ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್) ಅಧಿಕಾರಿಗಳ ಸೋಗಿನಲ್ಲಿ ಹತ್ತು ಜನರಿಂದ 50 ಲಕ್ಷ ರು. ವಸೂಲಿ ಮಾಡಿ ಇಬ್ಬರು ಕಿಡಿಗೇಡಿಗಳು ವಂಚಿಸಿರುವ ಕೃತ್ಯ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಕರ್ನಾಟಕ ಹಾಲು ಮಹಾ ಮಂಡಳದ (ಕೆಎಂಎಫ್) ಅಧಿಕಾರಿಗಳ ಸೋಗಿನಲ್ಲಿ ಹತ್ತು ಜನರಿಂದ 50 ಲಕ್ಷ ರು. ವಸೂಲಿ ಮಾಡಿ ಇಬ್ಬರು ಕಿಡಿಗೇಡಿಗಳು ವಂಚಿಸಿರುವ ಕೃತ್ಯ ಬೆಳಕಿಗೆ ಬಂದಿದೆ.ಎನ್.ಕೃಷ್ಣನ್ ಹಾಗೂ ನಾಗರಾಜ್ ವಿರುದ್ಧ ವಂಚನೆ ಆರೋಪ ಬಂದಿದ್ದು, ಈ ಸಂಬಂಧ ಕರಿಗೌಡ ಎಸ್. ಪಾಟೀಲ್ ನೀಡಿದ ದೂರಿನ ಮೇರೆಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಂಚನೆ ಹೇಗೆ?ನಾಲ್ಕು ವರ್ಷಗಳ ಹಿಂದೆ ಮಲ್ಲೇಶ್ವರದ ಹೋಟೆಲ್‌ನಲ್ಲಿ ಸ್ನೇಹಿತ ಗೋಪಿ ಮೂಲಕ ಎನ್. ಕೃಷ್ಣನ್ ಪರಿಚಯವಾಯಿತು. ಆಗ ತನ್ನನ್ನು ಕೆಎಎಸ್ ಅಧಿಕಾರಿ ಹಾಗೂ ಕೆಎಫ್‌ಎಂ ನಿರ್ದೇಶಕ ಎಂದು ಕೃಷ್ಣನ್ ಹೇಳಿಕೊಂಡಿದ್ದರು. ಅದೇ ವೇಳೆ ನಾಗರಾಜ್ ಸಹ ತಾನು ಕೆಎಂಎಫ್ ಉನ್ನತ ಹುದ್ದೆಯಲ್ಲಿರುವುದಾಗಿ ಐಡಿಯನ್ನು ತೋರಿಸಿ ಪರಿಚಯ ಮಾಡಿಕೊಂಡಿದ್ದರು. ನಮಗೆ ಕೆಎಂಎಫ್‌ನಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವಿದೆ ಎಂದಿದ್ದರು. ಸದ್ಯ ಒಟ್ಟು 25 ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ ಎಂದು ಆರೋಪಿಗಳು ನಂಬಿಸಿದ್ದಾಗಿ ಕರಿಗೌಡ ಪಾಟೀಲ್ ಆರೋಪಿಸಿದ್ದಾರೆ.
