ಕೂಲಿಯಾಳುಗಳ ಕೊರತೆ: ರಾಗಿ ಖರೀದಿ ಮಂದಗತಿ

KannadaprabhaNewsNetwork |  
Published : Mar 07, 2026, 12:15 AM IST
೬ಕೆಎಂಎನ್‌ಡಿ=೧ಮಂಡ್ಯದ ಕೃಷಿ ಉತ್ಪನ್ನ ಮಾರುಕಟ್ಟೆ  ರಾಗಿ ಖರೀದಿ ಕೇಂದ್ರದ ಎದುರು ಬಾಕಿ ಕೂಲಿ ಕೊಡದಿದ್ದರಿಂದ ಕೆಲಸ ಸ್ಥಗಿತಗೊಳಿಸಿರುವ ಕೂಲಿ ಕಾರ್ಮಿಕರು. | Kannada Prabha

ಸಾರಾಂಶ

ಮಂಡ್ಯ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಕೂಲಿಯಾಳುಗಳ ಕೊರತೆಯಿಂದ ರಾಗಿ ಖರೀದಿ ಮಂದಗತಿಯಲ್ಲಿ ಸಾಗಿದೆ. ಟೆಂಡರ್‌ದಾರ ಕೂಲಿ ಬಾಕಿ ಉಳಿಸಿಕೊಂಡಿರುವುದರಿಂದ ಕೂಲಿಯಾಳುಗಳು ಕೆಲಸ ಸ್ಥಗಿತಗೊಳಿಸಿದ್ದಾರೆ. ರಾಗಿ ಹೊತ್ತು ತಂದ ವಾಹನಗಳು ಸಾಲುಗಟ್ಟಿ ನಿಂತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಕೂಲಿಯಾಳುಗಳ ಕೊರತೆಯಿಂದ ರಾಗಿ ಖರೀದಿ ಮಂದಗತಿಯಲ್ಲಿ ಸಾಗಿದೆ. ಟೆಂಡರ್‌ದಾರ ಕೂಲಿ ಬಾಕಿ ಉಳಿಸಿಕೊಂಡಿರುವುದರಿಂದ ಕೂಲಿಯಾಳುಗಳು ಕೆಲಸ ಸ್ಥಗಿತಗೊಳಿಸಿದ್ದಾರೆ. ರಾಗಿ ಹೊತ್ತು ತಂದ ವಾಹನಗಳು ಸಾಲುಗಟ್ಟಿ ನಿಂತಿವೆ. ಮಧ್ಯವರ್ತಿಗಳ ಹಾವಳಿ ನಡುವೆ ಎರಡು ದಿನದ ಹಿಂದೆ ತಂದ ರಾಗಿ ಖರೀದಿಯಾಗದೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಫೆ.೨೬ರಿಂದ ರಾಗಿ ಖರೀದಿ ಕೇಂದ್ರ ಆರಂಭಗೊಂಡಿದ್ದು, ೪೬,೪೭೩ ಮಂದಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ೫ ಸಾವಿರ ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ. ರೈತರು ಖರೀದಿ ಕೇಂದ್ರಕ್ಕೆ ತಂದ ರಾಗಿಯನ್ನು ಇಳಿಸಿ ಬೇರೆ ಚೀಲಗಳಿಗೆ ತುಂಬಿ ಲೋಡ್ ಮತ್ತು ಅನ್‌ಲೋಡ್ ಮಾಡಲು ಟೆಂಡರ್‌ದಾರ ಕೂಲಿಯಾಳುಗಳ ತಂಡವನ್ನು ನೇಮಿಸಿಕೊಂಡಿದ್ದಾನೆ.

೭೦ ಸಾವಿರ ರು. ಕೂಲಿ ಬಾಕಿ:

ಈ ಕೂಲಿಯಾಳುಗಳ ಒಂದು ತಂಡಕ್ಕೆ ೭೦ ಸಾವಿರ ಕೂಲಿ ನೀಡದೆ ಟೆಂಡರ್‌ದಾರ ನಾಗೇಶ್ ಎಂಬಾತ ಬಾಕಿ ಉಳಿಸಿಕೊಂಡಿದ್ದಾನೆ. ಇದರಿಂದ ಆ ತಂಡದಲ್ಲಿರುವ ಕೂಲಿಯಾಳುಗಳು ಕೆಲಸ ಸ್ಥಗಿತಗೊಳಿಸಿದ್ದಾರೆ. ಬಾಕಿ ಕೂಲಿ ನೀಡುವವರೆಗೆ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿರುವುದರಿಂದ ರೈತರು ತಂದ ರಾಗಿ ಎಲ್ಲವೂ ಖರೀದಿ ಕೇಂದ್ರದ ಎದುರೇ ಉಳಿಯುವಂತಾಗಿದೆ.

