ಬಾಕಿ ಕೆರೆಗಳ ಸಮೀಕ್ಷೆ ನಡೆಸಲು ಮೂರು ತಿಂಗಳ ಗಡವು

KannadaprabhaNewsNetwork |  
Published : Sep 27, 2024, 01:35 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಬಾಕಿ ಇರುವ ಕೆರೆಗಳ ಸಮೀಕ್ಷಾ ಕಾರ್ಯವನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಿ ಒತ್ತುವರಿ ಗುರುತಿಸಬೇಕೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಜಿಲ್ಲೆಯಲ್ಲಿ ಬಾಕಿ ಇರುವ ಕೆರೆಗಳ ಸಮೀಕ್ಷಾ ಕಾರ್ಯವನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಿ ಒತ್ತುವರಿ ಗುರುತಿಸಬೇಕೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರುವ ಸೋಮವಾರದಿಂದಲೇ ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳಬೇಕು. ಈ ಸಂಬಂಧ ಕೆರೆಗಳ ಮಾಹಿತಿಯನ್ನು ಭೂ ದಾಖಲೆಗಳ ಉಪನಿರ್ದೇಶಕರಿಗೆ ನೀಡಿ, ದಿನಾಂಕ ಗೊತ್ತುಪಡಿಸಿ, ತಹಸೀಲ್ದಾರ್‌ಗಳ ನೇತೃತ್ವದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳದಲ್ಲಿದ್ದು ಸರ್ವೆ ಕಾರ್ಯ ಪೂರ್ಣಗೊಳಿಸಬೇಕು ಎಂದರು.ಭೂ ಕಬಳಿಕೆ ನಿಷೇಧ ಕಾಯ್ದೆ 192(ಎ) ಅನುಸಾರ ಕೆರೆಗಳ ಒತ್ತುವರಿ ತೆರವುಗೊಳಿಸುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿದೆ. ಒತ್ತುವರಿ ತೆರವುಗೊಳಿಸಲು ವಿಫಲರಾದ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜು ತೋರದೆ 192(ಬಿ) ಅಡಿ ಪ್ರಕರಣ ದಾಲಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.ಬೃಹತ್ ನೀರಾವರಿ, ಸಣ್ಣ ನೀರಾವರಿ, ಪಂಚಾಯತ್ ಎಂಜಿನಿಯರಿಂಗ್, ಗ್ರಾಪಂ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜಲಮೂಲಗಳನ್ನು ವೈಜ್ಞಾನಿಕವಾಗಿ ಗುರುತಿಸಬೇಕು. ಹೀಗೆ ಗುರುತಿಸಿದ ಜಲಮೂಲಗಳ ಸರ್ವೇ ಕಾರ್ಯವನ್ನು ಇಲಾಖಾವಾರು ಕೈಗೊಂಡು, ಒತ್ತುವರಿ ಕಂಡುಬಂದರೆ ತಕ್ಷಣವೇ ತೆರವಿಗೆ ಮುಂದಾಗಬೇಕು ಎಂದು ತಾಕೀತು ಮಾಡಿದರು.

ಯಾವುದೇ ಕಾರಣಕ್ಕೂ ಸುಪ್ರಿಂಕೋರ್ಟ್ ಹಾಗೂ ಹಸಿರು ನ್ಯಾಯಾಧೀಕರಣ ನೀಡಿರುವ ತೀರ್ಪುಗಳನ್ನು ಉಲಂಘಿಸಿ ಕೆರೆ ಹಾಗೂ ಜಲಮೂಲಗಳ ಬಫರ್ ಜೋನ್ ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕಾರ್ಯಗಳಿಗೆ ಅನುಮತಿ ನೀಡಬಾರದು ಎಂದರು.

