ವಿವಿಧೆಡೆ ಮುಂದುವರೆದ ಹಾನಿ। ತೋಟ, ಕೊಟ್ಟಿಗೆ ಜಖಂ । ಮಹಲ್ಗೋಡಲ್ಲಿ ರಸ್ತೆ ಬಂದ್ । ಜಮೀನು, ಸಂತೆ ಮಾರುಕಟ್ಟೆಗೆ ನೀರು
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಕಳೆದ ಐದು ದಿನಗಳಿಂದ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಪುನರ್ವಸು ಮಳೆ ಅಬ್ಬರ ಗುರುವಾರ ಪುನಃ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಳಿಸಿದೆ.ಬುಧವಾರ ಕೊಂಚ ಕಡಿಮೆಯಾಗಿದ್ದ ಮಳೆ ರಾತ್ರಿ ಬಳಿಕ ಮತ್ತೆ ಬಿರುಸುಗೊಂಡು ಗುರುವಾರ ಇಡೀ ದಿನ ಧಾರಾಕಾರವಾಗಿ ಸುರಿದಿದೆ. ಭಾರೀ ಮಳೆ, ಗಾಳಿಗೆ ರಂಭಾಪುರಿ ಪೀಠ-ಮೇಲ್ಪಾಲ್ ಕೊಪ್ಪ ಸಂಪರ್ಕ ರಸ್ತೆಯ ಕೋಣೆಮನೆ ಎಂಬಲ್ಲಿ ಗುರುವಾರ ಬೆಳಿಗ್ಗೆ ಬೃಹತ್ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು. ಮೇಗರಮಕ್ಕಿ ಗ್ರಾಮದ ಬಿಂತ್ರವಳ್ಳಿ ದ್ಯಾವಯ್ಯ ಎಂಬುವರ ಅಡಕೆ ತೋಟದಲ್ಲಿ ಬೃಹತ್ ಗಾತ್ರದ ಮರ ಬಿದ್ದು ಹಾನಿ ಯಾಗಿದೆ. ಆಡುವಳ್ಳಿ ಗ್ರಾಮದ ಗಡಿಗೇಶ್ವರದ ಸುಂದರೇಶ್ ಅವರ ದನದ ಕೊಟ್ಟಿಗೆ ಮಳೆ, ಗಾಳಿಗೆ ಕುಸಿದಿದೆ. ಪಟ್ಟಣದ ಸುದರ್ಶಿನಿ ಚಿತ್ರಮಂದಿರ ಸಮೀಪ ಕಾಂಕ್ರಿಟ್ ರಸ್ತೆಯ ಕೆಳಭಾಗದ ರಿವಿಟ್‌ಮೆಂಟ್ ಕುಸಿದಿದೆ. ಮಳೆ ಮುಂದುವರಿದಲ್ಲಿ ಕೆಲವು ಮನೆಗಳಿಗೆ ತೆರಳಲು ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.ಬಾಳೆಹೊನ್ನೂರು ಬಳಿಯ ಮಾಗುಂಡಿಯಿಂದ ಕಳಸ-ಹೊರನಾಡು ಸಂಪರ್ಕದ ಮಹಲ್ಗೋಡು ಸೇತುವೆ ಮೇಲ್ಭಾಗದಲ್ಲಿ ಪ್ರವಾಹದ ನೀರು ಹರಿಯುತ್ತಿದ್ದು, ಕೆಲವು ವಾಹನಗಳು ಅಪಾಯವನ್ನರಿಯದೆ ಸೇತುವೆ ಮೇಲೆ ತೆರಳುತ್ತಿದ್ದವು. ಸ್ಥಳೀಯರು ವಾಹನಗಳನ್ನು ಪ್ರವಾಹದ ನೀರಿನಲ್ಲಿ ಚಲಾಯಿಸದಂತೆ ಮನವಿ ಮಾಡಿದರೂ ಗಮನಿಸಲಿಲ್ಲ.
