ಕನ್ನಡಪ್ರಭ ವಾರ್ತೆ ಬೆಂಗಳೂರುನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿಯೇ ಇಲ್ಲ. ನಿಮ್ಮನ್ನು ಒದ್ದು ಸಭೆಯಿಂದ ಹೊರಗಡೆ ಕಳಿಸಬೇಕಾ? ನಗರದಲ್ಲಿ ಒಂದು ಸ್ಥಳದಲ್ಲಾದರೂ ಗಿಡ ನೆಡಲು ಸರಿಯಾಗಿ ಗುಂಡಿ ತೋಡಿದ್ದೀರಾ? ಮನೆಯ ಮೇಲೆ ಕೊಂಬೆ ಬೀಳುತ್ತದೆ ಎಂದರೆ ಕತ್ತರಿಸಲು ನೂರೆಂಟು ಕಾನೂನು ಹೇಳುತ್ತೀರಿ. ಕಮರ್ಷಿಯಲ್ ಬೋರ್ಡ್‌ಗೆ ಕೊಂಬೆ ಅಡ್ಡ ಬಂದರೆ ತಕ್ಷಣ ಕಟ್ ಮಾಡುತ್ತೀರಿ...ಜಿಬಿಎ ವ್ಯಾಪ್ತಿಯಲ್ಲಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಹಾಗೂ ಸಸಿ ನೆಡುವುದಕ್ಕೆ ಸಂಬಂಧಿಸಿದಂತೆ ಮಂಗಳವಾರ ಕರೆದಿದ್ದ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಮೇಲಿನಂತೆ ತರಾಟೆಗೆ ತೆಗೆದುಕೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಾಯಿಗಳ ಸಂತಾನ ಹರಣ ಕಾರ್ಯಕ್ರಮ ಯಾವಾಗಿನಿಂದ ಚಾಲ್ತಿಯಲ್ಲಿದೆ? ಇಷ್ಟು ದಿನ ಎಷ್ಚು ನಾಯಿಗಳಿಗೆ ಸಂತಾನ ಹರಣ ಮಾಡಿದ್ದೀರಿ? ಆದರೂ ನಾಯಿಗಳ ಸಂಖ್ಯೆ ಹೆಚ್ಚುತ್ತಿರಲು ಕಾರಣವೇನು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಅಗತ್ಯ ಮಾಹಿತಿ ಇಲ್ಲದೇ ಸಭೆಗೆ ಆಗಮಿಸಿದ್ದ ಪಶುಸಂಗೋಪನಾ ಇಲಾಖೆ ಅಧಿಕಾರಿಯನ್ನು ಒದ್ದು ಹೊರಗಡೆ ಕಳುಹಿಸಬೇಕಾ ಎಂದು ತರಾಟೆ ತೆಗೆದುಕೊಂಡು, ಇವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಎಂದು ಆದೇಶಿಸಿದರು.ಸಂತಾನ ಹರಣ ಯಾರಿಗೆ ಮಾಡಿದ್ದಾರೆ?:ನಗರದಲ್ಲಿ 2000ನೇ ಸಾಲಿನಿಂದಲೇ ಎಬಿಸಿ ಕಾರ್ಯ ಆರಂಭವಾಗಿದೆ. 2007ರಲ್ಲಿ ಬಿಬಿಎಂಪಿ ರಚನೆಯಾದ ಬಳಿಕ ಇದುವರೆಗೆ ಸುಮಾರು 8.80 ಲಕ್ಷ ನಾಯಿಗಳಿಗೆ ಎಬಿಸಿ ನಡೆಸಲಾಗಿದೆ. 2019ರ ಸಮೀಕ್ಷೆ ಪ್ರಕಾರ ನಗರದಲ್ಲಿ 3.10 ಲಕ್ಷ ಹಾಗೂ 2023ರ ಅಂದಾಜು ಪ್ರಕಾರ 2.79 ಲಕ್ಷ ಬೀದಿ ನಾಯಿಗಳಿವೆ. 