ಅಧಿಕಾರಿಗಳ ವಿರುದ್ಧ ಆಕ್ರೋಶ:

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕಿ ಎಂ.ರೇಣುಕಾ, ಚೇತನ್‌ಕುಮಾರ್ ಮತ್ತು ಇತರೆ ಸಿಬ್ಬಂದಿ ರಾಗಿಯ ಗುಣಮಟ್ಟ ಪರಿಶೀಲಿಸಲು ಸ್ಥಳಕ್ಕೆ ಆಗಮಿಸಿದಾಗ ರೈತರು ಅವರ ವಿರುದ್ಧ ಆಕ್ರೋಶಗೊಂಡರು. ಎರಡು ದಿನದಿಂದ ತಂದ ರಾಗಿಯನ್ನು ಸಕಾಲದಲ್ಲಿ ಖರೀದಿ ಮಾಡದೆ ವಿಳಂಬ ಮಾಡಲಾಗುತ್ತಿದೆ. ಎಷ್ಟು ದಿನದವರೆಗೆ ನಾವು ಕಾಯಬೇಕು. ಕೂಲಿಯಾಳುಗಳ ಸಮಸ್ಯೆ ನಮ್ಮ ಸಮಸ್ಯೆಯಲ್ಲ. ವಾಹನಗಳಲ್ಲಿ ರಾಗಿಯನ್ನು ತಂದಿದ್ದೇವೆ. ದಿನಕ್ಕೆ ೧ ಸಾವಿರ ರು. ಬಾಡಿಗೆ ಕಟ್ಟುತ್ತಿದ್ದೇವೆ. ಇದರಿಂದ ನಮಗೆ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಮಧ್ಯವರ್ತಿಗಳಿಗೆ ಪ್ರಾಧಾನ್ಯತೆ:

ಕಡಿಮೆ ರಾಗಿಯನ್ನು ತಂದಿರುವ ರೈತರನ್ನು ಪಕ್ಕಕ್ಕೆ ಸರಿಸಿ ೧೦೦ ರಿಂದ ೩೦೦ ಕ್ವಿಂಟಾಲ್‌ವರೆಗೆ ರಾಗಿಯನ್ನು ತರುವ ಮಧ್ಯವರ್ತಿಗಳಿಗೆ ಖರೀದಿ ಕೇಂದ್ರದ ಅಧಿಕಾರಿಗಳು ಮಣೆ ಹಾಕುತ್ತಿದ್ದಾರೆ. ಮಧ್ಯವರ್ತಿಗಳು ರೈತರಿಂದ ೩೮೦೦ ರು.ವರೆಗೆ ರಾಗಿಯನ್ನು ಖರೀದಿಸಿಟ್ಟುಕೊಂಡು ಒಟ್ಟಿಗೆ ಲಾರಿಯಲ್ಲಿ ತುಂಬಿಕೊಂಡು ಬರುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ರೈತರ ದಾಖಲೆಗಳನ್ನು ನೀಡಿ, ಅವರಿಂದಲೇ ಥಮ್ ಕೊಡಿಸುತ್ತಿದ್ದಾರೆ. ೧ ಕ್ವಿಂಟಾಲ್‌ಗೆ ೨೫೦ ರು. ಹಣವನ್ನು ರೈತರಿಗೆ ನೀಡುತ್ತಾ ಖರೀದಿ ಕೇಂದ್ರದಲ್ಲಿ ೪೮೦೦ ರು.ಗೆ ಮಾರಾಟ ಮಾಡುತ್ತಾ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರು ಆಪಾದಿಸಿದರು.

ಅಧಿಕಾರಿಗಳು ಶಾಮೀಲು:

ಒಂದು ಕ್ವಿಂಟಾಲ್ ರಾಗಿಯನ್ನು ಬೆಳೆಯದವರು ಖರೀದಿ ಕೇಂದ್ರಕ್ಕೆ ೩೦೦ ಕ್ವಿಂಟಾಲ್‌ವರೆಗೆ ರಾಗಿಯನ್ನು ತರುತ್ತಿದ್ದಾರೆ. ಇವರೆಲ್ಲಾ ರೈತರಿಂದ ಖರೀದಿಸಿ ತಂದು ಖರೀದಿ ಕೇಂದ್ರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಧ್ಯವರ್ತಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿ ನಿಜವಾದ ರಾಗಿ ಬೆಳೆಗಾರರನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.

