ಬರದವಳ್ಳಿ ಗ್ರಾಮಕ್ಕೆ ಕನಸು ನನಸಾಗುವ ಕಾಲ

KannadaprabhaNewsNetwork |  
Published : Nov 16, 2025, 02:15 AM IST
ಫೋಟೊ:೧೪ಕೆಪಿಸೊರಬ-೦೨ : ತಾಲೂಕಿನ ಬರದವಳ್ಳಿ ಗ್ರಾಮದಲ್ಲಿ ರುದ್ರಭೂಮಿಗೆ ತರಳಲು ಹಳ್ಳಕ್ಕೆ ಅಡ್ಡಲಾಗಿ ಗ್ರಾಮಸ್ಥರು ನಿರ್ಮಿಸಿಕೊಂಡಿರುವ ಮರದ ಕಾಲು ಸಂಕ | Kannada Prabha

ಸಾರಾಂಶ

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರುದ್ರಭೂಮಿಗೆ ಶವ ಸಾಗಿಸಲು ಕಾಲು ಸಂಕ ಆಶ್ರಯಿಸಿ ನೊಂದು ಪರಿತಪಿಸಿ ಸೇತುವೆಗಾಗಿ ಹಪಹಪಿಸುತ್ತಿದ್ದ ತಾಲೂಕಿನ ಬರದವಳ್ಳಿ ಗ್ರಾಮಸ್ಥರ ಅರ್ಧ ಶತಮಾನದ ಕನಸ್ಸು ನನಸಾಗುವ ಕಾಲ ಕೂಡಿ ಬಂದಿದೆ.

ಎಚ್.ಕೆ.ಬಿ. ಸ್ವಾಮಿ

ಕನ್ನಡಪ್ರಭ ವಾರ್ತೆ ಸೊರಬ

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರುದ್ರಭೂಮಿಗೆ ಶವ ಸಾಗಿಸಲು ಕಾಲು ಸಂಕ ಆಶ್ರಯಿಸಿ ನೊಂದು ಪರಿತಪಿಸಿ ಸೇತುವೆಗಾಗಿ ಹಪಹಪಿಸುತ್ತಿದ್ದ ತಾಲೂಕಿನ ಬರದವಳ್ಳಿ ಗ್ರಾಮಸ್ಥರ ಅರ್ಧ ಶತಮಾನದ ಕನಸ್ಸು ನನಸಾಗುವ ಕಾಲ ಕೂಡಿ ಬಂದಿದೆ.

ಸೆ. ೧೫, ೨೦೨೫ರಂದು ಕನ್ನಡಪ್ರಭ ರುದ್ರಭೂಮಿಗೆ ತೆರಳಲು ಕಾಲು ಸಂಕದ ದುಸ್ಥಿತಿ ಎನ್ನುವ ಶೀರ್ಷಿಕೆಯಡಿಯಲ್ಲಿ ಬರದವಳ್ಳಿ ಕಾಲು ಸಂಕದ ಬಗ್ಗೆ ವರದಿ ಮಾಡಿತ್ತು. ತಕ್ಷಣ ಗಮನ ಹರಿಸಿ, ಬರದವಳ್ಳಿ ಗ್ರಾಮಸ್ಥರಿಗಾಗುತ್ತಿರುವ ತಾಪತ್ರಯಕ್ಕೆ ಸ್ಪಂದಿಸಿರುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಬಾಗಲಕೋಟೆ ರಾಜ್ಯಸಭಾ ಸದಸ್ಯ ನಾರಾಯಣ ಸಾ.ಕೆ. ಪಾಂಡಿಗೆ ಅವರಿಗೆ ಮಾತುಕತೆ ನಡೆಸಿ, ಅವರ ವಿಶೇಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ೧೦ ಲಕ್ಷ ರು.ಗಳ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಈ ಮೂಲಕ ಸುಮಾರು ೬೦ ವರ್ಷಗಳಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಲು ಸಂಕದ ಮೇಲಿನ ನಡುಗೆಯ ದುಸ್ಸಾಹಸಕ್ಕೆ ಅಂತ್ಯ ಸಿಕ್ಕಿದೆ.

ತಾಲೂಕಿನ ನ್ಯಾರ್ಶಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಬರದವಳ್ಳಿ ಗ್ರಾಮದಲ್ಲಿ ಸುಮಾರು ೧೫೦ ಮನೆಗಳಿವೆ. ಸೊರಬ ಪಟ್ಟಣದಿಂದ ೨೫ ಕಿ.ಮೀ. ಮತ್ತು ಚಂದ್ರಗುತ್ತಿ ಗ್ರಾಮದಿಂದ ೫ ಕಿ.ಮೀ. ದೂರದಲ್ಲಿದೆ. ಗ್ರಾಮ ಅಸ್ತಿತ್ವಕ್ಕೆ ಬಂದು ಸುಮಾರು ೬೦ ವರ್ಷಗಳು ಸವೆದಿವೆ. ಇಲ್ಲಿಯವರೆಗೂ ಶವ ಸಂಸ್ಕಾರಕ್ಕೆ ರುದ್ರಭೂಮಿಗೆ ತೆರಳಲು ಅಡ್ಡಲಾಗಿ ಹರಿಯುವ ವರದಾ ನದಿಯ ಕವಲು ನೀರಾಗಿ ಹರಿಯುವ ಹಳ್ಳ ದಾಟಿ ಸಾಗಬೇಕಿತ್ತು. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ ಬೇಸಿಗೆ ಕಾಲದಲ್ಲಿ ನಾಲ್ಕೈದು ಅಡಿಗಳಷ್ಟು ನೀರು ತುಂಬಿರುತ್ತದೆ. ಗ್ರಾಮಸ್ಥರು ಶವ ಸಂಸ್ಕಾರಕ್ಕೆಂದು ರುದ್ರಭೂಮಿಗೆ ತೆರಳಲು ನೀರಿನಲ್ಲಿ ಹರಸಾಹಸಪಡುವ ಸ್ಥಿತಿಯಲ್ಲಿ ಪರಿತಪಿಸಿ ಕಾಲು ಸಂಕದಲ್ಲಿ ಸಾಗಲು ನಾಲ್ಕು ಜನ ಸರ್ಕಸ್ ಮಾಡಬೇಕಾಗಿತ್ತು.

