ಕುದೂರು: ಇದೊಂದು ಸರ್ಕಾರಿ ಶಾಲೆ. ಹತ್ತನೇ ತರಗತಿ ಓದುವ ಮಕ್ಕಳನ್ನು ರಾತ್ರಿ 8 ಗಂಟೆ ತನಕ ಶಾಲೆಯಲ್ಲಿಟ್ಟುಕೊಂಡು, ವಿಶೇಷ ತರಬೇತಿ ನೀಡುತ್ತಾರೆ. ಸಂಜೆ ವೇಳೆಗೆ ಮಕ್ಕಳಿಗೆ ಹಸಿವಾಗಿರುತ್ತದೆ ಎಂದು ಹಳೇ ವಿದ್ಯಾರ್ಥಿಗಳ ಸಹಾಯದಿಂದ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಶಾಲೆ ಶೇ.೯೦ರಷ್ಟು ಫಲಿತಾಂಶ ಮುಡಿಗೇರಿಸಿಕೊಳ್ಳಲು ಗುರಿ ಹೊಂದಿದೆ. ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎರಡು ವರ್ಷಗಳಿಂದ ಶಿಕ್ಷಕರು ಶ್ರಮ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಉಪಪ್ರಾಂಶುಪಾಲೆ ಎಚ್.ಆರ್.ಶ್ರೀದೇವಿ ಮಾತನಾಡಿ, ನಾವೆಲ್ಲಾ ಮಕ್ಕಳ ಅನ್ನ ತಿನ್ನುತ್ತಿದ್ದೇವೆ. ಇರಲು ಒಳ್ಳೆಯ ಮನೆ, ಓಡಾಡಲು ಕಾರು, ಆರೋಗ್ಯ ಕೆಟ್ಟರೆ ಒಳ್ಳೆಯ ಆಸ್ಪತ್ರೆಗೆ ಕಟ್ಟಲು ಹಣ ಇವೆಲ್ಲ ದೊರಕುತ್ತಿರುವುದಕ್ಕೆ ಕಾರಣ ಸರ್ಕಾರ ನಮಗೆ ನೀಡಿದ ಕೆಲಸ ಮತ್ತು ಇದಕ್ಕೆ ಕಾರಣರಾದ ವಿದ್ಯಾರ್ಥಿಗಳು. ಇಂತಹ ಅನ್ನದಾತರಿಗೆ ನಾವು ಅವರ ಪ್ರಗತಿಗಾಗಿ ಶ್ರಮಿಸದಿದ್ದರೆ ಭಗವಂತ ನಮ್ಮನ್ನು ಮೆಚ್ಚುವುದಿಲ್ಲ. ಈ ಆತ್ಮ ಪ್ರಜ್ಞೆ ಜಾಗೃತವಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ.

ಜಿಲ್ಲಾ ಮತ್ತು ತಾಲೂಕು ಟಾಪರ್:

ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಂದ ಮೂರು ಜನ ಟಾಪರ್‌ಗಳನ್ನು ಆಯ್ಕೆ ಮಾಡುತ್ತಾರೆ. ೨೦೨೪ರಲ್ಲಿ ಮೂವರಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ತಾಲೂಕು ಮಟ್ಟದಲ್ಲೂ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಕುದೂರು ಶಾಲೆಯವರು. ೨೦೨೫ರಲ್ಲಿ ಜಿಲ್ಲೆ ಮತ್ತು ತಾಲೂಕು ಒಟ್ಟು ಆರು ಜನ ಟಾಪರ್‌ಗಳಲ್ಲಿ ಐವರು ವಿದ್ಯಾರ್ಥಿಗಳು ಕುದೂರು ಕೆಪಿಎಸ್ ಶಾಲೆಯವರು. ಈ ಸಾಧನೆಗೆ ಹೆಚ್ಚವರಿ ತರಗತಿಗಳು ಮತ್ತು ಮಕ್ಕಳಿಗೆ ಪ್ರೋತ್ಸಾಹದಾಯಕ ಚಟುವಟಿಕೆಗಳು ಕಾರಣವಾಗಿವೆ.

ಹಳೇ ವಿದ್ಯಾರ್ಥಿಗಳಿಂದ ನಿತ್ಯ ಊಟ:


ಮಕ್ಕಳಿಗೆ ಸಂಜೆ ವೇಳೆ ಊಟ ಅಥವಾ ಲಘು ಉಪಹಾರದ ವ್ಯವಸ್ಥೆ ಆಗಬೇಕು ಎಂದು ಹಳೇ ವಿದ್ಯಾರ್ಥಿಗಳಿಗೆ ಉಪಪ್ರಾಂಶುಪಾಲೆ ಶ್ರೀದೇವಿಯವರು ಮನವಿ ಮಾಡಿದ್ದಕ್ಕೆ ಸ್ಪಂದಿಸಿದ ವಿದ್ಯಾರ್ಥಿಗಳು ನಿತ್ಯವೂ ಒಬ್ಬೊಬ್ಬರಂತೆ ವಿವಿಧ ತಿಂಡಿ, ಊಟ ಕೊಟ್ಟು ಉತ್ತಮ ಫಲಿತಾಂಶ ಬರಲು ಸಹಕರಿಸುತ್ತಿದ್ದಾರೆ. ಶಾಲೆಗೆ ಊರಿಗೆ ತಂದೆ ತಾಯಿಗಳಿಗೆ ಒಳ್ಳೆಯ ಹೆಸರು ತರಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿ ಊಟ ಬಡಿಸುತ್ತಾರೆ.

