ಧಾರವಾಡದ ಹಾವೇರಿ ಪೇಟೆಯ ಅಂತಪ್ಪನವರ ಓಣಿಯಲ್ಲಿ ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಜನರು ಪರದಾಡುವಂತಾಯಿತು. ಮನೆ ಎದುರು ನಿಲ್ಲಿಸಿದ್ದ ಆಟೋ ಹಾಗೂ ಬೈಕ್‌ಗಳು ನೀರಲ್ಲಿ ಮುಳುಗಿದ್ದು, ನೀರಿನ ವೇಗ ತಗ್ಗಿದ ನಂತರ ವಾಹನಗಳು ಗೋಚರಿಸಿದವು.
ಧಾರವಾಡ: ಒಂದು ವಾರ ಕಾಲ ಹೊರಪು ನೀಡಿದ್ದ ಮುಂಗಾರು ಮಳೆ ಇದೀಗ ಭಾನುವಾರ ಮತ್ತೊಮ್ಮೆ ಅಬ್ಬರಿಸಿದೆ. ಮಧ್ಯಾಹ್ನ 3ರ ನಂತರ ಏಕಾಏಕಿ ಮೋಡ ಕವಿದು ಗುಡುಗು ಸಮೇತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತಗೊಂಡಿತು.
ಇಲ್ಲಿಯ ಹಾವೇರಿ ಪೇಟೆಯ ಅಂತಪ್ಪನವರ ಓಣಿಯಲ್ಲಿ ಮನೆಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಜನರು ಪರದಾಡುವಂತಾಯಿತು. ಮನೆ ಎದುರು ನಿಲ್ಲಿಸಿದ್ದ ಆಟೋ ಹಾಗೂ ಬೈಕ್‌ಗಳು ನೀರಲ್ಲಿ ಮುಳುಗಿದ್ದು, ನೀರಿನ ವೇಗ ತಗ್ಗಿದ ನಂತರ ವಾಹನಗಳು ಗೋಚರಿಸಿದವು. ಇದರೊಂದಿಗೆ ಕಮಲಾಪುರ, ಮದಿಹಾಳ, ಮುರುಘಾಮಠ ರಸ್ತೆ ಹಾಗೂ ಧಾರವಾಡದಿಂದ ಹುಬ್ಬಳ್ಳಿ ಹೋಗುವ ಕೋರ್ಟ್ ವೃತ್ತ, ಟೋಲ್ ನಾಕಾ ರಸ್ತೆಗಳು ಜಲಾವೃತ್ತವಾಗಿ ಬೈಕ್, ಕಾರು ಸೇರಿದಂತೆ ಇತರ ವಾಹನಗಳು ಸವಾರರು ಪರದಾಡುವಂತಾಯಿತು. ಮೃತ್ಯುಂಜಯನಗರ, ಶಿವಗಂಗಾ ನಗರ, ಹೊಸ ಯಲ್ಲಾಪುರ ಸೇರಿದಂತೆ ಮಳೆಯ ಅಬ್ಬರದಿಂದ ತೊಂದರೆಗೆ ಒಳಗಾದರು.
ಧಾರವಾಡ ತಾಲೂಕಿನ ಕವಲಗೇರಿ ಪಾತ್ತರಗಿತ್ತಿ ಹಳ್ಳ ನೀರು ಆವರಿಸಿಕೊಂಡು ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ಥಗೊಂಡಿತ್ತು. ಕೆಲ ಗಂಟೆಗಳ ಕಾಲ ಕವಲಗೇರಿ, ಚಂದನಮಟ್ಟಿ, ಕನಕೂರು, ತಲವಾಯಿ ಗ್ರಾಮಕ್ಕೆ ಹೋಗಲು ಆಗದೇ ಬೈಕ್ ಸವಾರರು ಪರದಾಡಿದರು. ಜೋರಾದ ಗಾಳಿಯೊಂದಿಗೆ ಹಠಾತ್ ಆರಂಭವಾದ ಮಳೆಯು, ಗುಡುಗು ಸಿಡಿಲು ಸಮೇತವಾಗಿ ಸುಮಾರು ಒಂದು ಗಂಟೆಯ ಕಾಲ ಭಾರಿ ಪ್ರಮಾಣದಲ್ಲಿ ಸುರಿಯಿತು. ಈಗಾಗಲೇ ಬಿತ್ತನೆ ಮಾಡಿದ ರೈತರಿಗೆ ಈ ಮಳೆ ಅನುಕೂಲ ಆಗಿದ್ದು ಇನ್ನೂ ಬಿತ್ತನೆ ಮಾಡದ ರೈತರಿಗೆ ಬಿತ್ತನೆಗೆ ಹದ ಬರದೇ ಮತ್ತಷ್ಟು ದಿನಗಳ ಕಾಲ ಕಾಯಬೇಕಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.