ಗ್ರಾಮಸ್ಥರಿಗೆ ಮೂಲಭೂತ ಸೌಲಭ್ಯಗಳು ದೊರೆಯಬೇಕೆಂದರೆ ಹಳ್ಳ ದಾಟುವ ಪರಿಸ್ಥಿತಿ. ಕೃಷಿ ಭೂಮಿಗೆ ಗೊಬ್ಬರ, ಔಷಧಿ, ಬೆಳೆದ ಫಸಲನ್ನು ಮಾರಲು ಕಾಲು ಸಂಕವನ್ನೇ ಅವಲಂಭಿಸಬೇಕಾಗಿತ್ತು. ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದಲೂ ಗ್ರಾಮದ ರುದ್ರಭೂಮಿಗೆ ತೆರಳಲು ಅಡ್ಡಲಾಗಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಈಗಿನ ಸಚಿವ ಮಧು ಬಂಗಾರಪ್ಪ ಅವರಿಗೂ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಕನ್ನಡಪ್ರಭ ವರದಿ ಆಲಿಸಿ ಸ್ಪಂದಿಸಿರುವ ಸಂಸದ ಬಿ.ವೈ. ರಾಘವೇಂದ್ರ ಕೊನೆಗೂ ಗ್ರಾಮಸ್ಥರು ಕಾಲು ಸಂಕದಲ್ಲಿ ಸರ್ಕಸ್ ಮಾಡುವುದನ್ನು ತಪ್ಪಿಸಿದ್ದಾರೆ.

------

ಸುಮಾರು ೬೦ ವರ್ಷಗಳಿಂದ ಶವ ಸಾಗಿಸಲು ಮತ್ತು ಕೃಷಿ ಪರಿಕರಗಳನ್ನು ತರಲು ಕಾಲು ಸಂಕ ಆಶ್ರಯಿಸಿ ದುಸ್ಥಿತಿಯಲ್ಲಿದ್ದ ಬಗ್ಗೆ ಕನ್ನಡಪ್ರಭ ವರದಿ ಮನ ಕಲಕುವಂತಿತ್ತು. ಇದನ್ನು ವಿಶೇಷ ಸಮಸ್ಯೆ ಎಂದೇ ಪರಿಗಣಿಸಿ, ತಾವು ಜನಪ್ರತಿನಿಧಿಯಾಗಿ ಗ್ರಾಮಸ್ಥರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ರಾಜ್ಯಸಭಾ ಸದಸ್ಯ ನಾರಾಯಣ ಸಾಕೆ ಪಾಂಡಿಗೆ ಅವರ ಅನುದಾನದಲ್ಲಿ ಕೋರಿಕೆಯ ಮೇರೆಗೆ ೧೦ ಲಕ್ಷ ರು.ಗಳನ್ನು ಕಿರು ಸೇತುವೆ ನಿರ್ಮಾಣಕ್ಕೆ ಮಂಜೂರು ಮಾಡಿಸಿಕೊಂಡಿದ್ದೇವೆ. ಕಾಮಗಾರಿ ಶೀಘ್ರ ಪ್ರಾರಂಭಗೊಳ್ಳಲಿದೆ

- ಬಿ.ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ.

-----

ಬರದವಳ್ಳಿ ಗ್ರಾಮದಲ್ಲಿ ಅಡ್ಡಲಾಗಿ ಹರಿಯುತ್ತಿರುವ ಹಳ್ಳದಿಂದ ಶವ ಸಂಸ್ಕಾರಕ್ಕೆ ಯಾತನೆ ಪಡುವಂತಾಗಿತ್ತು. ಎಲ್ಲದಕ್ಕೂ ಕಾಲು ಸಂಕವನ್ನೇ ಅವಲಂಭಿಸಿದ್ದೆವು. ಯಾರಿಗಾದರೂ ಹುಷಾರಿಲ್ಲ ಎಂದರೆ ತಕ್ಷಣ ಆಸ್ಪತ್ರೆಗೆ ತೆರಳಲು ಯಾವುದೇ ಸೌಲಭ್ಯ ಇರಲಿಲ್ಲ. ಈ ಹಿಂದಿನವರು ಯಾರೂ ಮಾಡದ ಕೆಲಸವನ್ನು ಸಂಸದ ಬಿ.ವೈ. ರಾಘವೇಂದ್ರ ಮಾಡುತ್ತಿದ್ದಾರೆ. ಕಿರು ಸೇತುವೆಗೆ ೧೦ ಲಕ್ಷ ಅನುದಾನದ ಹಣ ತಂದಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ.

ರುದ್ರಮ್ಮ (೮೦), ಹಿರಿಯ ಗ್ರಾಮಸ್ಥೆ, ಬರದವಳ್ಳಿ

PREV

Recommended Stories

ಸಹಕಾರಿ ವ್ಯವಸ್ಥೆ ದೇಶದ ಆರ್ಥಿಕತೆಗೆ ಪೂರಕ: ವೆಂಕಟೇಶ್
ಚಾಲಕನಿಗೆ ಚಾಕುವಿನಿಂದ ಇರಿದುಕಾರು ಸಹಿತ ಪರಾರಿಯಾದವ ಸೆರೆ