- ಚನ್ನಗಿರಿ ತಾಲೂಕಿನಲ್ಲಿ 1100 ಅಡಿಗಳವರೆಗೂ ಕುಸಿದ ಅಂತರ್ಜಲಮಟ್ಟ । ಬೆಳೆಗಾರರ ಆತಂಕ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು, ಮಧ್ಯಾಹ್ನ 12 ಗಂಟೆ ನಂತರ ಬಿಸಿಲಿನ ತಾಪದಿಂದ ಜನತೆ ಹೊರಗಡೆ ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ತಾಪದಿಂದ ಅಂತರ್ಜಲ ಮಟ್ಟ ಸಹ ಕುಸಿದಿದ್ದು, ಅಡಕೆ ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.ತಾಲೂಕಿನ ಕಂಚಿಗನಾಳು, ಹೊದಿಗೆರೆ, ಅರಳಿಕಟ್ಟೆ, ಹೆಬ್ಬಳಗೆರೆ, ಬೆಟ್ಟಕಡೂರು, ಮಹಾದೇವಪುರ, ಯರಗಟ್ಟಿಹಳ್ಳಿ ಈ ಗ್ರಾಮಗಳ ಸುತ್ತಮುತ್ತಲು 800 ಅಡಿಗಳಿಂದ 1100 ಅಡಿಗಳವರೆಗೆ ಅಂತರ ಜಲಮಟ್ಟ ಕುಸಿದಿದೆ. ದಿನದಿಂದ ದಿನಕ್ಕೆ ಅಂತರ್ಜಲ ಕುಸಿತ ಆಗುತ್ತಿರುವುದು ರೈತರ ಕಂಗಾಲಾಗಿಸುತ್ತಿದೆ.
ಬೇಸಗಿ ಪರಿಸ್ಥಿತಿ ಹಿನ್ನೆಲೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ಸಹ ರೈತರಿಗೆ ಸಲಹೆ ನೀಡಿದ್ದಾರೆ. ಉಬ್ರಾಣಿ ಹೋಬಳಿಯ ಕೊಡಕಿಕೆರೆ, ಮುಗಳಿಹಳ್ಳಿ, ನೆಲ್ಲಿಹಂಕಲು, ಶಂಕರಿಪುರ, ದುರ್ವಿಗೆರೆ, ಗಂಗಗೊಂಡನಹಳ್ಳಿ ಈ ಪ್ರದೇಶಗಳಲ್ಲಿ 1400 ಕೊಳವೆಬಾವಿಗಳಿವೆ. 30ರಿಂದ 35 ಸಾವಿರ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸ್ತುತ ಬೇಸಿಗೆ ಕಾಲವಾಗಿದೆ. ಆದ್ದರಿಂದ ತೋಟಗಳಿಗೆ ನೀರನ್ನು ಹರಿಸಿ, ವ್ಯಯಮಾಡದೇ, ಹನಿ ನೀರಾವರಿ ಯೋಜನೆ ಅಳವಡಿಸಿಕೊಳ್ಳುವುದು ಸೂಕ್ತ. ಹನಿ ನೀರಾವರಿ ಮೂಲಕವೇ ಗಿಡಗಳಿಗೆ ನೀರನ್ನು ಉಣಿಸುವುದು ಪ್ರಸ್ತುತ ಲಾಭದಾಯಕ ಎಂದಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಇಲಾಖೆ ಅಭಿಯಂತರ ಲೋಹಿತ್ ಪ್ರತಿಕ್ರಿಯಿಸಿದ್ದು, ಬೇಸಿಗೆಯಲ್ಲಿ ಚನ್ನಗಿರಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ₹10.40 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಚನ್ನಗಿರಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ತಾಲೂಕಿನಲ್ಲಿ 2 ಏತನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ, ಕೆರೆಗಳಿಗೆ ಸಮರ್ಪಕ ನೀರನ್ನು ತುಂಬಿಸದ ಕಾರಣ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಕೆರೆಗಳು ಬತ್ತಿಹೋಗಿವೆ. ತೋಟ ಬೆಳೆಗಾರರು ಸಾಲ ಮಾಡಿ ಬೋರ್‌ವೆಲ್‌ಗಳನ್ನು ಕೊರೆಸುತ್ತಿದ್ದು, 1 ಸಾವಿರದಿಂದ 1500 ಅಡಿಗಳವರೆಗೆ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ರೈತರು ಆರ್ಥಿಕ ನಷ್ಟದಿಂದ ಕಂಗಾಲಾಗಿದ್ದಾರೆ.
- - -