ಫೋನ್‌-ಇನ್‌ನಲ್ಲಿ ಸ್ವೀಕರಿಸಿದ ದೂರು ಶೀಘ್ರ ಪರಿಹರಿಸಿ

KannadaprabhaNewsNetwork |  
Published : Sep 11, 2025, 12:03 AM IST
10ಎಚ್‌ಯುಬಿ30ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ನಡೆದ ಪೋನ್‌-ಇನ್‌ ಕಾರ್ಯಕ್ರಮದಲ್ಲಿ ಮೇಯರ್ ಜ್ಯೋತಿ ಪಾಟೀಲ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ಈ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಒಟ್ಟು ಸಾರ್ವಜನಿಕರು ಒಟ್ಟು ೪೦ ದೂರುಗಳು ನೀಡಿದ್ದಾರೆ. ಎ ವಿಭಾಗದಲ್ಲಿ ೨೨, ಬಿ ವಿಭಾಗದಲ್ಲಿ ಒಂದು ಹಾಗೂ ಸಿ ವಿಭಾಗದಲ್ಲಿ ೧೭ ದೂರುಗಳು ಬಂದಿವೆ.

ಹುಬ್ಬಳ್ಳಿ: ಪಾಲಿಕೆಗೆ ಅನುದಾನದ ಕೊರತೆ ಇದ್ದರೂ ಈಗಾಗಲೇ ಸದಸ್ಯರಿಗೆ ₹1.2 ಕೋಟಿ ಅನುದಾನ ನೀಡಲಾಗಿದೆ. ಇಷ್ಟಾಗಿಯೂ ಫೋನ್‌ ಇನ್‌ ಕಾರ್ಯಕ್ರಮಕ್ಕೆ ದೂರುಗಳು ಹೆಚ್ಚುತ್ತಿವೆ. ಸ್ವೀಕರಿಸಿದ ದೂರುಗಳನ್ನು ಅಧಿಕಾರಿಗಳು ಶೀಘ್ರದಲ್ಲೇ ಪರಿಹರಿಬೇಕು ಎಂದು ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ನಡೆದ ಪೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ಅವರು ಮಾತನಾಡಿದರು.

ಈ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಒಟ್ಟು ಸಾರ್ವಜನಿಕರು ಒಟ್ಟು ೪೦ ದೂರುಗಳು ನೀಡಿದ್ದಾರೆ. ಎ ವಿಭಾಗದಲ್ಲಿ ೨೨, ಬಿ ವಿಭಾಗದಲ್ಲಿ ಒಂದು ಹಾಗೂ ಸಿ ವಿಭಾಗದಲ್ಲಿ ೧೭ ದೂರುಗಳು ಬಂದಿವೆ. ಈ ಹಿಂದೆ ಫೋನ್‌ ಇನ್‌ ನಡೆಸಿದಾಗ ಎ ವಿಭಾಗದಲ್ಲಿ ೨೭ ದೂರುಗಳು ಅವುಗಳನ್ನು ಪರಿಹರಿಸಲಾಗಿದೆ. ಬಿ ವಿಭಾಗದಲ್ಲಿ ೫ ದೂರುಗಳು ಬಂದಿದ್ದು, ಎರಡು ಪರಿಹರಿಸಿ ಮೂರು ಬಾಕಿ ಇವೆ. ಸಿ ವಿಭಾಗದಲ್ಲಿ ೧೩ ದೂರುಗಳು ಬಂದಿದ್ದು, ನಾಲ್ಕು ದೂರುಗಳನ್ನು ಪರಿಹರಿಸಿ ೯ ದೂರುಗಳು ಬಾಕಿ ಉಳಿದಿವೆ ಎಂದರು.

ಪ್ರತಿ ಬಾರಿ ಕೇಳಿ ಬರುತ್ತಿರುವ ಸಿ ವಿಭಾಗದ ದೂರುಗಳು ಹಾಗೆ ಉಳಿಯುತ್ತಿವೆ. ರಸ್ತೆ, ಚರಂಡಿ, ಬೀದಿ ದೀಪಗಳ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರ ಸ್ಪಂದಿಸಿ ಪರಿಹರಿಸಬೇಕು ಎಂದು ಸೂಚಿಸಿದರು.

