ಕನ್ನಡಪ್ರಭ ವಾರ್ತೆ ಯಾದಗಿರಿ/ದಾವಣಗೆರೆ
ಫೇಸ್‌ಬುಕ್‌ನಲ್ಲಿ ಪ್ರೀತಿಸಿ ಮದುವೆಯಾದ ಪತ್ನಿ ಹಾಗೂ ಅತ್ತೆ-ಮಾವ ಸೇರಿದಂತೆ ಮೂವರನ್ನು ಬರ್ಬರವಾಗಿ ಕೊಂದು ಹಾಕಿದ ಪೈಶಾಚಿಕ ಕೃತ್ಯ ಇಲ್ಲಿನ ಸಮೀಪದ ಸೈದಾಪುರದಲ್ಲಿ ನಡೆದಿದೆ.
ದಾವಣಗೆರೆ ನಗರದ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ಬಡಾವಣೆಯ ನಿವಾಸಿ, ದಾವಣಗೆರೆ ಕ್ಲಬ್‌ನ ನೌಕರ ಬಸವರಾಜಪ್ಪಅಲಿಯಾಸ್ ಬಸಪ್ಪ (61 ವರ್ಷ), ಪತ್ನಿ ಕವಿತಾ (57) ಹಾಗೂ ಪುತ್ರಿ ಅನ್ನಪೂರ್ಣ(30) ಬರ್ಬರವಾಗಿ ಹತ್ಯೆಯಾದ ದುರ್ದೈವಿಗಳು. ದಾವಣಗೆರೆ ಮೂಲದ ಅನ್ನಪೂರ್ಣಳ ಪತಿ, ಯಾದಗಿರಿ ಸಮೀಪದ ಸೈದಾಪುರದ ಮುನುಗಲ್ ನಿವಾಸಿ ನವೀನ್ ಹಾಗೂ ಆತನ ತಂದೆ ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಎಂಬಿಬ್ಬರನ್ನು ಸೈದಾಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ.ಸೈದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾ ಕೆಲಸಕ್ಕಿದ್ದ ನವೀನ್ ಹಾಗೂ ದಾವಣಗೆರೆಯ ಅನ್ನಪೂರ್ಣ ಮಧ್ಯೆ ಫೇಸ್‌ಬುಕ್ ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ನಂತರ ಉಭಯರು ಕುಟುಂಬಸ್ಥರ ಮನವೊಲಿಸಿ ಮದುವೆಯಾಗಿದ್ದರು. ನವೀನ, ಅನ್ನಪೂರ್ಣ ದಂಪತಿಗೆ ಒಂದೂವರೆ ವರ್ಷದ ಗಂಡು ಮಗುವಿದೆ. ಕಳೆದೊಂದು ವರ್ಷದಿಂದ ನವೀನ, ಅನ್ನಪೂರ್ಣ ಮಧ್ಯೆ ಬಿರುಕು ಮೂಡಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಅನ್ನಪೂರ್ಣ ತನ್ನ ತವರು ಮನೆ ದಾವಣಗೆರೆಯಲ್ಲಿ ತಂದೆ-ತಾಯಿ ಜೊತೆ ಮಗುವಿನೊಂದಿಗೆ ವಾಸವಿದ್ದಳು.
