ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ವಡೇರಪುರ ಸಮೀಪದ ದೊಡ್ಡಜಟಕಾ ರಸ್ತೆಯಲ್ಲಿರುವ ಕಾಂತರಾಜು ಎಂಬುವರಿಗೆ ಸೇರಿದ ಬಸವೇಶ್ವರ ಸ್ಟೋನ್ ಕ್ರಷರ್‌ನ ಕಲ್ಲು ಗಣಿಗಾರಿಕೆ ಕ್ವಾರಿಯಿಂದ ಬೋಡ್ರಸ್ ಕಲ್ಲು ತುಂಬಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಶುಕ್ರವಾರ ನಸುಕಿನ ವೇಳೆ ಕಲ್ಲುಕ್ವಾರಿಯ ರಸ್ತೆ ಬದಿಯ 30 ಅಡಿ ಆಳದ ನೀರು ತುಂಬಿದ ಹಳ್ಳಕ್ಕೆ ಬಿದ್ದಿತ್ತು.
ಟಿಪ್ಪರ್ ಚಾಲನೆ ಮಾಡುತ್ತಿದ್ದ ತಾಲೂಕಿನ ದುಮ್ಮಸಂದ್ರ ಗ್ರಾಮದ ಲಕ್ಷ್ಮಣ ಅಲಿಯಾಸ್ ಲಚ್ಚಿ (45) ಟಿಪ್ಪರ್‌ನೊಂದಿಗೆ ನೀರಿನಲ್ಲಿ ಬಿದ್ದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತು. ಶುಕ್ರವಾರ ಸಂಜೆವರೆಗೂ ಅಗ್ನಿಶಾಮಕದಳದ ಸಿಬ್ಬಂದಿ ನೀರಿನಲ್ಲಿ ಶೋಧ ಕಾರ್ಯ ನಡೆಸಿದರೂ ಕೂಡ ಚಾಲಕನಾಗಲಿ ಟಿಪ್ಪರ್ ಆಗಲಿ ಪತ್ತೆಯಾಗಿರಲಿಲ್ಲ.ಶನಿವಾರ ಬೆಳಗ್ಗೆ ಉಡುಪಿಯ ಅನುಭವಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರನ್ನು ಕರೆಸಿ ನೀರಿನಲ್ಲಿ ಹುಡುಕಾಟ ನಡೆಸಲಾಯಿತು. ನೀರಿನಲ್ಲಿ ಶೋಧ ನಡೆಸಿದ ಈಶ್ವರ್ ಮಲ್ಪೆ ಅವರು 30 ಅಡಿ ಆಳದಲ್ಲಿದ್ದ ಟಿಪ್ಪರ್ ಲಾರಿಯನ್ನು ಪತ್ತೆ ಹಚ್ಚಿದರು. ಸತತ ಎರಡು ಗಂಟೆ ಕಾಲ ನೀರಿನಲ್ಲಿ ಹುಡುಕಾಟ ನಡೆಸಿದರೂ ಚಾಲಕ ಲಕ್ಷ್ಮಣನ ಸುಳಿವು ಸಿಗಲಿಲ್ಲ.
ಟಿಪ್ಪರ್ ಬಿದ್ದ ರಭಸಕ್ಕೆ ಚಾಲಕ ಲಕ್ಷ್ಮಣ ಭಯದಿಂದ ಜಿಗಿದು ನೀರಿನಿಂದ ಈಜಿಕೊಂಡು ಹೊರಬಂದು ಪರಾರಿಯಾಗಿರಬಹುದು. ಅಥವಾ ಟಿಪ್ಪರ್ ಲಾರಿ ಕೆಳಭಾಗದಲ್ಲಿ ಚಾಲಕನ ಮೃತದೇಹ ಸಿಲುಕಿರಬಹುದು. ಅಥವಾ ಟಿಪ್ಪರ್ ಬಿದ್ದ ರಭಸಕ್ಕೆ ಗಾಬರಿಗೊಂಡು ಹೃದಯಾಘಾತವಾಗಿ ನೀರಿನ ತಳಭಾಗದ ಕೆಸರಿನಲ್ಲಿ ಮೃತದೇಹ ಸಿಲುಕಿರಬಹುದೆಂದು ಅನುಮಾನ ವ್ಯಕ್ತಪಡಿಸಿದ ಈಶ್ವರ್ ಮಲ್ಪೆ ಅವರು, ಏನೇ ಆಗಲಿ ಬಡಕುಟುಂಬಕ್ಕೆ ಅನ್ಯಾಯವಾಗಬಾರದು ಚಾಲಕ ಲಕ್ಷ್ಮಣ ಎಲ್ಲೇ ಇದ್ದರೂ ಜೀವಂತವಾಗಿರಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ಈ ವೇಳೆಗೆ ನೀರಿನಲ್ಲಿದ್ದ ಟಿಪ್ಪರ್ ಮೇಲೆತ್ತಲು 80 ಟನ್ ಸಾಮರ್ಥ್ಯದ ಕ್ರೇನ್ ಯಂತ್ರ ತರಿಸಲಾಗಿತ್ತು. ಆದರೆ, ಈ ಯಂತ್ರದಿಂದ 30 ಅಡಿ ಆಳದ ನೀರಿನಲ್ಲಿ ಬೋಡ್ರಸ್ ಕಲ್ಲು ತುಂಬಿರುವ ಟಿಪ್ಪರ್ ಲಾರಿಯನ್ನು ಹೊರತೆಗೆಯುವುದು ಕಷ್ಟವಾಗುತ್ತದೆ ಎಂದ ಬಳಿಕ ಬೆಂಗಳೂರಿನಿಂದ 130 ಟನ್ ಸಾಮರ್ಥ್ಯದ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೃಹತ್ ಕ್ರೇನ್ ಯಂತ್ರ ಕರೆಸಲಾಯಿತು.
