ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರಸಕ್ತ ಸಾಲಿನಲ್ಲಿ ಮಳೆರಾಯ ಕೈಕೊಟ್ಟರೂ ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸುವಷ್ಟು ನೀರು ಹೇಮಾವತಿ ಜಲಾಶಯದಲ್ಲಿತ್ತು. ಆದರೆ, ಪಕ್ಕದ ತುಮಕೂರು ಜಿಲ್ಲೆಗೆ ಹೇಮೆ ನೀರು ಹರಿದರೂ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಮಂಡ್ಯ ಜಿಲ್ಲೆಯ ಕೆರೆ-ಕಟ್ಟೆಗಳಿಗೂ ಹೇಮೆಯ ನೀರು ಹರಿಯದೇ ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.
ಬಿಸಿಲಿನ ತಾಪ, ಭೀಕರ ಬರಗಾಲದಿಂದಾಗಿ ತಾಲೂಕಿನ ಕೆರೆ ಕಟ್ಟೆಗಳು ಸಂಪೂರ್ಣ ಬರಿದಾಗಿವೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೊರಿದೆ. ಅಂತರ್ಜಲ ಮಟ್ಟ ಕುಸಿದು ಸಾವಿರಾರು ರೈತರ ಕೃಷಿ ಪಂಪ್ ಸೆಟ್ಟುಗಳು ಸ್ಥಗಿತಗೊಂಡಿವೆ.ರೈತರು ಕೃಷಿ ಪಂಪ್ ಸೆಟ್‌ಗಳನ್ನು ನಂಬಿ ತಮ್ಮ ಜಮೀನುಗಳಲ್ಲಿ ಹಾಕಿದ್ದ ಕಬ್ಬು, ಶುಂಠಿ, ತೆಂಗು, ಅಡಿಕೆ ಮುಂತಾದ ವಾಣಿಜ್ಯ ಬೆಳೆಗಳು ಒಣಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ರೈತರನ್ನು ಕಾಡುತ್ತಿದೆ.
ಸರ್ಕಾರ, ಸಚಿವರು ಹಾಗೂ ನೀರಾವರಿ ಇಲಾಖೆಯ ತಪ್ಪು ನಿರ್ಧಾರಗಳಿಂದ ಈ ನಾಲೆಗಳಲ್ಲಿ ಬೇಸಿಗೆ ಬೆಳೆಗೆ ನೀರು ಹರಿಯುತ್ತಿಲ್ಲ. ನೀರಿನ ಅಭಾವ ಮತ್ತು ಭತ್ತದ ಬೆಳೆ ಲಾಭದಾಯಕವಲ್ಲದ ಕಾರಣಕ್ಕೆ ಶೇ. 20 ರಷ್ಟು ರೈತರು ತೆಂಗು, ಅಡಿಕೆ, ಶುಂಠಿ ಮುಂತಾದ ವಾಣಿಜ್ಯ ಬೆಳೆಗಳತ್ತ ವಾಲುತ್ತಿದ್ದಾರೆ. ಕಠಿಣ ಬರಗಾಲದಲ್ಲೂ ಈ ನಾಲಾ ವ್ಯಾಪ್ತಿಯ ರೈತರಿಗೆ ಭತ್ತ ಬೆಳೆಯಲು ನೀರು ಹರಿಸದಿದ್ದರೂ ಕಬ್ಬು, ತೆಂಗು, ಅಡಿಕೆ ಮುಂತಾದ ವಾಣಿಜ್ಯ ಬೆಳೆಗಳ ಸಂರಕ್ಷಣೆಗಾಗಿ ಕಟ್ಟು ನೀರು ಪದ್ದತಿಯಡಿ ನೀರು ಹರಿಸಲಾಗುತ್ತಿತ್ತು.
ತಾಲೂಕಿನಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ. ಕೀಡಿ ಸರ್ಕಾರ ಹೇಮಾವತಿ ಜಲಾಶಯದ ಕಾಲುವೆಗಳ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತಿತ್ತು. ಆದರೆ. ಈ ವರ್ಷ ನಮ್ಮ ಕೆರೆ ಕಟ್ಟೆಗಳಿಗೆ ಹೇಮೆ ನೀರು ಹರಿದಿಲ್ಲ. ಕೆರೆಗಳು ಒಣಗಿ ನಿಂತಿದ್ದು ಅಂತರ್ಜಲ ಮಟ್ಟ ಕುಸಿದಿದೆ.
ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಹೇಮಾವತಿ ನದಿ ವ್ಯಾಪ್ತಿಯ ಅಕ್ಕಿಹೆಬ್ಬಾಳು ಮತ್ತು ಬೂಕನಕೆರೆ ಹೋಬಳಿ ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 500 ಕ್ಯುಸೆಕ್ ನೀರು ಹರಿಸುವಂತೆ ನಾನು ನೀರಾವರಿ ಇಲಾಖೆ ಎಂಜಿನಿಯರುಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದೇನೆ. ಜಿಲ್ಲಾ ಸಚಿವರ ಗಮನಕ್ಕೂ ತಂದಿದ್ದೇನೆ. ಆದರೆ, ಇದುವರೆಗೂ ಕ್ರಮವಹಿಸಿಲ್ಲ. ತಕ್ಷಣವೇ ಕಾಲುವೆಗಳ ಮುಖಾಂತರ ಕಟ್ಟು ಪದ್ಧತಿಯಡಿ ನೀರು ಹರಿಸಬೇಕು.
- ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