ಹಟ್ಟಿ ತಿಪ್ಪೇಶನ ದೊಡ್ಡ ರಥೋತ್ಸವಕ್ಕೆ ಭಕ್ತಿ ಭಾವದ ಸ್ಪರ್ಶ

KannadaprabhaNewsNetwork |  
Published : Mar 07, 2026, 12:15 AM IST
ಚಿತ್ರದುರ್ಗ ನಾಯಕನಹಟ್ಟಿ ರಥೋತ್ಸವದ ಸುದ್ದಿ | Kannada Prabha

ಸಾರಾಂಶ

ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ

ಬುಡಕಟ್ಟು ಸಾಂಸ್ಕೃತಿಕ ಆಚರಣೆಗಳ ವಿಶಿಷ್ಟ ಪರಿಷೆ ಎಂದೇ ಖ್ಯಾತಿ ಪಡೆದಿರುವ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿಯ ವೈಭವದ ರಥೋತ್ಸವ ಸಕಲ ಭಕ್ತಾಧಿಗಳ ಸಮ್ಮುಖದಲ್ಲಿ ಶುಕ್ರವಾರ ಮಧ್ಯಾಹ್ನದ ನೆತ್ತಿಮೇಲಿನ ಉರಿಬಿಸಿಲ ಝಳದಲ್ಲಿ ಭಕ್ತರ ಜಯಘೋಷಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ಪರಂಪರೆ ಸಾರುವ ವೈಚಾರಿಕ ನೆಲೆಗಟ್ಟಿನ ಜಾತ್ರೆ ಎಂದೇ ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ತಿಪ್ಪೇಶನ ಸನ್ನಿಧಿಯನ್ನು ಪವಾಡಗಳ ಪುಣ್ಯ ಸ್ಥಳ ಎಂದೇ ಭಕ್ತರು ಕೊಂಡಾಡುವುದುಂಟು. ಚಿತ್ತಾ ನಕ್ಷತ್ರದ ಪಾಲ್ಗುಣ ದಿನದಂದು ಚಿಕ್ಕಕೆರೆಯ ಮುಂಭಾಗದಲ್ಲಿ ಜೀವಸಮಾಧಿ ಹೊಂದಿದ ನೆನಪಿಗಾಗಿ ಪ್ರತಿವರ್ಷವೂ ಜಾತ್ರಾ ಮಹೋತ್ಸವ ಆಚರಿಸಿಕೊಂಡು ಬರಲಾಗಿದೆ. ಇದರಲ್ಲಿ ರಥೋತ್ಸವದ ದಿವಸ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುವುದುಂಟು. ಬರೀ ಕರ್ನಾಟಕದ ಭಕ್ತರಲ್ಲದೇ ನೆರೆಯ ಆಂಧ್ರ-ತೆಲಂಗಾಣ, ಮಹಾರಾಷ್ಟ್ರದ ಭಕ್ತರೂ ತಿಪ್ಪೇಶನ ಪರಿಷೆಯಲ್ಲಿ ಪಾಲ್ಗೊಂಡು ಸಂಭ್ರಮಿಸುವುದುಂಟು. ಅನಾದಿ ಕಾಲದಿಂದಲೂ ಅವಧೂತನ ಆರಾಧನೆ ಮಾಡಿಕೊಂಡು ಬಂದಿರುವ ಭಕ್ತ ಸಮೂಹ ಇಂದಿಗೂ ಭಕ್ತಾರಾಧನೆಯನ್ನು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯವಿದೆ.

*ಕೊಬ್ಬರಿ ಸುಡುವ ವಾಡಿಕೆ: ನಾಯಕನಹಟ್ಟಿ ಪುಣ್ಯಕ್ಷೇತ್ರದಲ್ಲಿ ಒಳಮಠದ ಮುಂಭಾಗದಲ್ಲಿ ಈ ಜಾತ್ರೆಯ ಸಮಯದಲ್ಲಿ ಕೊಬ್ಬರಿ ಸುಡುವ ವಾಡಿಕೆ ಅನಾದಿ ಕಾಲದಿಂದಲೂ ನಡೆದುಕೊಂಡುಬಂದಿರುವುದು ಇಂದಿಗೂ ಆಚರಣೆಯಲ್ಲಿದೆ. ಇಲ್ಲಿನ ಜನಪದರು ಹಟ್ಟಿ ತಿಪ್ಪೇಶನಿಗೆ ಏನಾದರೂ ಹರಕೆ ಹೊತ್ತು ಅಂತಹ ಹರಕೆ ಈಡೇರಿದರೆ ಕೊಬ್ಬರಿ ಸುಟ್ಟು ಅದರಿಂದ ಬರುವ ಕಪ್ಪು ಬಣ್ಣದ ಬೂದಿಯನ್ನು ಭಕ್ತಿ ಪೂರ್ವಕವಾಗಿ ಹಣೆಗೆ ಹಚ್ಚಿಕೊಳ್ಳುವ ಪ್ರತೀತಿ ಇಲ್ಲಿನದು.