2016 ರಿಂದ 2023ರವರೆಗೆ 3.33 ಲಕ್ಷ ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಲಾಗಿದೆ. ಹಣ ಎಲ್ಲಿಗೆ ಹೋಯಿತು, ಸಂತಾನ ಹರಣ ಯಾರಿಗೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಆಗ ಪಶು ಸಂಗೋಪನಾ ಇಲಾಖೆಯ ಅಧಿಕಾರಿಯು ಅಂಕಿ ಅಂಶ ನೀಡಲು ತಡವರಿಸಿದಾಗ, ಪಶುಸಂಗೋಪನೆ ಇಲಾಖೆಯಲ್ಲಿ 19 ಅಧಿಕಾರಿಗಳಿದ್ದರೂ ಅಗತ್ಯ ಮಾಹಿತಿ ಇಲ್ಲದೇ ಸಭೆಗೆ ಆಗಮಿಸಿದ್ದೀರಾ. ಇಲ್ಲಿ ತಮಾಷೆ ಮಾಡಲು ಬಂದಿದ್ದೀರಾ. ಒದ್ದು ಸಭೆಯಿಂದ ಹೊರಗೆ ಕಳುಹಿಸಬೇಕಾ ಎಂದು ಅಸಮಾಧಾನ ವ್ಯಕ್ತಪಡಿಸಿ ಇವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಎಂದು ಆದೇಶಿಸಿದರು.ಗಿಡ ನೆಡಲು ಸರಿಯಾಗಿ ಗುಂಡಿ ತೋಡಿದ್ದೀರಾ?:ಗಿಡ ನೆಡುವ ಕಾರ್ಯಕ್ರಮ ನಾನು ಜನಿಸುವ ಮೊದಲಿನಿಂದಲೂ ಇದೆ. ಬೆಂಗಳೂರಿನಲ್ಲಿ ಲಕ್ಷಾಂತರ ಗಿಡ ನೆಡಲು ಸರ್ಕಾರ ಕೋಟ್ಯಂತರ ರು. ಖರ್ಚು ಮಾಡುತ್ತದೆ. ಆದರೆ ಅವು ಎಲ್ಲಿಗೆ ಹೋಗುತ್ತಿವೆ. 2008ರಿಂದ ಇದುವರೆಗೆ ಸುಮಾರು 20 ಲಕ್ಷ ಸಸಿ ನೆಟ್ಟಿರುವುದಾಗಿ ದಾಖಲೆಗಳಿವೆ. ಆದರೆ ಮರಗಳ ಗಣತಿ ಪ್ರಕಾರ ಶೇ.85ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಸುಮಾರು 11 ಲಕ್ಷ ಮರ ಮಾತ್ರ ಇರುವ ಸಾಧ್ಯತೆ ಕಂಡುಬಂದಿದೆ. ಉಳಿದ ಸಸಿಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಗಿಡ ನೆಡಲು ಸರಿಯಾಗಿ ಗುಂಡಿ ತೋಡಿದ್ದೀರಾ ಎಂದು ತರಾಟೆ ತೆಗೆದುಕೊಮಡರು. ಜನರು ಮನೆಯ ಮೇಲೆ ಮರದ ಕೊಂಬೆ ಬೀಳುತ್ತದೆ ಎಂದರೆ ಅದನ್ನು ಕಟ್ ಮಾಡಲು ನೂರೆಂಟು ಕಾನೂನು ಹೇಳುತ್ತೀರಾ. ಆದರೆ ಕಮರ್ಷಿಯಲ್ ಬೋರ್ಡ್‌ಗೆ ಕೊಂಬೆ ಅಡ್ಡ ಬಂದರೆ ತಕ್ಷಣ ಕತ್ತರಿಸುತ್ತೀರಾ. 2008 ಕ್ಕೂ ಮುಂಚೆ ನೆಟ್ಟ ಗಿಡಗಳೆಲ್ಲ ಎಲ್ಲಿ ಹೋದವು. ಮೈಸೂರು ಮಹಾರಾಜರ ಕಾಲದ ಮರಗಳೆಲ್ಲ ಎಲ್ಲಿ ಹೋದವು ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ಜಿ.ಜಗದೀಶ್, ರಮೇಶ್ ಕೆ.ಎನ್, ಡಾ.ರಾಜೇಂದ್ರ ಕೆ.ವಿ, ವಿಶೇಷ ಆಯುಕ್ತ ವೆಂಕಟಾಚಲಪತಿ, ಅರಣ್ಯ ವಿಭಾಗ, ಪಶುಪಾಲನಾ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.3 ವರ್ಷದಲ್ಲಿ ಶೇ.100 ಎಬಿಸಿ
