ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಶಿವಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಗುರುವಾರ ಗ್ರಾಮೀಣ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಮೊಬೈಲ್ ವ್ಯಸನವನ್ನು ರೂಢಿಸಿಕೊಳ್ಳಬಾರದು. ಪೋಷಕರು ಮಕ್ಕಳ ಚಟುವಟಿಕೆಗಳ ಬಗ್ಗೆ ಸದಾ ನಿಗಾ ವಹಿಸಬೇಕು. ಮಕ್ಕಳ ಓದು, ಹವ್ಯಾಸ, ಹೊರಗಿನ ಸ್ನೇಹಿತರೊಂದಿಗಿನ ಒಡನಾಟವನ್ನು ಗಮನಿಸುತ್ತಿರಬೇಕು. ಹಾದಿ ತಪ್ಪುವುದು ಕಂಡುಬಂದ ಕೂಡಲೇ ಅವರನ್ನು ಎಚ್ಚರಿಸಿ ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು.ಓದುವ ಹಂತದಲ್ಲೇ ಅನೇಕ ವಿದ್ಯಾರ್ಥಿಗಳು ಮಾದಕ ವ್ಯಸನಗಳು, ಬೆಟ್ಟಿಂಗ್, ಮೊಬೈಲ್ ಗೇಮ್, ರೀಲ್ಸ್‌ಗಳಿಗೆ ದಾಸರಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಇಂತಹ ವ್ಯಸನಗಳಿರುವ ವಿದ್ಯಾರ್ಥಿಗಳನ್ನು ಒಂದು ವಾರಗಳ ಕಾಲ ಅವರ ಕಾರ್ಯಚಟುವಟಿಕೆಯನ್ನು ನಿಲ್ಲಿಸಿ ಗಮನಿಸಬೇಕು. ಆ ವ್ಯಸನಗಳಿಂದ ಅವರು ಹೊರಬರಲಾರದ ಸ್ಥಿತಿಯಲ್ಲಿದ್ದರೆ ಅವರನ್ನು ಬೇರೊಂದು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿ ಮನಸ್ಸು ಪರಿವರ್ತನೆಯಾಗುವಂತೆ ಮಾಡಬೇಕು. ಒಬ್ಬರಿಗೊಬ್ಬರ ನಡುವೆ ಸಂವಹನ ಏರ್ಪಡುವಂತಹ ಕ್ರಿಯೆಗಳಲ್ಲಿ, ಆಟೋಟಗಳಲ್ಲಿ ಭಾಗವಹಿಸುವಂತೆ ಮಾಡುವುದರಿಂದ ದುಶ್ಚಟಗಳಿಂದ ಹೊರತರಲು ಸಾಧ್ಯವಾಗುತ್ತದೆ ಎಂದು ನುಡಿದರು.
ಓದುವ ವಯಸ್ಸಿನಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸಾಪ್‌ಗಳನ್ನು ಉಪಯೋಗಿಸಬಾರದು. ಅವುಗಳಲ್ಲಿ ವಿದ್ಯಾರ್ಥಿಗಳು ಕಲಿಯುವಂತಹದ್ದು ಏನೂ ಇರುವುದಿಲ್ಲ. ಮೊದಲು ಆಕರ್ಷಣೆಗಾಗಿ ನೋಡುವುದು ಮುಂದೆ ಗೀಳಾಗಿ ಪರಿವರ್ತನೆಯಾಗುತ್ತದೆ. ಆದ ಕಾರಣ ಓದುವ ವಯಸ್ಸಿನಲ್ಲಿ ಇವುಗಳಿಂದ ದೂರ ಉಳಿದು ಕಲಿಕೆಯತ್ತ ಆಸಕ್ತಿ ವಹಿಸಿದರೆ ಸಾಧನೆ ಸುಲಭ ಸಾಧ್ಯವಾಗಲಿದೆ ಎಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳನ್ನು ಸಜ್ಜುಗೊಳಿಸುವುದಕ್ಕೆ ಪೋಷಕರು ಶ್ರಮವಹಿಸಬೇಕು. ಆಗ ಮಕ್ಕಳ ಮನಸ್ಸು ಬೇರೆ ಕಡೆಗೆ ಸೆಳೆಯುವುದಿಲ್ಲ. ಸ್ನೇಹಿತರು, ಕೌಟುಂಬಿಕ ಸಂಬಂಧಗಳೊಂದಿಗೆ ಮಕ್ಕಳು ಬೆರೆಯುವಂತೆ ಮಾಡಬೇಕು. ಮಾನವೀಯ ಮೌಲ್ಯಗಳನ್ನು ತುಂಬಬೇಕು. ಯಾವ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸುವುದಿಲ್ಲವೋ ಆ ಮಕ್ಕಳು ಹಾದಿ ತಪ್ಪುತ್ತಾರೆ. ಕಾರ್ಯದ ಒತ್ತಡದ ನಡುವೆ ಮಕ್ಕಳ ಮೇಲೆ ಗಮನಹರಿಸಲು ಹಲವರಿಗೆ ಸಾಧ್ಯವಾಗದಿದ್ದರೂ ಆಗಾಗ ಅವರ ಕಲಿಕೆ, ಕಾರ್ಯಚಟುವಟಿಕೆಗಳತ್ತ ನಿಗಾ ಇಡುವುದರಿಂದ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವುದಕ್ಕೆ ಸಹಕಾರಿಯಾಗುತ್ತದೆ ಎಂದರು.