ನ.20ಕ್ಕೆ ಕನ್ನಡ ಪರ ಹೋರಾಟದ ಯಶಸ್ವಿ ಸಮಾರಂಭ

KannadaprabhaNewsNetwork |  
Published : Nov 14, 2024, 12:51 AM ISTUpdated : Nov 14, 2024, 12:52 AM IST

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ನೀಡಬೇಕು ಎಂಬ ಬೇಡಿಕೆಯೊಂದಿಗೆ ಆರಂಭಿಸಿದ್ದ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆದು, ನ.20ಕ್ಕೆ 45 ವರ್ಷಗಳು ತುಂಬಲಿವೆ. ಈ ಹಿಂದಿನ ಹೋರಾಟದ ಸಾಧನೆಯ ನೆನಪಿಗಾಗಿ ಅಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಗಾಂಧಿ ಭವನ ಸಮೀಪದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಯಶಸ್ವಿ ಸಮಾರಂಭ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ನೀಡಬೇಕು ಎಂಬ ಬೇಡಿಕೆಯೊಂದಿಗೆ ಆರಂಭಿಸಿದ್ದ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆದು, ನ.20ಕ್ಕೆ 45 ವರ್ಷಗಳು ತುಂಬಲಿವೆ. ಈ ಹಿಂದಿನ ಹೋರಾಟದ ಸಾಧನೆಯ ನೆನಪಿಗಾಗಿ ಅಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಗಾಂಧಿ ಭವನ ಸಮೀಪದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಯಶಸ್ವಿ ಸಮಾರಂಭ ನಡೆಯಲಿದೆ.

ರಾಜ್ಯ ಭೂ- ವಿದ್ಯಾದಾನದ ಶಾಲಾ ಜಮೀನುಗಳ ಗೇಣಿ ರೈತ ಹೋರಾಟ ಸಮಿತಿ, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಸಹಯೋಗದಲ್ಲಿ ಕನ್ನಡ ಪರ ಹೋರಾಟದ ಯಶಸ್ವಿ ಮತ್ತು ರಾಜ್ಯದಲ್ಲಿ ಭೂ-ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಸಮಸ್ಯೆ ಬಗ್ಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 1976 ರ ನ. 20ರಂದು ಕರ್ನಾಟಕ ಲೋಕಸೇವಾ ಆಯೋಗದ ಎದುರು ಖ್ಯಾತ ಸಾಹಿತಿಗಳಾದ ಡಾ.ದೆ. ಜವರೇಗೌಡ, ಡಾ. ಸಿದ್ದಯ್ಯಪುರಾಣಿಕ್ ಅವರೊಂದಿಗೆ ಆಯೋಗದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ನೀಡಬೇಕು ಎಂಬ ಬೇಡಿಕೆಯೊಂದಿಗೆ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು ಎಂದು ನೆನಪಿಸಿಕೊಂಡರು.

ಇದೇ ದಿನ ಹೈದ್ರಾಬಾದ್‌ನಲ್ಲಿ ಪ್ರವಾಸದಲ್ಲಿದ್ದ, ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರು ಉಪವಾಸ ಸತ್ಯಾಗ್ರಹದ ಸುದ್ದಿ ತಿಳಿದು ರಾಜ್ಯದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ಹೋರಾಟ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

1954-55ರಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಆರಂಭಿಸಿದ್ದ ಭೂ ವಿದ್ಯಾದಾನದ ಚಳುವಳಿಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಿಗೆ ಭೂದಾನಿಗಳಿಂದ ಬಂದಿದ್ದ ಶಾಲಾ ಜಮೀನುಗಳನ್ನು ಕಳೆದ 60-70 ವರ್ಷಗಳಿಂದ ಗೇಣಿ ಆಧಾರದಲ್ಲಿ ರೈತರು ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈ ಶಾಲಾ ಜಮೀನು ಗೇಣಿ ಸಮಸ್ಯೆ ಮತ್ತು ನಿವಾರಣೆಯ ಬಗ್ಗೆ ಹಲವು ಮುಖಂಡರು ಸಲಹೆ ಮತ್ತು ಅಭಿಪ್ರಾಯಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಸಮಾರಂಭ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ರಾಜ್ಯ ಭೂ-ವಿದ್ಯಾದಾನದ ಶಾಲಾ ಜಮೀನುಗಳ ಗೇಣಿ ರೈತ ಹೋರಾಟ ಸಮಿತಿ ಗೌರವಾಧ್ಯಕ್ಷ ಮತ್ತು ಮಾಜಿ ಶಾಸಕ ಬಿ. ಸ್ವಾಮಿರಾವ್ ವಹಿಸಲಿದ್ದಾರೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಾಟೀಲ್ ಇನ್ನಿತರರು ಭಾಗವಹಿಸಲಿದ್ದಾರೆ. ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ. ಗಂಗಾಧರ್, ಶಾಲಾ ಜಮೀನು ಗೇಣಿ ರೈತರ ಸಮಸ್ಯೆಯ ಸ್ಥೂಲ ಪರಿಚಯವನ್ನು ಹಾಗೂ ಸಾಗರದ ಹಿರಿಯ ಸಮಾಜವಾದಿ ಮುಖಂಡ ಬಿ.ಆರ್. ಜಯಂತ್, ಶಾಲಾ ಜಮೀನು ಗೇಣಿ ರೈತರ ಸಮಸ್ಯೆಯ ಬಗ್ಗೆ ಮಾತನಾಡಲಿದ್ದಾರೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಪ್ರೊ. ಕಲ್ಲನ, ಶಂಕ್ರನಾಯ್ಕ ಉಪಸ್ಥಿತರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''