ಈ ಹುದ್ದೆಗಳಿಗೆ ಆಯ್ಕೆ ಮಾಡಲು ಯಾವುದೇ ಪರೀಕ್ಷೆ ಅಥವಾ ಸಂದರ್ಶನ ಅಗತ್ಯವಿಲ್ಲ, ಪ್ರತಿ ಅಭ್ಯರ್ಥಿಗೆ 10 ಲಕ್ಷ ರು. ಸರ್ಕಾರದ ಶುಲ್ಕ ಪಾವತಿಸಿದ್ದಲ್ಲಿ ಮೂರು ತಿಂಗಳಲ್ಲಿ ನೇಮಕಾತಿ ಪತ್ರ ನೀಡಲಾಗುತ್ತದೆ ಎಂದು ಕೃಷ್ಣನ್ ಹಾಗೂ ನಾಗರಾಜ್ ಹೇಳಿದ್ದರು. ಈ ಮಾತು ನಂಬಿ ನಮ್ಮ ಸಂಬಂಧಿಕರಾದ ವಿಜಯೇಂದ್ರ.ಎಸ್.ಪಾಟೀಲ, ಮಧು ಜಿ.ಡಿ, ಅನಿತಾ ಎಸ್, ಸೂರಜ್ ಪಿ, ಅಕ್ಷಯ ನಾಯಕ್ ಎಂ. ಹಾಗೂ ಇನ್ನು ಐದು ಅಭ್ಯರ್ಥಿಗಳ ಜತೆ ಚರ್ಚಿಸಿದೆ. ಬಳಿಕ 2022ರ ಡಿಸೆಂಬರ್ ನಿಂದ 2023 ಡಿಸೆಂಬರ್‌ವರೆಗೆ ಹಂತ ಹಂತವಾಗಿ ಮಲ್ಲೇಶ್ವರದ ಹೋಟೆಲ್‌ನಲ್ಲಿ ಆರೋಪಿಗಳಿಗೆ 50 ಲಕ್ಷ ರು. ನೀಡಿದೆ.ಆನಂತರ ಕೃಷ್ಣನ್ ಹಾಗೂ ನಾಗರಾಜ್ ರವರೊಂದಿಗೆ 10 ಅಭ್ಯರ್ಥಿಗಳು ಕೂಡಿ ಮಾರ್ಚ್ 2024 ರಲ್ಲಿ ಒಪ್ಪಂದ ಪತ್ರ ಮಾಡಿಕೊಂಡಿರುತ್ತೇವೆ. ಅದರಲ್ಲಿ ಎಲ್ಲರೂ ಪಾವತಿಸಿದ ಹಣದ ವಿವರ ಮತ್ತು ಉದ್ಯೋಗ ಸಿಗದಿದ್ದಲ್ಲಿ ನಿಮ್ಮ ಹಣವನ್ನು ಮರಳಿ ಪಡೆಯಬಹುದು ಎಂದು ಹೇಳಿ ಅಭ್ಯರ್ಥಿಗಳಿಗೆ ಅವರು ಚೆಕ್ ನೀಡಿದ್ದರು. ನಂತರ ಮೈಸೂರಿನಲ್ಲಿ ಸಂದರ್ಶನ ನಡೆಯಲಿದೆ ಎಂದು ಕೆಎಂಎಫ್ ಹೆಸರಿನಲ್ಲಿ ಇಮೇಲ್ ಕಳುಹಿಸಿದ್ದರು ಎಂದು ದೂರಿನಲ್ಲಿ ಪಾಟೀಲ್ ವಿವರಿಸಿದ್ದಾರೆ.
ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟರು!ಒಪ್ಪಂದ ನಂತರ ನೇಮಕಾತಿ ಪತ್ರಗಳನ್ನು ಅಭ್ಯರ್ಥಿಗಳಿಗೆ ನೀಡಿರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಸರ್ಕಾರ ಬದಲಾಗಿದೆ ಎಂದು ಹೇಳಿ ಇನ್ನು ಹೆಚ್ಚಿನ ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ನಾವು ನಮಗೆ ಹಣಕಾಸಿನ ತೊಂದರೆ ಇರುವುದರಿಂದ ಹೆಚ್ಚಿನ ಹಣವನ್ನು ನೀಡಲು ಆಗುವುದಿಲ್ಲ. ನಮ್ಮ ಹಣವನ್ನು ಮರಳಿಕೊಡಿ ಎಂದು ಆಗ್ರಹಿಸಿದರು. ಆಗ ಈಗಾಗಲೇ ನಿಮ್ಮ ಹೆಸರನ್ನು ಕೆಎಂಎಫ್ ಆಯ್ಕೆ ಪಟ್ಟಿಯಲ್ಲಿ ಸೇರಿಸಲಾಗಿದೆ. ನೀವು ಹೆಚ್ಚಿನ ಹಣವನ್ನು ನೀಡಬೇಕು ಇಲ್ಲವಾದರೆ ಹಣವನ್ನು ಮರಳಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಹೀಗೆ ಕೆಎಂಎಫ್ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಕೃಷ್ಣನ್ ಹಾಗೂ ನಾಗರಾಜ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕರಿಗೌಡ ಆಗ್ರಹಿಸಿದ್ದಾರೆ.