ಗುರುವಾರ ಪುನರ್ವಸು ಮಳೆ ನಕ್ಷತ್ರ ಕೊನೆ ದಿನವಾಗಿದ್ದು, ಎಡೆಬಿಡದೆ ಧಾರಾಕಾರವಾಗಿ ಸುರಿಯುತ್ತಿದೆ. ಭದ್ರಾನದಿಯಲ್ಲಿ ನೀರು ಪುನಃ ಅಪಾಯದ ಮಟ್ಟ ಮೀರಿದ್ದು, ನದಿ ದಂಡೆಯ ತೋಟ, ಗದ್ದೆಗಳಿಗೆ ಗುರುವಾರ ಮಧ್ಯಾಹ್ನ ನೀರು ನುಗ್ಗಲಾ ರಂಭಿಸಿತ್ತು.ಪಟ್ಟಣದ ಮೀನು ಮಾರ್ಕೆಟ್ ರಸ್ತೆ ಬಳಿ ಸಂತೆ ಮಾರುಕಟ್ಟೆ ಸಂಕೀರ್ಣಗಳಿಗೆ ಗುರುವಾರ ಮಧ್ಯಾಹ್ನದ ಬಳಿಕ ಭದ್ರಾನದಿ ಪ್ರವಾಹದ ನೀರು ನುಗ್ಗಲಾರಂಭಿಸಿದ್ದು, ಡೋಬಿ ಹಳ್ಳದ ದಂಡೆಯ ಹೋಟೆಲ್, ಜನೌಷಧಿ ಕೇಂದ್ರದ ಒಳಗೂ ನೀರು ಬಂದಿತ್ತು. ಭಾರೀ ಗಾಳಿ, ಮಳೆಗೆ ಮರ ಉರುಳಿ ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 60ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಸ್ಕಾಂ ಜೆಇ ಗಣೇಶ್ ತಿಳಿಸಿದ್ದಾರೆ.ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ಅರಳೀಕೊಪ್ಪ ಸುತ್ತಮುತ್ತಲಿನ ಪ್ರದೇಶದಲ್ಲಿ 7ಕ್ಕೂ ಅಧಿಕ ವಿದ್ಯುತ್ ಕಂಬಗಳು ತುಂಡಾಗಿವೆ, , ಗುರುವಾರ ಮುಂಜಾನೆ ಮುಖ್ಯರಸ್ತೆಗೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ವಾಲಿದ್ದು ಅವುಗಳನ್ನು ಸಿಬ್ಬಂದಿ ಸರಿಪಡಿಸಿ ದ್ದಾರೆ ಎಂದು ಜಯಪುರ ಮೆಸ್ಕಾಂ ಜೆಇ ಪ್ರಶಾಂತ್ ತಿಳಿಸಿದ್ದಾರೆ.
೧೮ಬಿಹೆಚ್‌ಆರ್ ೧:ಬಾಳೆಹೊನ್ನೂರಿನಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಮಹಲ್ಗೋಡು ಸೇತುವೆ ಮೇಲೆ ಬಾರೀ ಮಳೆಗೆ ನೀರು ಉಕ್ಕಿ ಹರಿಯುತ್ತಿದ್ದು, ಕಾರೊಂದು ಪ್ರವಾಹದ ನೀರಿನಲ್ಲಿಯೇ ಚಲಿಸುತ್ತಿರುವುದು.
೧೮ಬಿಹೆಚ್‌ಆರ್ ೨:ಬಾಳೆಹೊನ್ನೂರು ಪಟ್ಟಣದ ಸುದರ್ಶಿನಿ ಚಿತ್ರಮಂದಿರದ ಸಮೀಪದಲ್ಲಿ ಕಾಂಕ್ರಿಟ್ ರಸ್ತೆಯ ಕೆಳ ಭಾಗದ ರಿವಿಟ್‌ಮೆಂಟ್ ಕುಸಿತಗೊಂಡು ಹಾನಿಯಾಗಿದೆ.
೧೮ಬಿಹೆಚ್‌ಆರ್ ೩:ಬಾಳೆಹೊನ್ನೂರು ಸಮೀಪದ ಬಿಂತ್ರವಳ್ಳಿಯ ದ್ಯಾವಯ್ಯ ಎಂಬುವರ ಅಡಕೆ ತೋಟಕ್ಕೆ ಬೃಹತ್ ಗಾತ್ರದ ಮರ ಬಿದ್ದು ಹಾನಿಯಾಗಿರುವುದು.೧೮ಬಿಹೆಚ್‌ಆರ್ ೪:
ಬಾಳೆಹೊನ್ನೂರು ಸಮೀಪದ ಗಡಿಗೇಶ್ವರದ ಸುಂದರೇಶ್ ಎಂಬುವರ ಮನೆಯ ದನದ ಕೊಟ್ಟಿಗೆ ಮಳೆಗೆ ಬಿದ್ದು ಹಾನಿಯಾಗಿದೆ೧೮ಬಿಹೆಚ್‌ಆರ್ ೫:ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮರ ಉರುಳಿ ಮುಖ್ಯರಸ್ತೆಗೆ ವಿದ್ಯುತ್ ಕಂಬ ವಾಲಿದೆ.