ರಾಗಿ ಬೆಳೆದು ತಂದವರ ಗೋಳು:

ಮಧ್ಯವರ್ತಿಗಳಿಗೆ ರಾಗಿಯನ್ನು ಕೊಡದೆ ಖರೀದಿ ಕೇಂದ್ರಕ್ಕೆ ತನ್ನಿ ಎಂದು ಹೇಳುವ ಜಿಲ್ಲಾಧಿಕಾರಿಗಳು, ಶ್ರಮಪಟ್ಟು ರಾಗಿ ಬೆಳೆದು ರಾಗಿ ಖರೀದಿ ಕೇಂದ್ರಕ್ಕೆ ತಂದ ರೈತರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ಸಕಾಲದಲ್ಲಿ ರಾಗಿಯನ್ನೂ ಖರೀದಿಸದೆ ವಿಳಂಬ ನೀತಿ ಅನುಸರಿಸುವ ಮೂಲಕ ರೈತರ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ಇದರ ಬಗ್ಗೆ ಯಾರೊಬ್ಬರೂ ಗಮನಹರಿಸದಿರುವುದರಿಂದ ರೈತರ ಗೋಳು ಕೇಳೋರೇ ಇಲ್ಲದಂತಾಗಿದೆ ಎಂದು ಬೇಸರದಿಂದ ನುಡಿದರು.

ನಾಳೆಯವರೆಗೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ

ರಾಗಿ ಗುಣಮಟ್ಟ ಪರಿಶೀಲನೆಗೆ ಆಗಮಿಸಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕಿ ಎಂ.ರೇಣುಕಾ ಹಾಗೂ ಚೇತನ್‌ಕುಮಾರ್ ಅವರು ರೈತರ ಅಹವಾಲುಗಳನ್ನು ಆಲಿಸಿದರು. ಟೆಂಡರ್ ಪಡೆದಿರುವ ನಾಗೇಶ್ ಎಂಬಾತನಿಗೆ ದೂರವಾಣಿ ಕರೆ ಮಾಡಿ ೭೦ ಸಾವಿರ ರು. ಕೂಲಿ ಬಾಕಿ ಉಳಿಸಿಕೊಂಡಿರುವ ಮತ್ತು ಕೂಲಿಯಾಳುಗಳು ಕೆಲಸ ಸ್ಥಗಿತಗೊಳಿಸಿರುವ ಬಗ್ಗೆ ವಿಷಯ ತಿಳಿಸಿದರು. ಟೆಂಡರ್‌ದಾರ ಸೋಮವಾರದೊಳಗೆ ಕೂಲಿ ಪಾವತಿಸುತ್ತೇನೆ. ಕೆಲಸ ಮಾಡುವಂತೆ ಕೂಲಿಯಾಳುಗಳ ತಂಡದ ಮೇಲ್ವಿಚಾರಕನಿಗೆ ತಿಳಿಸಿದರೂ ಅವರು ಒಪ್ಪಲಿಲ್ಲ. ಮೊದಲು ಕೂಲಿ ಪಾವತಿಸಿ, ನಂತರ ಕೆಲಸ ಮಾಡುವುದಾಗಿ ನೇರವಾಗಿ ಹೇಳಿದರು. ಶನಿವಾರ ಬೇರೆ ಕೂಲಿಯಾಳುಗಳನ್ನು ಕಳುಹಿಸಿಕೊಡುವುದಾಗಿ ಟೆಂಡರ್‌ದಾರ ತಿಳಿಸಿದಾಗ ಅಧಿಕಾರಿಗಳು ರೈತರಿಗೆ ನಾಳೆಯವರೆಗೆ ಸ್ವಲ್ಪ ತಾಳ್ಮೆ ವಹಿಸುವಂತೆ ಕೋರಿಕೊಂಡರು.

ಕೂಲಿಯಾಳುಗಳಿಗೆ ಬಾಕಿ ಹಣ ಕೊಡದಿರುವುದರಿಂದ ಸಮಸ್ಯೆಯಾಗಿದೆ. ಟೆಂಡರ್ ಪಡೆದಿರುವವರು ತುಮಕೂರಿನವರು. ಅವರೊಂದಿಗೆ ಮಾತನಾಡಿದ್ದೇನೆ. ಕೂಲಿಯಾಳುಗಳನ್ನು ಒದಗಿಸುವುದಾಗಿ ತಿಳಿಸಿದ್ದು, ಶನಿವಾರದಿಂದ ರಾಗಿ ಖರೀದಿ ವಿಳಂಬವಾಗದಂತೆ ಕ್ರಮ ವಹಿಸುತ್ತೇವೆ.

- ಎಚ್.ಎಂ.ಮನೋಹರ್, ವ್ಯವಸ್ಥಾಪಕರು, ಆಹಾರ ನಿಗಮ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಲಾರ ವೈದ್ಯಕೀಯ ಕಾಲೇಜು, ರೈತ ಮಾಲ್‌ ಸ್ಥಾಪನೆ
ಭದ್ರಾ ಮೇಲ್ದಂಡೆ ಯೋಜನೆಗೆ ಮತ್ತೆ ಮಹಾದ್ರೋಹ