ಸಂಜೆ 4 ಗಂಟೆ ವೇಳೆಗೆ ಬೃಹತ್ ಕ್ರೇನ್ ಯಂತ್ರ ಸ್ಥಳಕ್ಕಾಗಮಿಸುತ್ತಿದ್ದಂತೆ ಕಾರ್ಯಾಚರಣೆಗಿಳಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಅನುಭವಿ ಮುಳುಗುತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಸಂಜೆ 6.30ರ ವೇಳೆಗೆ ನೀರಿನಲ್ಲಿದ್ದ ಟಿಪ್ಪರ್ ಲಾರಿಯನ್ನು ಮೇಲೆತ್ತಿದರು.ನಂತರದ ಹುಡುಕಾಟದಲ್ಲಿಯೂ ಕೂಡ ಚಾಲಕ ಲಕ್ಷ್ಮಣನ ದೇಹಮಾತ್ರ ನೀರಿನಲ್ಲಿ ಪತ್ತೆಯಾಗಲಿಲ್ಲ. ನೀರಿನ ತಳಭಾಗದ ಕೆಸರಿನಲ್ಲಿ ಚಾಲಕನ ಮೃತದೇಹ ಸಿಲುಕಿರಬಹುದೆಂದು ಶಂಕಿಸಿ ಮೂರು ಟ್ರ್ಯಾಕ್ಟರ್‌ಗಳಿಗೆ ಮೋಟಾರ್ ಅಳವಡಿಸಿ ಹಳ್ಳದ ನೀರನ್ನು ಹೊರಹಾಕಲಾಗುತ್ತಿದೆ.
ಮಾಜಿ ಶಾಸಕ ಸುರೇಶ್‌ಗೌಡ, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಡಿವೈಎಸ್‌ಪಿ ಬಿ.ಚಲುವರಾಜು ಅವರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ವೈ.ಎನ್.ರವಿಕುಮಾರ್ ಬೆಳಗ್ಗೆಯಿಂದಲೇ ಸ್ಥಳದಲ್ಲಿ ಮೊಕ್ಕಾಂ ಹೂಡಿ ಶೋಧಕಾರ್ಯಕ್ಕೆ ಸಹಕರಿಸಿದರು.ಚಾಲಕ ಲಕ್ಷ್ಮಣನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಜನರು ನೆರೆದಿದ್ದರು.
ಮುಳುಗುತಜ್ಞ ಈಶ್ವರ್ ಮಲ್ಪೆ, ತಂಡದ ಸಹಾಯಕರಾದ ರಕ್ಷಿತ್, ಸಂತೋಷ್, ಚನ್ನರಾಯಪಟ್ಟಣ ಅಭಿಷೇಕ್, ಅಮೃತೂರು ಕಿಶೋರ್ ಮತ್ತು ನಾಗಮಂಗಲ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ಸಿಬ್ಬಂದಿ ಶೋಧಕಾರ್ಯ ನಡೆಸಿ ಟಿಪ್ಪರ್ ಲಾರಿಯನ್ನು ಹೊರತೆಗೆಸುವ ಕಾರ್ಯದಲ್ಲಿ ಶ್ರಮಿಸಿದರು.