ನ್ಯಾಯಾಲಯದ ಆದೇಶ: ಪಾಂಡವಪುರ ಪುರಸಭೆ ಕಚೇರಿ ಸಾಮಗ್ರಿ ಜಪ್ತಿ

KannadaprabhaNewsNetwork | Published : Nov 14, 2024 12:51 AM

ಸಾರಾಂಶ

ಪಾಂಡವಪುರ ಎಸಿ ಕಚೇರಿಯಲ್ಲಿ ಸಾಮಗ್ರಿ ಜಪ್ತಿ ಮಾಡಿದ್ದ ನ್ಯಾಯಾಲಯದ ಸಿಬ್ಬಂದಿ ಪುರಸಭೆ ಕಚೇರಿಯಲ್ಲಿಯೂ ಕಂಪ್ಯೂಟರ್, ಟೇಬಲ್, ಕುರ್ಚಿಗಳು ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಕೀಲ ಧರ್ಮಾಪುರ ಲೋಕೇಶ್, ನೊಂದ ರೈತ ಸತ್ಯನಾರಾಯಣ ಸಮ್ಮುಖದಲ್ಲಿ ನ್ಯಾಯಾಲಯದ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಒಳ ಚರಂಡಿ ಶುದ್ಧೀಕರಣ ಘಟಕ ಸ್ಥಾಪಿಸಲು ಭೂಮಿ ಸ್ವಾಧೀನಪಡಿಸಿಕೊಂಡು ರೈತರಿಗೆ ಹೆಚ್ಚುವರಿ ಭೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆದೇಶದಂತೆ ಪಟ್ಟಣದ ಪುರಸಭೆ ಕಚೇರಿಯಲ್ಲಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು.

ಎಸಿ ಕಚೇರಿಯಲ್ಲಿ ಸಾಮಗ್ರಿ ಜಪ್ತಿ ಮಾಡಿದ್ದ ನ್ಯಾಯಾಲಯದ ಸಿಬ್ಬಂದಿ ಪುರಸಭೆ ಕಚೇರಿಯಲ್ಲಿಯೂ ಕಂಪ್ಯೂಟರ್, ಟೇಬಲ್, ಕುರ್ಚಿಗಳು ಸೇರಿದಂತೆ ಅನೇಕ ಸಾಮಗ್ರಿಗಳನ್ನು ವಕೀಲ ಧರ್ಮಾಪುರ ಲೋಕೇಶ್, ನೊಂದ ರೈತ ಸತ್ಯನಾರಾಯಣ ಸಮ್ಮುಖದಲ್ಲಿ ನ್ಯಾಯಾಲಯದ ಸಿಬ್ಬಂದಿ ವಶಕ್ಕೆ ಪಡೆದುಕೊಂಡರು.

ಪುರಸಭೆ ವ್ಯಾಪ್ತಿಯಲ್ಲಿ ಒಳ ಚರಂಡಿ ಕಾಮಗಾರಿ ಹಾಗೂ ಶುದ್ದೀಕರಣ ಘಟಕ ಸ್ಥಾಪಿಸುವ ಉದ್ದೇಶದಿಂದ ಅನೇಕ ರೈತರಿಂದ ಪುರಸಭೆ ಮೂಲಕ ರಾಜ್ಯ ಸರ್ಕಾರ ಜಮೀನು ಸ್ವಾಧೀನಪಡಿಸಿಕೊಂಡಿದ್ದರು. ಸರ್ಕಾರದಿಂದ ಅನೇಕ ರೈತರಿಗೆ ಭೂ ಪರಿಹಾರ ವಿತರಿಸಲಾಗಿತ್ತು.

ಇನ್ನೂ ಕೆಲ ರೈತರಿಗೆ ಹೆಚ್ಚುವರಿ ಭೂ ಪರಿಹಾರ ನೀಡಿರಲಿಲ್ಲ. ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ಭೂಮಿ ನೀಡಿದ್ದ ರೈತ ಸತ್ಯನಾರಾಯಣರಿಗೆ ಒಟ್ಟು 5.87 ಕೋಟಿ ರು. ಪರಿಹಾರದಲ್ಲಿ 3 ಕೋಟಿ ರು. ಭೂ ಪರಿಹಾರ ವಿತರಿಸಲಾಗಿತ್ತು. ಇನ್ನುಳಿದ 2.87 ಕೋಟಿ ರು. ಹೆಚ್ಚುವರಿ ಭೂಪರಿಹಾರ ನೀಡಲು ವಿಳಂಬ ಮಾಡಲಾಗುತ್ತಿತ್ತು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಭೂಮಿ ನೀಡಿದ್ದ ರೈತ ಸತ್ಯನಾರಾಯಣ ಅವರಿಗೆ ಭೂಪರಿಹಾರ ವಿಳಂಬ ಮಾಡಿದ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಪುರಸಭೆ ಕಚೇರಿ ಸಾಮಗ್ರಿಗಳನ್ನು ಜಪ್ತಿ ಮಾಡಲು ಆದೇಶಿಸಿತ್ತು.

ನ್ಯಾಯಾಲಯದ ಆದೇಶದಂತೆ ನ್ಯಾಯಾಲಯದ ಅಮಿನರಾದ ನರಸಿಂಹಮೂರ್ತಿ, ಸತೀಶ್, ವಿನಯ್, ಸೋಮನಾಳ ಅವರು ವಕೀಲರು ಮತ್ತು ರೈತರ ಸಮ್ಮುಖದಲ್ಲಿ ಪುರಸಭೆ ಕಚೇರಿಯ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡರು.

ಮೊನ್ನೆಯಷ್ಟೆ ತಾಲೂಕು ಆಡಳಿತ ಸೌಧದ ಉಪವಿಭಾಗಾಧಿಕಾರಿ ಕಚೇರಿ ಸಾಮಗ್ರಿಗಳನ್ನು ಎಸಿ ಕೆ.ಆರ್.ಶ್ರೀನಿವಾಸ್ ಹಾಗೂ ನೊಂದ ರೈತ ಸತ್ಯನಾರಾಯಣ ಅವರ ಸಮ್ಮುಖದಲ್ಲಿ ಜಪ್ತಿ ಮಾಡಿದ್ದನ್ನು ಸ್ಮರಿಸಬಹುದು.

Share this article