ಅವಧಿ ಮೀರಿದ ಆಹಾರ ತಿನಿಸು, ಪಾನಿಯ ವಶ
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ನೂರುಲ್ ಹುದಾ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿ ತಂಡ ಪಟ್ಟಣದ ದಿನಸಿ, ಔಷಧಿ ವ್ಯಾಪಾರ ಹಾಗೂ ಫ್ಯಾನ್ಸಿ ಸ್ಟೋರ್ ಗಳ ಮೇಲೆ ಶುಕ್ರವಾರ ಸಂಜೆ ದಿಢೀರ್ ದಾಳಿ ಮಾಡಿ ಅವಧಿ ಮೀರಿದ ಆಹಾರ ತಿನಿಸು, ಪಾನಿಯ, ಚಾಕಲೇಟ್ ಮತ್ತಿತರ ದಿನಬಳಕೆ ವಸ್ತುಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದರು.ತಹಸೀಲ್ದಾರ್ ನೂರುಲ್ ಹುದಾ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾ, ಕಾಲೇಜು ಆವರಣದ ಕೆಲವು ಅಂಗಡಿಗಳಲ್ಲಿ ಅವಧಿ ಮೀರಿದ ತಿನಿಸು ಮಾರಾಟ ಮಾಡುತ್ತಿದ್ದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ಈ ಹಿನ್ನಲೆಯಲ್ಲಿ ಬೇಕರಿ, ದಿನಸಿ, ಔಷಧಿ ಅಂಗಡಿಗಳ ದಾಳಿ ಮಾಡಿ ಮಾರಾಟ ಮಾಡುತ್ತಿದ್ದ ಅವಧಿ ಮೀರಿದ ಚಾಕಲೇಟ್, ತಂಪುಪಾನಿಯ, ಸಿದ್ದ ರೊಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂತಹ ಪದಾರ್ಥಗಳನ್ನು ಮಾರಾಟ ಮಾಡಬಾರದು. ಕಂಪನಿಗಳಿಂದ ಖರೀದಿಸುವಾಗ ಅವುಗಳ ಉತ್ಪಾದನೆ ದಿನಾಂಕ, ಅವಧಿ ಮುಗಿವ ದಿನಾಂಕ ಪರಿಶೀಲಿ ಸಬೇಕು ಎಂದು ಅರಿವು ಮೂಡಿಸಲಾಗಿದೆ. ಮೊದಲ ಹಂತದಲ್ಲಿ ಅವಧಿ ಮೀರಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುನಃ ಈ ರೀತಿ ವ್ಯಾಪಾರ ಕಂಡು ಬಂದರೆ ಅಂತಹ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ, ದಂಡ ವಿಧಿಸಿ ಅಂತಹ ಅಂಗಡಿಗಳ ಮಾರಾಟ ಪರವಾನಿಗೆ ರದ್ದುಗಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಕೊಪ್ಪ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ಹಿಂದುಳಿದ ಕಲ್ಯಾಣ ಇಲಾಖೆ ಅಧಿಕಾರಿ ಧರ್ಮರಾಜ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸೇವಾನಾಯ್ಕ, ಆಹಾರ ಇಲಾಖೆ ಗಣಪತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಕೆ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಕಾವ್ಯಶ್ರೀ, ಗ್ರಾಮ ಲೆಕ್ಕಾಧಿಕಾರಿ ಸಾನಿಯಾ ತಾಜ್, ಸ್ವಯಂ ಸೇವಕಿ ಸಿಸ್ಟರ್ ಸಿಸಲಿಯಾನಂದ ಸ್ವಾಮಿ ಮತ್ತಿತರರ ಅಧಿಕಾರಿಗಳು ಇದ್ದರು.