ಹರಗಿ ಗ್ರಾಪಂಯಲ್ಲಿ ಅಧ್ಯಕ್ಷರು ಹಾಗೂ ಪಿಡಿಒ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಹರಗಿ ಗ್ರಾಪಂ ಕಚೇರಿ ಎದುರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು.
ಶಿರಾಳಕೊಪ್ಪ: ಹರಗಿ ಗ್ರಾಪಂಯಲ್ಲಿ ಅಧ್ಯಕ್ಷರು ಹಾಗೂ ಪಿಡಿಒ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಹರಗಿ ಗ್ರಾಪಂ ಕಚೇರಿ ಎದುರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು.
ಗುರುವಾರ ಗ್ರಾಪಂ ಕಚೇರಿ ಎದುರು ಗ್ರಾಪಂ ವ್ಯಾಪ್ತಿಯ ಹರಗಿ, ಕೋಡಿಹಳ್ಳಿ, ಹುಣಸೆಕಟ್ಟೆ, ಸಹಸ್ರವಳ್ಳಿ, ಹಾಗೂ ಗುಡ್ಡದ ಹೊಸಳ್ಳಿ ಗ್ರಾಮದ ನೂರಾರು ಗ್ರಾಮಸ್ಥರು ಗ್ರಾಪಂ ಎದುರು ಪ್ರತಿಭಟಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಗ್ರಾಪಂ ಮಾಜಿ ಅಧ್ಯಕ್ಷ ಮಂಚಪ್ಪ ಮಾತನಾಡಿ, ಗ್ರಾಪಂನಲ್ಲಿ ಸುಳ್ಳು ಲೆಕ್ಕ ಸೃಷ್ಟಿಸಿ ಸಾರ್ವಜನಿಕರಿಂದ ಸಂಗ್ರಹಿಸಿದ ಕಂದಾಯದ ಹಣ ಮತ್ತು ೧೫ ಹಣಕಾಸು ಯೋಜನೆಯ ಹಾಗೂ ಇನ್ನಿತರ ಖಾತೆಗಳಿಂದ ₹೨೫ ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡಿದ್ದಾರೆ.
ಗ್ರಾಪಂ ಆಶ್ರಯದಲ್ಲಿ ಯಾವುದೇ ಕಾಮಗಾರಿ ನಡೆಸದೇ ಭ್ರಷ್ಟಾಚಾರ ನಡೆಸಿರುವುದು ತಿಳಿದಿದ್ದು, ಅದನ್ನು ಮುಚ್ಚಿಹಾಕಲು ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಮುಂದಾಗಿದ್ದರು ಎಂದು ಆರೋಪಿಸಿದರು.
ಅಧಿಕಾರಿಯನ್ನು ವರ್ಗಾಯಿಸುವಂತೆ, ಅದಕ್ಕೂ ಮೊದಲು ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳಿ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಆಡಳಿತಾಧಿಕಾರಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಿಂದ ಕೊಟ್ಟ ಮನವಿ ಹಾಗೂ ದೂರುಗಳನ್ನು ಪರಶೀಲಿಸಿ ಜಿಪಂ ಸದಸ್ಯರು ಹಾಗೂ ಪ್ರತಿ ಹಳ್ಳಿಯ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯಲ್ಲಿ ಚರ್ಚಿಸಿ ಪಿಡಿಒ ಹಾಗೂ ಅಧ್ಯಕ್ಷರು ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಪಾರಸು ಮಾಡುವುದಾಗಿ ಹೇಳಿದರು.
ಜಿಪಂ ಮಾಜಿ ಸದಸ್ಯ ಜಾನಕಪ್ಪ, ಮಂಜುನಾಥ ಕೋಡಿಹಳ್ಳಿ, ಭುವನೇಶ್, ನಾಗರಾಜಪ್ಪ, ಬಸವರಾಜಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು. ಎಸ್.ಐ. ಪ್ರಶಾಂತ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.