ಸಿ ವಿಭಾಗದ ದೂರುಗಳನ್ನು ಪರಿಹರಿಸಲು ವಲಯ ಸಹಾಯಕ ಆಯುಕ್ತರು ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಸಂವಹನ ಮಾಡಿಕೊಂಡು ಕ್ರಮ ವಹಿಸಬೇಕು. ದಿನಂಪ್ರತಿ ಆಗುವ ಕೆಲಸದಲ್ಲಿಯೇ ದೂರುಗಳು ಕೇಳಿ ಬರುತ್ತಿವೆ. ಕಳೆದ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಎ ವಿಭಾಗದ ೨೭ ದೂರುಗಳು ಕೇಳಿ ಬಂದಿದ್ದವು. ಈ ಬಾರಿ ೨೨ ದೂರುಗಳು ಕೇಳಿ ಬಂದಿವೆ. ಆದರೆ, ಸಿ ವಿಭಾಗದಲ್ಲಿನ ದೂರುಗಳು ಹೆಚ್ಚುತ್ತಿವೆ ಎಂದರು.

ಪಾರ್ಕಿಂಗ್‌ ಕುರಿತು ಡ್ರೈವ್‌: ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ ಕುರಿತು ಮೇಯರ್ ಪ್ರಸ್ತಾಪಿಸಿದಾಗ ಆಯುಕ್ತ ರುದ್ರೇಶ ಘಾಳಿ ಪ್ರತಿಕ್ರಿಯಿಸಿ, ಮಾಲ್‌ಗಳು, ಕಲ್ಯಾಣ ಮಂಟಪಗಳು ಹಾಗೂ ಕಟ್ಟಡಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಜಾಗ ಮೀಸಲಿಡಲಾಗಿದೆಯೇ ಎನ್ನುವ ಕುರಿತಂತೆ ವಿಶೇಷ ಡ್ರೈವ್‌ ಮಾಡಲು ನಿರ್ಧರಿಸಲಾಗಿದೆ. ಪಾರ್ಕಿಂಗ್‌ಗೆ ಜಾಗ ಮೀಸಲಿಡದವರಿಗೆ ದಂಡ ವಿಧಿಸಲಾಗುವುದು. ಪಾರ್ಕಿಂಗ್ ಶುಲ್ಕದ ಕುರಿತು ಅನೇಕ ದೂರುಗಳಿದ್ದು ಶುಲ್ಕ ಪರಿಷ್ಕರಣೆ ಬಗ್ಗೆ ನಿರ್ಧರಿಸಲಾಗುವುದು. ಅಲ್ಲದೇ ನಿಯಮ ಪಾಲಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದರು.

₹152 ಕೋಟಿ ವರ್ಕ್ ಆರ್ಡರ್‌: ಗಣೇಶ ಚತುರ್ಥಿ ಅಂಗವಾಗಿ ರಸ್ತೆಯಲ್ಲಿನ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಇನ್ನು ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹೧೫೨ ಕೋಟಿಯ ವರ್ಕ್ ಆರ್ಡರ್ ನೀಡಲಾಗುತ್ತಿದೆ ಎಂದು ಆಯುಕ್ತ ರುದ್ರೇಶ ಘಾಳಿ ತಿಳಿಸಿದರು. ಅವಳಿ ನಗರದಲ್ಲಿ ಒಟ್ಟು ೭೭ ಸಾವಿರ ಎಲ್‌ಇಡಿ ಬೀದಿ ದೀಪಗಳನ್ನು ತಿಂಗಳೊಳಗಾಗಿ ಅಳವಡಿಸಲಾಗುವುದು. ೪೮ ಸಾವಿರ ಸಾಮಾನ್ಯ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸಾಗುವುದು ಎಂದರು.

ಇನ್ನು ಪಾಲಿಕೆಯಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಕಚೇರಿ ಮಾಡಲು ಪಣ ತೋಡಬೇಕು ಎಂದು ಆಯುಕ್ತ ಘಾಳಿ ಸೂಚಿಸಿದರು

೨೫,೩೪೬ ಜನರಿಗೆ ಪ್ರಮಾಣಪತ್ರ: ಗಣೇಶ ಚತುರ್ಥಿ ಪ್ರಯುಕ್ತ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಇಕೋ ಭಕ್ತಿ ಸಂಭ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ೨೫,೩೪೬ ಜನ ಪಾಲ್ಗೊಂಡು ಡಿಜಿಟಲ್ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಪಾಲಿಕೆ ವತಿಯಿಂದ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಲಾದ ಬೃಹದಾಕಾರದ ಇಲಿ ಆಕೃತಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಮೇಯರ್ ಸಂತೋಷ ಚೌಹಾಣ್, ಹೆಚ್ಚುವರಿ ಆಯುಕ್ತ ವಿಜಯಕುಮಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