ತು ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.