ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ತ್ರೀ ಎಂಬ ಪದವು ಕೇವಲ ವ್ಯಕ್ತಿಯಲ್ಲ, ಅದೊಂದು ಅದ್ಭುತ ಶಕ್ತಿಯ ಸಮೂಹ ಸನ್ನಿ ಎಂದು ಜಿ.ಎಸ್. ಶಿವರುದ್ರಪ್ಪನವರ ಸಾಲುಗಳನ್ನು ಉಲ್ಲೇಖಿಸಿದ ಅವರು, ತಾಯಿ, ಸಹೋದರಿ, ಮಡದಿ ಹಾಗೂ ಗೆಳತಿಯಾಗಿ ವಿವಿಧ ಪಾತ್ರ ನಿರ್ವಹಿಸುವ ಮಹಿಳೆ, ಇಂದಿನ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾಳೆ ಎಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಮಂಜುಳಾ ಕುಲಕರ್ಣಿ ಹೇಳಿದರು.

ನಗರದ ಪಿ.ಜೆ.ಬಡಾವಣೆಯ ವನಿತಾ ಸಮಾಜದ ಸತ್ಯಸಾಯಿ ರಂಗ ಮಂದಿರದಲ್ಲಿ ಶನಿವಾರ ಸಂಜೆ ವನಿತಾ ಸಮಾಜದಿಂದ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ವನಿತಾ ಉತ್ಸವ, ವನಿತಾ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿ, ಮಹಿಳೆಯು ಕುಟುಂಬ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯ ಮೂಲ ಶಕ್ತಿಯಾಗಿದ್ದು, ಅವಳ ತ್ಯಾಗ ಮತ್ತು ಸೇವೆ ಅನನ್ಯವಾದುದು ಎಂದರು.

ರಾಧಮ್ಮ ಚನ್ನಗಿರಿ ರಂಗಪ್ಪ ವನಿತಾ ಸೇವಾ ಪ್ರಶಸ್ತಿ ಸ್ವೀಕರಿಸಿದರು. ಬಾಪೂಜಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಲತಿಕಾ ದಿನೇಶ್ ಕೆ.ಶೆಟ್ಟಿ, ವನಿತಾ ಸಮಾಜದ ಅಧ್ಯಕ್ಷೆ ಪ್ರೇಮಾ ನಾಗರಾಜ, ವನಿತಾ ಸೇವಾ ಪ್ರಶಸ್ತಿ ಆಯೋಜಕರಾದ ಸಿ.ಆರ್.ವಿರೂಪಾಕ್ಷಪ್ಪ ಪರವಾಗಿ ರಶ್ಮಿ, ದಾವಣಗೆರೆ ವೈಕುಂಠಧಾಮದ ಸುಧಾರಾಣಿ, ವನಿತಾ ಸಮಾಜದ ಕಾರ್ಯದರ್ಶಿ ರಮಾ ನಾಗರಾಜ್, ಮಂಜುಳ ಬಸವಲಿಂಗಪ್ಪ, ನಳಿನ ಅಚ್ಯುತ್, ನಾಗರತ್ನ ಜಗದೀಶ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಡಾ.ಶುಕ್ಲಾ ಶೆಟ್ಟಿ, ಡಾ.ಶೋಭಾ ಧನಂಜಯ್, ಡಾ.ಶಾಂತಾಭಟ್, ವನಿತಾ ಸಮಾಜದ ವಿವಿಧ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಸವಿತಾ ಪ್ರಶಾಂತ್, ರೇಖಾ ಪದಕಿ ಸ್ವಾಗತಿಸಿದರು. ಇದೇ ವೇಳೆ ವನಿತಾ ವಾರ್ತಾ ಬಿಡುಗಡೆ ಮಾಡಲಾಯಿತು.