*ಪಾದಯಾತ್ರೆಯ ಮೂಲಕ ಭಕ್ತಿ ಸಮರ್ಪಣೆ: ಪ್ರತೀ ವರ್ಷದಂತೆ ಈ ವರ್ಷವೂ ಮಾ.6ರಂದು ನಡೆದ ದೊಡ್ಡ ರಥೋತ್ಸವದ ಪ್ರಯುಕ್ತ ಭಕ್ತರು ದೂರದ ಊರುಗಳಿಂದ ಪಾದಯಾತ್ರೆ ಮಾಡಿ ಪುಣ್ಯಕ್ಷೇತ್ರದಲ್ಲಿ ಹಟ್ಟಿ ತಿಪ್ಪೇಶನಿಗೆ ಭಕ್ತಪೂರ್ವಕ ನಮನ ಸಲ್ಲಿಸುತ್ತಿರುವುದು ಮಾಮೂಲಿಯಾಗಿತ್ತು. ಕೊಟ್ಟೂರು, ಕಾನಾಹೊಸಳ್ಳಿ, ಜಗಳೂರು, ದೋಣೆಹಳ್ಳಿ, ದಾವಣಗೆರೆ, ಚಳ್ಳಕೆರೆ ಕಡೆಗಳಿಂದ ಭಕ್ತರು ಮಾ.5ರಂದು ರಾತ್ರಿಯೇ ಪಾದಯಾತ್ರೆ ಮಾಡುತ್ತಾ ಕ್ಷೇತ್ರದತ್ತ ಧಾವಿಸುತ್ತಿರುವುದು ಕಂಡು ಬಂದಿತು.

*ಆಯಾಗಾರರ ಸೇವಾ ಕೈಂಕರ್ಯ: ಈ ಜಾತ್ರೆಯ ವಿಶೇಷತೆ ಇಲ್ಲಿ ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿಯುವುದೇ ಆಗಿದೆ. ಇಲ್ಲಿ ರಥಕ್ಕೆ ಕಟ್ಟುವ ಹಗ್ಗ (ಮೇಣಿ)ವನ್ನು ತಯಾರಿಸುವುದರಿಂದ ಹಿಡಿದು ಪ್ರತಿಯೊಂದು ಕೆಲಸಗಳೂ ಇಲ್ಲಿರುವ ಆಯಗಾರರಿಂದಲೇ ಆಗುತ್ತವೆ. ಪ್ರತಿಯೊಬ್ಬರೂ ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸುವುದುಂಟು. ಕೆಲವು ಸಂದರ್ಭಗಳಲ್ಲಿ ಆಯಗಾರರು ಒಂದತ್ತಿನ ಮೂಲಕ ತಮಗೆ ವಹಿಸಿರುವ ಕಾರ್ಯಗಳನ್ನು ಮಾಡುವುದುಂಟು. ಲಕ್ಷಾಂತರ ಭಕ್ತರು ಹಟ್ಟಿ ತಿಪ್ಪೇಶನನ್ನ ತಮ್ಮ ಆರಾಧ್ಯ ದೈವ ಎಂದೇ ನಂಬಿಕೊಂಡು ಬಂದಿದ್ದಾರೆ.

*ಲಕ್ಷಾಂತರ ಭಕ್ತರ ದಂಡು: ಕೊಪ್ಪಳದ ಗವಿಸಿದ್ದೇಶ್ವರನ ತೇರಿಗೆ ಏಳರಿಂದ ಎಂಟು ಲಕ್ಷ ಭಕ್ತರು ಪಾಲ್ಗೊಂಡರೆ, ನಾಯಕನಹಟ್ಟಿ ರಥೋತ್ಸವಕ್ಕೆ ಬರೋಬ್ಬರಿ ನಾಲ್ಕು ಲಕ್ಷ ಜನಸಂಖ್ಯೆ ಸೇರುತ್ತದೆ ಎಂದೇ ಹೆಸರಾಗಿದೆ. ಮೂಲ ಸ್ಥಳದಿಂದ ಪಾದಗಟ್ಟೆವರೆಗೆ ಸಾಗಿ ಹೋಗುವ ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಬಂದ ಭಕ್ತ ಸಮೂಹ ಮುಗಿಲು ಮುಟ್ಟುವ ಹರ್ಷೋದ್ಗಾರಗಳಿಂದ ರಥವನ್ನು ಎಳೆಯುವುದನ್ನು ನೋಡುವುದೇ ಒಂದು ರೋಚಕ ಸನ್ನಿವೇಶದಂತೆ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಭಕ್ತರು ರಥಕ್ಕೆ ಬಾಳೆಹಣ್ಣು, ಎಲೆ ಅಡಿಕೆ, ಮುಂತಾಗಿ ಹರಕೆ ಮಾಡಿಕೊಂಡು ಎಸೆಯುವುದು ಮಾಮೂಲಿಯಾಗಿದೆ. ಈ ಸಂದರ್ಭದಲ್ಲಿ ಜನರ ಮಧ್ಯೆ ನೂಕಾಟ, ತಳ್ಳಾಟ ಇದ್ದರೂ ರಥೋತ್ಸವಕ್ಕೆ ಯಾವುದೇ ಅಡಚಣೆ ಆಗದೆ ಸುಸೂತ್ರವಾಗಿ ನಡೆಯುತ್ತದೆ.

*ಹರಾಜಿನಿಂದ ದೂರ ಉಳಿದ ಸಚಿವ ಸುಧಾಕರ್: ಪ್ರತೀ ಬಾರಿಯೂ ನಾಯಕನಹಟ್ಟಿ ಜಾತ್ರೆಯ ರಥೋತ್ಸವ ಸಂದರ್ಭದಲ್ಲಿ ಮುಕ್ತಿ ಬಾವುಟ ತನ್ನದಾಗಿಸಿಕೊಳ್ಳಲು ಸದಾ ಮುಂದೆ ಇರುತ್ತಿದ್ದ ಸಚಿವ ಡಿ.ಸುಧಾಕರ್ ಈ ಬಾರಿ ಹರಾಜು ಪ್ರಕ್ರಿಯೆಯಿಂದ ದೂರವೇ ಉಳಿದಿದ್ದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ದ್ರಾಕ್ಷಾ ಮಂಡಳಿ ಅಧ್ಯಕ್ಷ ಡಾ. ಬಿ.ಯೋಗೀಶ್ ಬಾಬು, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು. 32 ಲಕ್ಷ ರು.ಗೆ ಮುಕ್ತಿ ಬಾವುಟ ಹರಾಜು: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಮುಕ್ತಿ ಬಾವುಟವನ್ನು ಶಿರಾ ತಾಲೂಕು ಹೆಂಜಲಗೆರೆಯ ಶ್ರೀನಾಥ್ ಎಂಬುವವರು 32 ಲಕ್ಷಕ್ಕೆ ತಮ್ಮದಾಗಿಸಿಕೊಂಡರು. ಮೊದಲಿಗೆ ಸರ್ಕಾರಿ ಸವಾಲ್ 1 ಕೋಟಿಯಿಂದ ಶುರುವಾದ ಹರಾಜು ಪ್ರಕ್ರಿಯೆ ಕುದಾಪುರದ ಕೃಷ್ಣೇಗೌಡ ಎಂಬುವರು ಮತ್ತು ಬೆಂಗಳೂರಿನಲ್ಲಿ ಇರುವ ಉದ್ಯಮಿ ಹೆಂಜಲಗೆರೆ ಶ್ರೀನಾಥ್ ನಡುವೆ 30 ಲಕ್ಷದವರೆಗೂ ಹರಾಜು ನಡೆಯಿತು. ಕೊನೆಗೆ 32 ಲಕ್ಷಕ್ಕೆ ಹೆಂಜಲಗೆರೆ ಶ್ರೀನಾಥ್ ತನ್ನದಾಗಿಸಿಕೊಂಡರು. ನಂತರ ಸರಿಯಾಗಿ 3ಗಂಟೆ 33ನಿಮಿಷಕ್ಕೆ ಪ್ರಸಿದ್ಧ ದೊಡ್ಡ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಉರಿಬಿಸಿಲು ಲೆಕ್ಕಿಸದೇ ಲಕ್ಷಾಂತರ ಭಕ್ತಾಧಿಗಳು ರಸ್ತೆ ಬದಿಗಳಲ್ಲಿ, ಮನೆಗಳ ಮೇಲೆ ನಿಂತು ಕಣ್ತುಂಬಿಕೊಂಡರು. ನಿಂತಲ್ಲಿ ಕೈಮುಗಿದು ಭಕ್ತಿ ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಲಾರ ವೈದ್ಯಕೀಯ ಕಾಲೇಜು, ರೈತ ಮಾಲ್‌ ಸ್ಥಾಪನೆ
ಭದ್ರಾ ಮೇಲ್ದಂಡೆ ಯೋಜನೆಗೆ ಮತ್ತೆ ಮಹಾದ್ರೋಹ