ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ ವಿವಿಧ ರಾಜ್ಯಗಳಿಂದ ನೀಟ್‌ಗೆ ವಿರೋಧ ವ್ಯಕ್ತವಾಗಿರುವ ನಡುವೆಯೇ ಕರ್ನಾಟಕ ವಿಧಾನಸಭೆಯಲ್ಲೂ ನೀಟ್ ವಿರೋಧಿಸಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಬಗ್ಗೆ ಸರ್ಕಾರದಲ್ಲಿ ಗಂಭೀರ ಚರ್ಚೆ ನಡೆದಿದೆ. ತಮಿಳುನಾಡು ಸರ್ಕಾರ ನೀಟ್ ವಿರುದ್ಧ ತನ್ನ ಶಾಸನಸಭೆಗಳಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ವಿಧಾನಸಭೆಯಲ್ಲಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಜಾರಿಯಲ್ಲಿರುವ ನೀಟ್ ರದ್ದುಪಡಿಸಿ, ಈ ಹಿಂದೆ ಇದ್ದಂತೆ ಆಯಾ ರಾಜ್ಯಗಳಿಗೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡಲು ಅವಕಾಶ ನೀಡುವಂತೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಚರ್ಚಿಸಲಾಗಿದೆ ಎಂದು ಹಿರಿಯ ಸಚಿವರೊಬ್ಬರು ಮಾಹಿತಿ ನೀಡಿದ್ದಾರೆ.ನೀಟ್‌ನಲ್ಲಿ ಪರೀಕ್ಷಾ ಅಕ್ರಮ, ಫಲಿತಾಂಶ ಪ್ರಕಟಣೆಯಲ್ಲ ಭಾರೀ ಲೋಪಗಳಾಗಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ನೀಟ್ ಪಾವಿತ್ರ್ಯತೆ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ, ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯ, ರಾಜ್ಯದ ಕಾಲೇಜಿನ ಸೀಟುಗಳು ಅನ್ಯ ರಾಜ್ಯದವರ ಪಾಲಾಗುತ್ತಿರುವುದು, ಪರೀಕ್ಷಾ ಒತ್ತಡ ಸೇರಿದಂತೆ ಅನೇಕ ಆರೋಪಗಳು ಕೇಳಿಬರುತ್ತಿವೆ. ಹಾಗಾಗಿ ಕರ್ನಾಟಕವು ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸುವ ಸಿಇಟಿ ಮಾದರಿಯಾಗಿದೆ. ಹಾಗಾಗಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೂ ಇದೇ ಮಾದರಿ ಅನುಸರಿಸಲು ಅವಕಾಶ ನೀಡಬೇಕು. ಇದರಿಂದ ಕರ್ನಾಟಕದವರಿಗೆ ಹೆಚ್ಚಿನ ಪಾಲು ಸಿಗಲಿದೆ ಎಂಬುದು ಸಚಿವರ ವಾದವಾಗಿದೆ.ಇದೇ ಅಧಿವೇಶನದಲ್ಲಿ ಶಾನಸಸಭೆಯಿಂದ ನೀಟ್ ಬೇಡ ಎಂಬ ನಿರ್ಣಯ ಪಾಸ್ ಮಾಡಿ ಕೇಂದ್ರಕ್ಕೆ ಕಳಿಸುವ ಮೂಲಕ ಒತ್ತಡ ಹೇರಬಹುದು. ಹೆಚ್ಚಿನ ರಾಜ್ಯಗಳು ಇಂತಹ ಒತ್ತಡ ತಂದಾಗ ಕೇಂದ್ರ ಸರ್ಕಾರ ಕೂಡ ಕೊಂಚ ಯೋಚಿಸಬೇಕಾದ ವಾತಾವರಣ ಸೃಷ್ಟಿಯಾಗಲಿದೆ ಎಂಬುದು ಸಚಿವರ ಅಭಿಪ್ರಾಯವಾಗಿದೆ.