ಚಿತ್ರದುರ್ಗ: ಗುರು ಶಿಷ್ಯರ ಸಂಬಂಧಕ್ಕೆ ಕಾಳಜಿಗಳ ಸ್ಪರ್ಶ ಅಗತ್ಯವೆಂದು ಪ್ರಾಚಾರ್ಯ ಡಾ.ಎಸ್.ಎಚ್ ಪಂಚಾಕ್ಷರಿ ಹೇಳಿದರು. ನಗರದ ಚಂದ್ರವಳ್ಳಿಯ ಎಸ್‌ಜೆಎಂ ಪದವಿ ಕಾಲೇಜಿನ ಐಕ್ಯೂಎಸಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಣ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿ ಬೆಳೆದು ದೊಡ್ಡವನಾಗಿ ಯಥಾಶಕ್ತಿ ಸ್ಥಾನ ಮತ್ತು ಉನ್ನತ ಹುದ್ದೆಗಳನ್ನು ಹೊಂದಿದಾಗ, ಆ ಸಂಸ್ಥೆಗೆ ಹೆಮ್ಮೆ ಮತ್ತು ಸಾರ್ಥಕ ಭಾವ ಮೂಡುತ್ತದೆ ಎಂದರು.ಗುರುವೆಂದರೆ ಶಿಷ್ಯನ ಒಳ ಅರಿವನ್ನು ಜಾಗೃತಗೊಳಿಸುವ ಶಕ್ತಿ. ಗುರು-ಶಿಷ್ಯರ ಸಂಬಂಧವು ಹಾರ್ದಿಕವಾಗಿರಬೇಕು. ಉತ್ತಮ ವಿದ್ಯಾರ್ಥಿ ಬುದ್ಧಿವಂತಿಕೆಯ ಗುಣಗಳಿಂದ ಗುರುವಿನ ಮೇಲೆ ಪ್ರಭಾವ ಮೂಡಿಸುತ್ತಾನೆ. ವಿದ್ಯಾರ್ಥಿ ತನಗೆ ವಿದ್ಯಾರ್ಜನೆ ಮಾಡಿದ ಗುರು ಮತ್ತು ಸಂಸ್ಥೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ ಎಂದರು.ಸಂಸ್ಥೆಯಲ್ಲಿ ಓದಿದ ಬಹಳಷ್ಟು ವಿದ್ಯಾರ್ಥಿಗಳು ಇಂದು ವಿಜ್ಞಾನಿಗಳು, ರಾಜಕಾರಣಿಗಳು, ಉದ್ಯಮಿಗಳಾಗಿ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಕಾಲೇಜಿನ ಕೀರ್ತಿಯಾಗಿದೆ. ತಮ್ಮಿಂದ ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದರು. ಉದ್ಯಮಿ ಶಂಶೀರ್ ಮಾತನಾಡಿ, ನಾವು ಬದುಕು ಕಟ್ಟಿಕೊಂಡಿದ್ದೇವೆ ಎಂಬುದಕ್ಕೆ ಇಲ್ಲಿನ ಶಿಕ್ಷಕ ವರ್ಗ ಹಾಗೂ ಈ ಮಹಾವಿದ್ಯಾಲಯ ಕಾರಣವಾಗಿದೆ. ನನ್ನ ಬ್ಯಾಚಿನ 40ಕ್ಕೂ ಹೆಚ್ಚು ಸಹಪಾಠಿಗಳು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಮಗೆಲ್ಲ ಜೀವನವನ್ನು ರೂಪಿಸಿ ಧೈರ್ಯವನ್ನು ತುಂಬಿದಂತಹ ಕಾಲೇಜು ಎಂದು ಸ್ಮರಿಸಿದರು.
ತರೀಕೆರೆಯ ಎಸ್ ಜೆಎಂ ಕಾಲೇಜು ದೈಹಿಕಶಿಕ್ಷಣ ನಿರ್ದೇಶಕ ರಘು ಮಾತನಾಡಿ, ಈ ಸಂಸ್ಥೆಯಲ್ಲಿ ನನ್ನ ಜತೆ ಓದಿದ ಬಹಳಷ್ಟು ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಇದೇ ಸಂಸ್ಥೆಯಲ್ಲಿ ಓದಿ, ಇದೇ ಸಂಸ್ಥೆಯಲ್ಲಿ ದೈಹಿಕ ನಿರ್ದೇಶಕನಾಗಿ ಸೇವೆ ಸಲ್ಲಿಸಲು ಅವಕಾಶ ಒದಗಿಬಂದದ್ದು ನನ್ನ ಸೌಭಾಗ್ಯ ಎಂದರು.ಹಳೆ ವಿದ್ಯಾರ್ಥಿಗಳಾದ ಪ್ರೊ.ಗಿರೀಶ್, ರಮೇಶ್ ಕೋಟಿ, ಅಭಿಲಾಷ್, ಶಿಕ್ಷಕಿ ವಿಶಾಲ, ಪೂಜಾ, ಸಸ್ಯಶಾಸ್ತ್ರ ಉಪನ್ಯಾಸಕಿ ಹೀನಾ ಕೌಸರ್, ದೀಪಾ, ಶಿಕ್ಷಕ ಪ್ರದೀಪ್, ಐಕ್ಯುಎಸಿ ಸಂಚಾಲಕ ಡಾ.ಹರ್ಷವರ್ಧನ್.ಎ, ಮಾತನಾಡಿದರು.ಪ್ರೊ.ಟಿ.ಎನ್.ರಜಪೂತ್, ಪ್ರೊ.ಸಿ.ಎನ್.ವೆಂಕಟೇಶ್, ಡಾ.ನಾಜಿರುನ್ನೀಸ.ಎಸ್, ಪ್ರೊ.ವಿ.ಎಸ್.ನಳಿನಿ, ಡಾ.ಎಚ್.ಸತೀಶ್‍ನಾಯ್ಕ್, ಪ್ರೊ.ಬಿ.ಎಂ ಸ್ವಾಮಿ, ಡಾ.ಚಿದಾನಂದಪ್ಪ, ಮಾಧುರಿ, ಅಕ್ಷತಾ, ನಯನ, ಬೋಧಕೇತರರಾದ ಸಿದ್ದಮ್ಮ, ವರಲಕ್ಷ್ಮಿ, ಅಧೀಕ್ಷಕ ಎಚ್.ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು.