- ಮತಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದರೆ ಸೂಕ್ತ ದಾಖಲೆ ಸಮೇತ ಹೆಸರು ನೋಂದಣಿಗೆ ಅವಕಾಶ - - -
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಹಿನ್ನೆಲೆ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಅಧಿಕೃತವಾಗಿ ಪ್ರಕಟಿಸಿದ್ದು, ಕ್ಷೇತ್ರದಲ್ಲಿ ಪ್ರಸ್ತುತ 2,32,564 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ 232564 ಮತದಾರರ ಪೈಕಿ 114165 ಪುರುಷ, 118355 ಮಹಿಳಾ ಹಾಗೂ 44 ಇತರೇ ಮತದಾರರಿದ್ದಾರೆ. ಮತಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಂತಹ ಮತದಾರರು ಸೂಕ್ತ ದಾಖಲೆ ಸಮೇತ ಹೆಸರು ನೋಂದಾಯಿಸಬಹುದು ಎಂದರು.ಹೊಸದಾಗಿ 67 ಮತಗಟ್ಟೆ ಕೇಂದ್ರ:
ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತದಾನದ ಪ್ರಕ್ರಿಯೆ ಸುಲಭಗೊಳಿಸಲು ಹೊಸದಾಗಿ 67 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂಚೆ ಇದ್ದ 24 ಮತಗಟ್ಟೆಗಳನ್ನು ಹಳೆಯ ಸ್ಥಳದಿಂದ ಹೊಸ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಂತಿಮ ಮತದಾರರ ಪಟ್ಟಿ ಅಧಿಕೃತವಾಗಿ ಪ್ರಕಟವಾಗಿದ್ದು, ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ನಿರಂತರ ಪ್ರಕ್ರಿಯೆಯಾಗಿದೆ. ನಾಮಪತ್ರ ಸಲ್ಲಿಕೆಯ ಅಂತಿಮ ದಿನದವರೆಗೂ ಹೆಸರು ಸೇರ್ಪಡೆ ಮಾಡಬಹುದು. ಯಾರದ್ದಾದರೂ ಹೆಸರು ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ ಅಥವಾ ತಿದ್ದುಪಡಿಗಳಿದ್ದರೆ ಸಾರ್ವಜನಿಕರು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕವೂ ಸಲ್ಲಿಸಬಹುದು. ಮತದಾರರು ತಮ್ಮ ಹೆಸರನ್ನು ಪರಿಶೀಲಿಸಲು ಚುನಾವಣಾ ಆಯೋಗ ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಸಹ ಬಳಸಬಹುದು. ಪ್ರತಿ ಮತಗಟ್ಟೆಯಲ್ಲಿ ಬಿಎಲ್‌ಒ ಹೆಸರು, ಮೊಬೈಲ್ ಸಂಖ್ಯೆ ಪ್ರಕಟಿಸಿದೆ. ಸಾರ್ವಜನಿಕರು ನಿಮ್ಮ ಮತಗಟ್ಟೆ ಬಿಎಲ್‌ಒಗಳನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಶೇಖರ ಎಚ್.ಟೇಕಣ್ಣನವರ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಇತರರು ಇದ್ದರು.- - -
(ಬಾಕ್ಸ್) * ದೋಷ ಸರಿಪಡಿಸಲು ಎಸ್ಐಆರ್ ಪೂರ್ವ ಚಟುವಟಿಕೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ದೋಷಗಳನ್ನು ಸರಿಪಡಿಸಲು ಎಸ್ಐಆರ್ ಪೂರ್ವ ಚಟುವಟಿಕೆ ನಡೆಯುತ್ತಿದೆ. ಇದರಡಿಯಲ್ಲಿ ಕುಟುಂಬಗಳ ಮ್ಯಾಪಿಂಗ್ ಮಾಡಲಾಗುತ್ತಿದೆ. 2002 ಮತ್ತು 2025ರ ಪಟ್ಟಿಗಳನ್ನು ಹೋಲಿಸಿ, ಮ್ಯಾಪಿಂಗ್ ಮಾಡಲಾಗುತ್ತಿದೆ. ಒಂದುವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ದಾಖಲೆಗಳನ್ನು ಸಲ್ಲಿಸಿ, ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶ ಇರುತ್ತದೆ. ಇದು ಎಸ್ಐಆರ್ ಅಲ್ಲ, ಪ್ರಿ ಎಸ್ಐಆರ್ ಚಟುವಟಿಕೆಗಳಷ್ಟೇ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದರು.ಮತದಾರರ ವಿಳಾಸಕ್ಕೆ ನೋಟಿಸ್:
ಆಸ್ಪತ್ರೆಗಳು, ಪಾಲಿಕೆ ದಾಖಲೆಗಳ ಆಧಾರದಲ್ಲಿ ಮೃತಪಟ್ಟವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ದ್ವಿಗುಣ ಮತದಾರರ ಪತ್ತೆ ಡಿಮೋಗ್ರಾಫಿಕ್ ಸಿಮಿಲಿಯಾರಿಟಿ ಎಂಟ್ರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 57,820ಕ್ಕೂ ಹೆಚ್ಚು ಮತದಾರರ ದ್ವಿಗುಣ ಹೆಸರುಗಳು ಕಂಡುಬಂದಿವೆ. ಅಂತಹವುಗಳನ್ನು ಪರಿಶೀಲಿಸಲು ಸಂಬಂಧಿಸಿದ ಮತದಾರರ ವಿಳಾಸಕ್ಕೆ ನೋಟಿಸ್ ನೀಡಲಾಗಿದೆ. ಈ ಮತದಾರರ ಕ್ಷೇತ್ರದ ವ್ಯಾಪ್ತಿಯ ಇತರೆ ಮತಗಟ್ಟೆ, ಜಿಲ್ಲೆಯ ಬೇರೆ ಕ್ಷೇತ್ರ, ರಾಜ್ಯ ಅಥವಾ ದೇಶದ ಬೇರಾವುದೇ ಕ್ಷೇತ್ರಗಳ ಮತದಾರರಾಗಿರುವ ಬಗ್ಗೆ ಪಟ್ಟೆ ತಯಾರು ಮಾಡಲಾಗಿದೆ ಎಂದು ತಿಳಿಸಿದರು.ಒಂದು ಕ್ಷೇತ್ರದ ಮತಪಟ್ಟಿಯಲ್ಲಿ ಹೆಸರಿದ್ದು, ಮತ್ತೊಂದು ಕ್ಷೇತ್ರದಲ್ಲೂ ಇದ್ದರೆ ಅದು ಅಪರಾಧವಾಗುತ್ತದೆ. ಹಾಗಾಗಿ ಒಮ್ಮೆ ಚುನಾವಣೆ ಪ್ರಕ್ರಿಯೆ ಘೋಷಣೆ ನಂತರ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗದ ಹಿನ್ನೆಲೆ ಮತದಾರರು ಈಗಲೇ ಜಾಗೃತರಾಗಿ ತಮ್ಮ ಹೆಸರನ್ನು ಪಟ್ಟಿಗಳಲ್ಲಿ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
- - --19ಕೆಡಿವಿಜಿ11:
ದಾವಣಗೆರೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.