ಫೋಷಕರ ಸಹಕಾರ:

ಸುತ್ತಮುತ್ತಲಿನ ಹಳ್ಳಿಗಳಿಂದ ಮಕ್ಕಳು ಶಾಲೆಗೆ ಬರುತ್ತಾರೆ. ರಾತ್ರಿ 8 ಗಂಟೆ ವೇಳೆಗೆ ಬಸ್ಸುಗಳ ವ್ಯವಸ್ಥೆ ಇರುವುದಿಲ್ಲ. ಹಾಗಾಗಿ ಪೋಷಕರೇ ಮಕ್ಕಳ ಜವಾಬ್ದಾರಿ ತೆಗೆದುಕೊಂಡು ಬಂದು ತಮ್ಮ ಮಕ್ಕಳನ್ನು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಯಾವೊಬ್ಬ ಪೋಷಕರು ವಿರೋಧ ವ್ಯಕ್ತಪಡಿಸದೆ ನಮ್ಮ ಮಕ್ಕಳ ಪ್ರಗತಿಗೆ ಶ್ರಮಿಸುತ್ತಿರುವ ಶಾಲೆ ಶಿಕ್ಷಕ ವೃಂದಕ್ಕೆ ಸಹಕಾರ ಕೊಟ್ಟಿದ್ದಾರೆ,

ಕೋಟ್.............

ಸರ್ಕಾರಿ ಶಾಲೆಯಲ್ಲಿ ರಾತ್ರಿ 8 ಗಂಟೆ ತನಕ ಹತ್ತನೇ ತರಗತಿ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಸಂಜೆ ಅವರಿಗೆ ಊಟದ ವ್ಯವಸ್ಥೆಯನ್ನು ದಾನಿಗಳ ಸಹಾಯದಿಂದ ವ್ಯವಸ್ಥೆ ಮಾಡಿರುವುದು ಸಂತಸ ತಂದಿದೆ. ಉತ್ತಮ ಫಲಿತಾಂಶ ತರುವ ಶಾಲೆಗಳಿಂದಲೇ ನಮ್ಮ ತಾಲೂಕು ಶ್ರೀಮಂತವಾಗಿದೆ. ಮಕ್ಕಳ ಉತ್ತಮ ಫಲಿತಾಂಶಕ್ಕೆ ಏನೆಲ್ಲಾ ಸೌಕರ್‍ಯಗಳು ಬೇಕೋ ಅದನ್ನು ಮಾಡಲು ನಾನು ಸಿದ್ದನಿದ್ದೇನೆ.

-ಎಚ್.ಸಿ.ಬಾಲಕೃಷ್ಣ. ಶಾಸಕರು, ಮಾಗಡಿ

ಕೋಟ್.............

ಸರ್ಕಾರಿ ಶಾಲೆ ಮಕ್ಕಳು ಎಂದರೆ ಮೂಗುಮುರಿಯುತ್ತಿದ್ದ ಕಾಲ ಮರೆಯಾಗುತ್ತಿದೆ. ಸರ್ಕಾರ ಉತ್ತಮ ಸೌಲಭ್ಯಯಗಳನ್ನು ಒದಗಿಸುತ್ತಿದೆ. ಮಕ್ಕಳು ಉನ್ನತ ವ್ಯಾಸಂಗ ಮಾಡುವುದರಿಂದ ಸಮಾಜಮುಖಿಯಾಗುತ್ತಾರೆ. ಅಲ್ಲದೆ, ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಆಸಕ್ತಿ ತೋರಿಸಿ, ಅವರಿಗೂ ಹೆಚ್ಚು ಗಮನ ಕೊಟ್ಟು ಶಿಕ್ಷಣ ನೀಡುತ್ತಿದ್ದೇವೆ.

-ಎಚ್.ಅರ್.ಶ್ರೀದೇವಿ, ಉಪಪ್ರಾಂಶುಪಾಲರು

ಪೊಟೋ೧೫ಸಿಪಿಟಿ೬ : ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿ ಮಕ್ಕಳಿಗೆ ವಿಶೇಷ ತರಬೇತಿ ನೀಡುತ್ತಿರುವ ಕಾರಣ ನಿತ್ಯ ಸಂಜೆ ವೇಳೆ ಮಕ್ಕಳಿಗೆ ಹಳೇ ವಿದ್ಯಾರ್ಥಿಗಳಿಂದ ತಿಂಡಿ ವ್ಯವಸ್ಥೆ ಮಾಡಿರುವುದು

ಪೊಟೋ೧೫ಸಿಪಿಟಿ೭ :

ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