ನಿರೀಕ್ಷೆಯಿದ್ದದ್ದು ಬೆಟ್ಟದಷ್ಟು ಸಿಕ್ಕಿದ್ದು ಗುಲಗಂಜಿ ಗಾತ್ರದಷ್ಟು

KannadaprabhaNewsNetwork |  
Published : Mar 07, 2026, 12:15 AM IST
000 | Kannada Prabha

ಸಾರಾಂಶ

ಈ ಸಾಲಿನ ಬಜೆಟ್ ನಲ್ಲಿ ಜಿಲ್ಲೆಗೆ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೆಡಿಕಲ್ ಕಾಲೇಜು ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಈ ಬಜೆಟ್ ನಲ್ಲಿ ಅದರ ಪ್ರಸ್ತಾಪವಿಲ್ಲ.

ಕನ್ನಡಪ್ರಭ ವಾರ್ತೆ, ತುಮಕೂರುಈ ಸಾಲಿನ ಬಜೆಟ್ ನಲ್ಲಿ ಜಿಲ್ಲೆಗೆ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೆಡಿಕಲ್ ಕಾಲೇಜು ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಈ ಬಜೆಟ್ ನಲ್ಲಿ ಅದರ ಪ್ರಸ್ತಾಪವಿಲ್ಲ. ಹಾಗೆಯೇ ತುಮಕೂರಿನಲ್ಲಿ ಜಯದೇವ ಕಾರ್ಡಿಯಾಕ್ ಸೆಂಟರ್ ನಿರ್ಮಿಸುವ ಘೋಷಣೆಯನ್ನು ಬಜೆಟ್ ನಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ಅದರ ಬಗ್ಗೆಯೂ ಚಕಾರವಿಲ್ಲ. ಉಳಿದಂತೆ ತಿಪಟೂರು ಮತ್ತು ವಸಂತನರಸಾಪುರದಲ್ಲಿ ಟ್ರಾಮಾ ಸೆಂಟರ್ ಸಿಗುತ್ತದೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ.ಆದರೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರ ನವೀಕರಣಕ್ಕೆ 3 ಕೋಟಿ ರು. ಮೀಸಲಿಡಲಾಗಿದೆ. ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ ಹಣ, ಕ್ರೀಡಾ ಮೂಲಸೌಕರ್ಯಕ್ಕೆ ಅಲ್ಪ ಹಣ ಹೊರೆತುಪಡಿಸಿದರೆ ಬೇರೆ ಯಾವ ಅನುದಾನ ಕೂಡ ಜಿಲ್ಲೆಗೆ ಸಿಕ್ಕಿಲ್ಲ.ಹಲವಾರು ವರ್ಷಗಳಿಂದ ಶಿಥಿಲಗೊಂಡಿದ್ದ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರ ನವೀಕರಣಕ್ಕೆ 3 ಕೋಟಿ ರು. ಮೀಸಲಿಟ್ಟಿರುವುದು ಖುಷಿಯ ಸಂಗತಿ. ಕಳೆದ ಕೆಲವು ತಿಂಗಳ ಹಿಂದೆ ಎಚ್ಎಎಲ್ ವತಿಯಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರ ನವೀಕರಣ ಮಾಡಿಸಿಕೊಡುವ ಪ್ರಸ್ತಾಪನೆ ಬಂದಿತ್ತು. ಈ ಮಧ್ಯೆ ಬಜೆಟ್ ನಲ್ಲಿ 3 ಕೋಟಿ ರು. ಘೋಷಣೆಯಾಗಿರುವುದರಿಂದ ವೇಗ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.