ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದಲ್ಲಿ ಗುರುವಾರ ಸಭೆ ನಡೆಸಿದ ಕನ್ನಡ ಸಾಹಿತ್ಯ ಪರಿಷತ್, ಡಾ.ರಾಜ್ ಕುಮಾರ್ ಕಲಾ ಸಂಘ, ಸರ್.ಎಂ.ವಿ.ವಿಶ್ವೇಶ್ವರಯ್ಯ ಯುವಕರ ಬಳಗ, ರಾ.ಶಿ.ರಾ.ಪು ಸೇವಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ವಿಧೇಯಕ ಮುಂದೂಡಿರುವ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗಲಿದೆ ಎಂಬ ನಾಡನುಡಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಳ್ಳಲು ಮುಂದಾಗಿರುವ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದಸರಿಯಬಾರದು ಎಂದು ಆಗ್ರಹಿಸಿದರು.ಕಸಾಪ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ರಾಜ್ಯದಲ್ಲಿನ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಡಾ.ಸರೋಜಿನಿ ಮಹಷಿ ಆಯೋಗವು ಸಹ ಮೀಸಲಾತಿ ಒದಗಿಸಬೇಕು ಎಂದು ಹೇಳಿತ್ತು. ಈ ಬಗ್ಗೆ ಕಳೆದ ಹಲವು ದಶಕಗಳಿಂದ ನಿರಂತರವಾಗಿ ಹೋರಾಟಗಳು ಸರ್ಕಾರಗಳ ಗಮನ ಸೆಳೆಯುತ್ತಿದ್ದರು. ಆದರೆ, ಇಲ್ಲಿಯವರೆಗಿನ ಕುಂಟು ನೆಪವನ್ನು ಬದಿಗೆ ಸರಿಸಿ ಮಸೂದೆ ಮಂಡನೆಗೆ ಮುಂದಾಗಿ ಅಂಥ ಹೋರಾಟಕ್ಕೆ ನ್ಯಾಯ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಕೂಡಲೇ ಮಸೂದೆ ಮಂಡನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ವಿಧೇಯಕ ತಡೆಗೆ ಆಕ್ರೋಶ
ಮುಖ್ಯಮಂತ್ರಿಗಳು ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮೂರು ಬಾರಿ ಯೂ ಟರ್ನ್ ಹೊಡೆದು ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ನಿರ್ಧಾರದ ಹಿಂದೆ ನಾಡಿನ ಆತ್ಮಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ ಎಂದು ಟೀಕಿಸಿದ್ದಾರೆ.ಸರ್ಕಾರದ ಈ ರಣಹೇಡಿ ನಿರ್ಧಾರವನ್ನು ಸಮಸ್ತ ಕರುನಾಡ ಜನರ ಪರವಾಗಿ ಜೈ ಕರ್ನಾಟಕ ಪರಿಷತ್ತು ಖಂಡಿಸುತ್ತದೆ. ಈ ನೆಲದಲ್ಲಿ ಬದುಕು ಮಾಡುತ್ತಾ ಕನ್ನಡ ಕಲಿತವರೆಲ್ಲ ಕನ್ನಡಿಗರೇ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಬೇಡಿಕೆ ಈಡೇರಿಕೆಗಾಗಿ ಪ್ರಸಕ್ತ ಅಧಿವೇಶನದಲ್ಲೆ ವಿಧೇಯಕ ಮಂಡಿಸಲಿ ಎಂದು ಎಸ್.ನಾರಾಯಣ್ ಆಗ್ರಹಿಸಿದ್ದಾರೆ.