ಜಿಲ್ಲೆಯಲ್ಲಿ 437 ಜಲಮೂಲಗಳನ್ನು ಗುರುತಿಸಲಾಗಿದೆ. ಇದರಲ್ಲಿ ಸಣ್ಣ ನೀರಾವರಿ ಇಲಾಖೆಯಡಿ 166 ಕೆರೆಗಳಿವೆ. ಈ ಪೈಕಿ 2 ಕೆರೆಗಳ ಸರ್ವೆ ಕಾರ್ಯ ಬಾಕಿ ಇದೆ. ಸರ್ವೆ ನಡೆಸಿದ ಕೆರೆಗಳ ಪೈಕಿ 75 ಕೆರೆಗಳಲ್ಲಿ ಒತ್ತುವರಿ ಗುರುತಿಸಲಾಗಿದ್ದು, 64 ಕೆರೆಗಳ ಒತ್ತುವರಿ ತೆರವು ಗೊಳಿಸಲಾಗಿದೆ. 11 ಕೆರೆಗಳ ಒತ್ತುವರಿ ಬಾಕಿಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪಂಚಾಯತ್ ಎಂಜಿನಿಯರಿಂಗ್ ಹಾಗೂ ಗ್ರಾಮ ಪಂಚಾಯಿತಿಗಳ ಅಡಿ 269 ಕೆರೆಗಳಿದ್ದು, 134 ಕೆರೆಗಳ ಸರ್ವೆ ಪೂರ್ಣಗೊಳಿಸಲಾಗಿದೆ. 135 ಕೆರೆಗಳ ಸರ್ವೆ ಕಾರ್ಯ ಬಾಕಿಯಿದೆ. 29 ಕೆರೆಗಳಲ್ಲಿ ಒತ್ತುವರಿ ಗುರುತಿಸಲಾಗಿದ್ದು, 10 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಬೃಹತ್ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 2 ಕೆರೆಗಳಿವೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಸರ್ವೆ ಕಾರ್ಯ ಪೂರ್ಣಗೊಂಡು ಸರಹದ್ದು ಗುರುತಿಸಿದ ಕೆರೆಗಳ ಸುತ್ತಲೂ ಸಂಬಂಧ ಪಟ್ಟ ಅಧಿಕಾರಿಗಳು ಟ್ರಂಚ್ ಹೊಡಿಸಬೇಕು. ಕಲ್ಲುಗಂಬಗಳನ್ನು ನೆಟ್ಟು ಬೇಲಿ ಅಳವಡಿಸಬೇಕು. ಜತೆಗೆ ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ಪಡೆದು ಬಯೋ ಫೆನ್ಸಿಂಗ್ ಅಳವಡಿಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮನ್ರೇಗಾದಡಿ ಗ್ರಾಮ ಪಂಚಾಯಿತಿಗಳಲ್ಲಿ ಕೆರೆಗಳ ಸುತ್ತಲೂ ಗಿಡಗಳನ್ನು ಬೆಳೆಸಲು ಯೋಜನೆ ರೂಪಿಸಬೇಕು. ಸರಹದ್ದು ಗುರುತಿಸಿದ ನಂತರ, ಕೆರೆಗಳನ್ನು ಒತ್ತುವರಿ ಮಾಡಿ ಉಳಿಮೆ ಹಾಗೂ ಇತರೆ ಚಟುವಟಿಕೆ ಕೈಗಳ್ಳುತ್ತಿರುವವರನ್ನು ಅಲ್ಲಿಂದ ತೆರವುಗೊಳಿಸಬೇಕು. ತೆರವಿನ ವೇಳೆ ಯಾವುದೇ ಕಾನೂನು ಸುವ್ಯವಸ್ಥೆಗೆ ತೊಡಕು ಕಂಡುಬಂದರೆ ಸಂಬಂಧ ಪಟ್ಟ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯಿಂದ ರಕ್ಷಣೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ತಿಳಿಸಿದರು.ಎಲ್ಲ ತಾಲೂಕುಗಳ ತಹಸೀಲ್ದಾರರು ತಮ್ಮ ಅಧ್ಯಕ್ಷತೆಯಲ್ಲಿ ವಾರದೊಳಗೆ ತಾಲೂಕು ಕೆರೆ ಸಂರಕ್ಷಣ ಸಮಿತಿ ಸಭೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸಭೆಯಲ್ಲಿ ನಿರ್ದೇಶನ ನೀಡಿದರು.

ಚಿತ್ರದುರ್ಗ ನಗರದ ಮಠದ ಕುರಬರಹಟ್ಟಿ, ಹಿರಿಯೂರಿನ ಯರದಕಟ್ಟೆ, ಚಳ್ಳಕೆರೆ ನಗರಂಗೆರೆ, ಹೊಳಲ್ಕೆರೆ ಪಟ್ಟಣದ ಹೆಸರಗಟ್ಟೆ (ಶಿವನ ಕೆರೆ) ಕೆರೆಗಳನ್ನು ನಿಯಮಾನುಸಾರ ನಗರ ಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕು. ಸರ್ಕಾರ ಹಾಗೂ ನಗರಭಿವೃದ್ಧಿ ಪ್ರಾಧಿಕಾರಗಳ ಅನುದಾದಡಿ ಈ ಕೆರೆಗಳ ಸೌಂದರ್ಯಿಕರಣ, ಕೆರೆ ಆವಾಸದ ಸಂರಕ್ಷಣೆಗೆ ಯೋಜನೆ ರೂಪಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಲ್ಲಿಕಾರ್ಜುನ್, ಭೂದಾಖಲೆಗಳ ಉಪನಿರ್ದೇಶಕ ರಾಮಾಂಜಿನೇಯ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ತಹಸೀಲ್ದಾರರಾದ ಡಾ. ನಾಗವೇಣಿ, ರೆಹಮಾನ್ ಪಾಷ, ತಿರುಪತಿ ಪಾಟೀಲ್, ಫಾತೀಮಾ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.-------ಪೋಟೋ ಕ್ಯಾಪ್ಷನ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿದರು. 26 ಸಿಟಿಡಿ 1

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