ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕಾಮುಕನಿಂದ ಪ.ಪಂಗಡದ ಕುಟುಂಬಕ್ಕೆ ತೀವ್ರ ಅನ್ಯಾಯವಾದರೂ ಈ ಬಗ್ಗೆ ಕ್ರಮ ಕೈಗೊಳ್ಳದೆ ಕೇಸು ಮುಚ್ಚಿ ಹಾಕುವ ಮುನ್ನಾರ ನಡೆದಿತ್ತು, ಆದರೆ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಸಕಾಲದಲ್ಲಿ ಮಧ್ಯ ಪ್ರವೇಶ ಮಾಡಿದ್ದರಿಂದ ನೊಂದ ಕುಟುಂಬಕ್ಕೆ ನ್ಯಾಯ ದೊರೆತು, ಸರ್ಕಾರದಿಂದ ಪರಿಹಾರ ಬಂದಿತು ಎಂದು ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಪೊಲೀಸರಿಂದ ಸೂಕ್ತ ರಕ್ಷಣೆ ದೊರಕದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿ ಮಹದೇವನಾಯಕ ಮೃತಪಟ್ಟ ನಂತರ ರಾಜಿ ಕಬೂಲಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಷಡ್ಯಂತ್ರ ನಡೆದಿತ್ತು. ಆದರೆ ಈ ವಿಚಾರ ತಿಳಿದ ಮಾಜಿ ಸಚಿವರು ಮುಂದೆ ನಿಂತು ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಿದ್ದಾರೆಂದು ತಿಳಿಸಿದರು.ಪುರಸಭೆ ಸದಸ್ಯ ನಟರಾಜು ಹೇಳಿಕೆ ನೀಡಿ, ಮಾಜಿ ಸಚಿವರು ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಕುಟುಂಬಕ್ಕೆ ಚೆಕ್ ಕೊಡಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ಶಾಸಕ ಡಿ. ರವಿಶಂಕರ್ ಅವರು ಈ ಕೆಲಸ ಮಾಡಿದ್ದರೆ ನಮ್ಮ ನಾಯಕರು ದೆಹಲಿಯಿಂದ ಬಂದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬದ ಪರವಾಗಿ ನಿಲ್ಲಬೇಕಿತ್ತೆ? ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಮುಂಬರುವ ಎಲ್ಲ ಚುನಾವಣೆಗಳಲ್ಲಿಯೂ ಮತದಾರರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪುರಸಭೆ ಸದಸ್ಯ ತೋಂಟದಾರ್ಯ, ಮಾಜಿ ಸದಸ್ಯ ಮಂಜುನಾಥ್, ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಚಂದಗಾಲು ಗ್ರಾಪಂ ಸದಸ್ಯ ಪಿ. ಮಹದೇವ್, ಜೆಡಿಎಸ್ ಮುಖಂಡರಾದ ರಾಘವೇಂದ್ರ, ಚಿಕ್ಕವೀರು ಇದ್ದರು.---------------