ನವೀನ್ ತನ್ನ ಪತ್ನಿ ಅನ್ನಪೂರ್ಣಗೆ ಡೈವೋರ್ಸ್ ಕೊಡಲು ಬಯಸಿದ್ದ ಎನ್ನಲಾಗಿದೆ. ಆದರೆ, ಪತಿ ಜೊತೆಗಿರಲು ಅನ್ನಪೂರ್ಣ ಬಯಸಿದ್ದಳು. ಇದೇ ಕಾರಣಕ್ಕೆ ಜಗಳವೂ ಆಗಿತ್ತಂತೆ. ರಾಜಿ ಪಂಚಾಯಿತಿಗೆಂದು ಪತ್ನಿ, ಅತ್ತೆ ಹಾಗೂ ಮಾವನನ್ನು ಸೈದಾಪುರಕ್ಕೆ ಸೋಮವಾರ ಕರೆಸಿಕೊಂಡಿದ್ದರು. ಪ್ರತ್ಯೇಕ ಸ್ಥಳದಲ್ಲಿ ನವೀನ್ ಹಾಗೂ ಮತ್ತಿತರರು ಎರಡು ದಿನಗಳ ಹಿಂದೆಯೇ ದಾವಣಗೆರೆಯ ಬಸವರಾಜಪ್ಪ, ಆತನ ಪತ್ನಿ ಕವಿತಾ ಹಾಗೂ ಮಗಳು ಅನ್ನಪೂರ್ಣರನ್ನು ಕೊಲೆ ಮಾಡಿದ್ದಾರೆ.ಅನ್ನಪೂರ್ಣ ಪೋಷಕರ ಜೊತೆ ಮೊನ್ನೆ ಸೋಮವಾರ ಸೈದಾಪುರಗೆ ಬಂದಿದ್ದರಲ್ಲದೇ, ಪತಿ ನವೀನನ ಕಿರುಕುಳದ ಕುರಿತು ಸೈದಾಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಮತ್ತೊಂದು ಮದುವೆಯಾಗುತ್ತಿರುವುದರಿಂದ ತನಗೆ ವಿಚ್ಛೇದನ ನೀಡುವಂತೆ ನವೀನ್ ತೀವ್ರ ಒತ್ತಡ ಹೇರಿದಾಗ, ಪತ್ನಿ ಅನ್ನಪೂರ್ಣಳ ಅದಕ್ಕೆ ನಿರಾಕರಿಸಿದ್ದಾಳೆ. ಪತಿಯ ಜೊತೆಯಲ್ಲೇ ಇರುವುದಾಗಿಯು ಹಾಗೂ ತನಗೆ ವಿವಾಹ ವಿಚ್ಛೇದನ ಬೇಡ ಎಂದು ಬರೆದಿಕೊಟ್ಟಿದ್ದಳು ಎನ್ನಲಾಗಿದೆ.
ಪತ್ನಿ ಅನ್ನಪೂರ್ಣಳ ನಿಲುವಿನಿಂದ ಕೋಪಗೊಂಡ ನವೀನ್, ಹೆಂಡತಿ ಹಾಗೂ ಅತ್ತೆ ಮಾವರನ್ನು ಮುನುಗಲ್‌ನ ಮನೆಗೆ ಕರೆದುಕೊಂಡು ಹೋಗದೆ, ಸೈದಾಪುರನ ಲಾಡ್ಜ್ ನಲ್ಲಿ ವಸತಿ ಮಾಡಿಸಿ, ಮಂಗಳವಾರ ಮಗು ಸಮೇತ ಎಲ್ಲರನ್ನೂ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ವಡಗೇರಾ ತಾಲೂಕಿನ ಗೋನಾಲ ಹತ್ತಿರ ಮಾವ ಬಸವರಾಜನನ್ನು ರಾಡ್ ಹಾಗೂ ಚಾಕುವಿನಿಂದ ಇರಿದು ಕೊಲೆಗೈದು, ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗಿದ್ದಾನೆ. ನಂತರ ಪತ್ನಿ ಹಾಗೂ ಅತ್ತೆ ಕವಿತಾಳನ್ನು ಜೋಳದಡಗಿ ಹತ್ತಿರ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಇತ್ತ, ಬಸವರಾಜಪ್ಪ ಫೋನ್ ಸ್ವೀಕರಿಸಿದ್ದಕ್ಕೆ ದಾವಣಗೆರೆಯಿಂದ ಸಂಬಂಧಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪೊಲೀಸರು ನವೀನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ತನ್ನ ನೀಚ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಸೈದಾಪುರ ಹಾಗೂ ವಡಗೇರಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ಪರಿಶೀಲನೆ ಮಾಡಿದ್ದಾರೆ. ನವೀನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಕೆಲವರ ಶಾಮೀಲು ಶಂಕೆ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಿದ್ದಾರೆ. ಅದೃಷ್ಟವಷಾತ್ ಮೃತ ಅನ್ನಪೂರ್ಣಳ ಒಂದೂವರೆ ವರ್ಷದ ಗಂಡು ಮಗು ಪಾರಾಗಿದ್ದು, ಪೊಲೀಸರು ರಕ್ಷಣೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ಗಾಬರಿಗೊಂಡ ನವೀನ್ ಮಗುವನ್ನು ಮನೆಯಲ್ಲಿಯೇ ಬಿಟ್ಟು ಬೆಳಗಾವಿಗೆ ತೆರಳಿದ್ದಾರೆ. ಮಗು ಈ ವಿಚಾರ ಬಾಯ್ಬಿಟ್ಟಿದೆ. ದಾವಣಗೆರೆಯಿಂದ ಬಸವರಾಜಪ್ಪನ ಬಂಧು, ಬಳಗದವರು ದೌಡಾಯಿಸಿದ್ದಾರೆ. ಅತ್ತ ದಾವಣಗೆರೆಯಲ್ಲೂ ಆರೋಪಿ ನವೀನನ ಕುಟುಂಬದ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ದುರ್ದೈವಿ ಕುಟುಂಬ, ಬಂಧು-ಬಳಗ ರೋಧನದಾವಣಗೆರೆ ಕ್ಲಬ್ ನೌಕರ, ಪತ್ನಿ, ಪುತ್ರಿಯ ಹತ್ಯೆಗೆ ಆಕ್ರೋಶ
ದಾವಣಗೆರೆ: ದಾವಣಗೆರೆ ಕ್ಲಬ್‌ನಲ್ಲಿ ಕೆಲಸ ಮಾಡಿಕೊಂಡು ಸುಂದರ ಬದುಕನ್ನು ಕಟ್ಟಿಕೊಂಡಿದ್ದ ಶ್ರಮಜೀವಿನ ಬಸವರಾಜಪ್ಪ, ಆತನ ಪತ್ನಿ ಕವಿತಾ ಹಾಗೂ ಮಗಳು ಅನ್ನಪೂರ್ಣ ಸೈದಾಪುರ ಬಳಿ ಭೀಕರವಾಗಿ ಹತ್ಯೆಯಾಗಿರುವುದಕ್ಕೆ ಇಡೀ ಕುಟುಂಬ ವರ್ಗ, ಬಂಧು- ಬಳಗ, ಸ್ನೇಹಿತರು ಆತಂಕಕ್ಕೀಡಾಗಿದ್ದಾರೆ.ನಗರದ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ಬಡಾವಣೆ ವಾಸಿಯಾದ, ಉಪ್ಪಾರ ಸಮುದಾಯದ ಬಸವರಾಜಪ್ಪ ಸಜ್ಜನ ವ್ಯಕ್ತಿತ್ವದವರು. ತಾನಾಯಿತು, ತನ್ನ ಕೆಲಸವಾಯಿತು, ತನ್ನ ಕುಟುಂಬವಾಯಿತು ಎಂಬಂತೆ ಬಾಳು ನಡೆಸುತ್ತಿದ್ದ ಸಜ್ಜನ ವ್ಯಕ್ತಿ. ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದ ಅಳಿಯನಿಗೆ ಬುದ್ಧಿ ಹೇಳಿ, ನಾವೇ ತಲೆ ಬಾಗಿ ಅಳಿಯನ ಮನವೊಲಿಸುವ ಉದ್ದೇಶ ಇಟ್ಟುಕೊಂಡು, ಮಗಳ ಗಂಡನ ಮನೆಗೆ ಹೋಗಿದ್ದರು.
ರಾಜಿ ಪಂಚಾಯಿತಿಗೆಂದು ಕರೆಸಿಕೊಂಡ ಅಳಿಯ ನವೀನ ಹಾಗೂ ಆತನ ಸಹಚರರ ಪೈಶಾಚಿಕ ಕೃತ್ಯದಿಂದಾಗಿ ಬಸವರಾಜಪ್ಪ ತನ್ನ ಪತ್ನಿ, ಮಗಳ ಸಮೇತ ಸಾವಿನ ಮನೆಗೆ ಹೋಗುತ್ತಿದ್ದೇನೆಂಬುದನ್ನೇ ಅರಿಯದೇ ಬಲಿಯಾಗಿರುವುದು ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ವಿಷಯ ತಿಳಿಯುದ್ದಂತೆ ಕುಟುಂಬದವರು ಸೈದಾಪುರಕ್ಕೆ ತೆರಳಿದ್ದು, ಇಲ್ಲಿಯೂ ಸಹ ದೂರು ದಾಖಿಲಸಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.