ತುಮಕೂರು ಕಲೆಯ ತವರೂರು. ಪ್ರತಿ ದಿನ ಒಂದಲ್ಲಾ ಒಂದು ನಾಟಕಗಳು ನಡೆಯುತ್ತಿರುತ್ತವೆ. ಅಲ್ಲದೇ ಪೌರಾಣಿಕ ನಾಟಕಗಳ ಹೊಸ ಶೆಕೆ ಆರಂಭವಾಗಿದೆ. ತುಮಕೂರಿನಲ್ಲಿ ಹಾಲಿ ಇರುವ ಒಂದೇ ಒಂದು ದೊಡ್ಡ ರಂಗಮಂದಿರಕ್ಕೆ ಒತ್ತಡ ಹೆಚ್ಚಾಗಿದೆ. ಅಲ್ಲದೇ ತೀರಾ ಶಿಥಿಲವಾಗಿರುವುದರಿಂದ ಅದರ ಪುನರುಜ್ಜೀವನಗೊಳಿಸಲು ಪ್ರಸ್ತಾವನೆ ಸಲ್ಲಿಸುತ್ತಾ ಬರಲಾಗಿತ್ತು. ಈಗ ಸರ್ಕಾರ 3 ಕೋಟಿ ರು. ನೀಡಿರುವುದರಿಂದ ಎಚ್ಎಎಲ್ ಹಣ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಅತ್ಯಾಧುನಿಕವಾಗಿ ಕಲಾಕ್ಷೇತ್ರವನ್ನು ರೂಪಿಸಬೇಕಾಗಿದೆ. ತುಮಕೂರಿನಲ್ಲಿ ಎರಡು ತಿಂಗಳ ಹಿಂದೆ ಕ್ರೀಡಾಕೂಟ ನಡೆದಿತ್ತು. ಈ ವೇಳೆ ಕ್ರೀಡಾಕೂಟಕ್ಕೆ ಹಣ ನೀಡುವುದಾಗಿ ಅಂದಿನ ಕಾರ್ಯಕ್ರಮಕ್ಕೆ ಬಂದಿದ್ದ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಈಗ ಕ್ರೀಡಾ ಕ್ಷೇತ್ರಕ್ಕೆ ಹಣ ಮೀಸಲಿಟ್ಟಿರುವುದು ಸಮಾಧಾನದ ನಿಟ್ಟುಸಿರು ಬಿಟ್ಟಂತಾಗಿದೆ. ಹಾಗೆಯೇ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ ಹಣ ಮೀಸಲಿಟ್ಟಿರುವುದು ವಿಶೇಷ.ಇವಿಷ್ಟು ಹೊರೆತುಪಡಿಸಿದರೆ ಜಿಲ್ಲೆಗೆ ಯಾವುದೇ ವಿಶೇಷ ಘೋಷಣೆಯಾಗಿಲ್ಲ. ಜಿಲ್ಲೆಯಿಂದ ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಕಳುಹಿಸಿಕೊಟ್ಟರೂ ನಿರೀಕ್ಷೆಯಷ್ಟು ಹಣವನ್ನು ಬಜೆಟ್ ನಲ್ಲಿ ನೀಡಿಲ್ಲ. ಒಟ್ಟಾರೆಯಾಗಿ ಭವಿಷ್ಯದ ಉಪನಗರಿಯಾಗಿರುವ ತುಮಕೂರಿನ ಬಜೆಟ್ ನಲ್ಲಿ ಏನೇನೂ ಸಿಕ್ಕಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೇವಲ 7 ವಾರ್ಡ್ ಗಳಿಗೆ ಮಾತ್ರ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಮಾಡಲಾಗಿತ್ತು. ಉಳಿದ ವಾರ್ಡ್ ಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಹಣ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಅಲ್ಲದೇ ಮೆಟ್ರೋ ವಿಸ್ತರಣೆ ಬಗ್ಗೆಯೂ ಕೂಡ ಬಜೆಟ್ ನಲ್ಲಿ ಚಕಾರವೆತ್ತಿಲ್ಲ. ಒಟ್ಟಾರೆಯಾಗಿ ಈ ಬಾರಿ ಕಲ್ಪತರು ಜಿಲ್ಲೆಗೆ ಹೇಳಿಕೊಳ್ಳುವಂತೆ ಅನುದಾನ ಸಿಕ್ಕಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಲಾರ ವೈದ್ಯಕೀಯ ಕಾಲೇಜು, ರೈತ ಮಾಲ್‌ ಸ್ಥಾಪನೆ
ಭದ್ರಾ ಮೇಲ್ದಂಡೆ ಯೋಜನೆಗೆ ಮತ್ತೆ ಮಹಾದ್ರೋಹ