ಗುರಿ ಸಾಧಿಸಿ: ಕೃಷ್ಣ ಸೂಚನೆಜಿಬಿಎ ವ್ಯಾಪ್ತಿಯಲ್ಲಿ ಮುಂದಿನ ಮೂರು ವರ್ಷದಲ್ಲಿ ಶೇ.100 ಎಬಿಸಿ ಕಾರ್ಯ ಪೂರ್ಣಗೊಳಿಸಲು ಸಮಗ್ರ ಕಾರ್ಯಸೂಚಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಜಿಬಿಎ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು 50 ವರ್ಷಗಳಿಂದ ಪರಿಹರಿಸಲು ಪ್ರಯತ್ನಿಸಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಇದೇ ರೀತಿ ಮುಂದುವರಿದರೆ ಇನ್ನೂ ಹಲವು ವರ್ಷಗಳಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಕಟ್ಟುನಿಟ್ಟಿನ ಕಾರ್ಯತಂತ್ರ ರೂಪಿಸಿ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಸೂಚಿಸಲಾಗಿದೆ ಎಂದು ಹೇಳಿದರು. ಕಳೆದ ಐದು ವರ್ಷದಲ್ಲಿ ಎಬಿಸಿ ಶಸ್ತ್ರಚಿಕಿತ್ಸೆಗಾಗಿ ಸುಮಾರು 42 ಕೋಟಿ ರು. ವೆಚ್ಚ ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯಿಸುತ್ತಿದ್ದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ಪ್ರಸ್ತುತ ವರ್ಷಕ್ಕೆ ಸುಮಾರು 45 ಸಾವಿರ ಬೀದಿ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಇದನ್ನು 90 ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಮುಂದಿನ 3 ವರ್ಷ ಈ ರೀತಿ ಕಾರ್ಯನಿರ್ವಹಿಸಿ ಶೇ.100 ಎಬಿಸಿ ಸಾಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಪ್ರಸಕ್ತ ಸಾಲಿನಲ್ಲಿ 64,130 ಸಸಿ ನೆಡುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಸಹಭಾಗಿತ್ವದಲ್ಲಿ ಸಸಿ ನೆಟ್ಟು ಅವುಗಳ ಪೋಷಣೆಗೆ ಆದ್ಯತೆ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ಒಂದು ಸಸಿ ನೆಡಲು ₹2300 ವೆಚ್ಚಒಂದು ಸಸಿ ನೆಡುವ ಪ್ರಕ್ರಿಯೆಯಲ್ಲಿ ಗುಂಡಿ ತೋಡುವುದು, ಮುಚ್ಚುವುದು, ಸಸಿ ಖರೀದಿ, ರಕ್ಷಣಾ ಕವಚ ಅಳವಡಿಕೆ, ಕಡ್ಡಿ ಅಳವಡಿಕೆ, ನೀರುಣಿಸುವುದು, ಕಾವಲು, ಮೂರು ವರ್ಷಗಳ ನಿರ್ವಹಣೆ ಹಾಗೂ ಇತರೆ ವೆಚ್ಚಗಳನ್ನು ಸೇರಿ ಸುಮಾರು 2,300 ರು. ವ್ಯಯವಾಗುತ್ತದೆ. ಬದಲಿ ಸಸಿ ನೆಡುವ ಕಡ್ಡಾಯ ಅರಣ್ಯೀಕರಣ ಯೋಜನೆಯಲ್ಲಿ ಪ್ರತಿ ಸಸಿಗೆ ಸುಮಾರು 3,108 ರು. ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.