)
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ. ಘೋಷಣೆ । 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ । ಈಡೇರದ ಎನ್‌ಎನ್ ವ್ಯಾಲಿ 3 ಹಂತದ ಶುದ್ಧೀಕರಣ ಭರವಸೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ಜಿಲ್ಲೆಯ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಜನರು ಅಪಾರವಾದ ನಿರೀಕ್ಷೆಗಳನ್ನು ಹೊಂದಿದ್ದರು. ನಮ್ಮ ತಾಲೂಕಿಗೆ ಯಾವ ಯೋಜನೆಗಳು ದೊರೆಯುತ್ತವೆ ಎನ್ನುವ ನಿರೀಕ್ಷೆಯಲ್ಲಿದ್ದರು ಆದರೆ ಅವು ಹುಸಿಯಾಗಿವೆ.
ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ, ಕೆಐಎಡಿಬಿ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಘಟಕದ ಸ್ಥಾಪನೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಅಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ. ಘೋಷಣೆಯಾಗಿದೆ.ಶಿಡ್ಲಘಟ್ಟದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಬೇಕಾಗಿತ್ತು. ಇದರಿಂದ ರೇಷ್ಮೇ ವಸ್ತ್ರ ಮತ್ತು ಸೀರೆ ಹಾಗೂ ರೇಷ್ಮೇ ಕರಕುಶಲ ಗಾರರಿಗೆ ಅನುಕೂಲವಾಗುತ್ತದೆ. 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಘಟಕದ ಸ್ಥಾಪನೆಯಿಂದ ಮತ್ತು ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರದಿಂದ ಬೆರಳೆಣಿಕೆ ಮಂದಿಗಷ್ಟೇ ಉದ್ಯೋಗ ದೊರೆಯಬಹುದು. ಈ ಯೋಜನೆಗಳೆಲ್ಲವೂ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ ಎಂಬುದು ಜನರ ಅಸಿಕೆಯಾಗಿದೆ
ಚಿಕ್ಕಬಳ್ಳಾಪುರದ ಜನತೆಯ ನಿರೀಕ್ಷೆಗಳಾದ ಎಚ್‌ಎನ್ ವ್ಯಾಲಿ ವ್ಯಾಲಿಯಿಂದ ಬರುವ ನೀರನ್ನು ಹೆಚ್ಚು ಶುದ್ಧ ಮಾಡಲು 3 ನೇ ಹಂತದ ಸಂಸ್ಕರಣೆ ಯೋಜನೆ ಜಾರಿ, ಎತ್ತಿನಹೊಳೆ ಯೋಜನೆಗೆ ಈ ಭಾರಿಯಾದರೂ ವೇಗ ಪಡೆದು ಜಿಲ್ಲೆಯ ಜನತೆಗೆ ಕುಡಿಯುವ ನೀರು ಸಿಗತ್ತದೆ. ಜಿಲ್ಲೆಯ ಆಂಧ್ರದ ಗಡಿಯವರೆಗೂ ಬಂದಿರುವ ಕೃಷ್ಣಾನದಿ ನೀರು ಜಿಲ್ಲೆಗೆ ಕುಡಿಯುವ ನೀರಾಗಿಯಾದರೂ ಬರುತ್ತದೆ ಎಂಬ ನೀರಿಕ್ಷೆ ಈಡೇರಲ್ಲಿಲ್ಲ.
ಜಿಲ್ಲೆಯ ರೈತರು ಹಾಲು, ರೇಷ್ಮೆ, ತರಕಾರಿ, ಹೂವು, ಹಣ್ಣು ಬೆಳೆಯುವುದರಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಹೂವು, ಹಣ್ಣು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಅಗತ್ಯವಿರುವ ಮಾರುಕಟ್ಟೆ ನಿರ್ಮಿಸಬೇಕಿತ್ತು. ಇಲ್ಲಿ ಹಣ್ಣು, ತರಕಾರಿ, ಹೂವು ಶೇಖರಿಸಿಡುವ ಶೀತಲೀಕರಣ ಘಟಗಳಿಲ್ಲದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಬೆಂಗಳೂರಿಗೆ ಕೊಂಡೊಯ್ದು ಬಂದ ಬೆಲೆಗೆ ಮಾರಾಟ ಮಾಡಿ ಬರುವ ದುಸ್ಥಿತಿ ರೈತನಿಗಿದೆ. ಆದ್ದರಿಂದ ಶೀತಲೀಕರಣ ಘಟಕ ನಿರ್ಮಿಸಿದರೆ ಅನುಕೂಲವಾಗಲಿದೆ ಎಂಬ ರೈತರ ಒತ್ತಾಯಕ್ಕೆ ಈ ಬಾರಿ ಸರ್ಕಾರ ಸ್ಪಂದಿಸಿಲ್ಲ.
ಚಿಕ್ಕಬಳ್ಳಾಪುರ ನಗರಕ್ಕೆ ಟೌನ್‌ಶಿಪ್ ನಗರ ಯೋಜನೆಗೆ ಮತ್ತು ಹೊಸ ಉದ್ಯಮಗಳಿಗೆ ನೂತನ ಆಯಾಮ ನೀಡಿಲ್ಲ. ಬಯಲು ಸೀಮೆ ಜಿಲ್ಲೆ ಚಿಕ್ಕಬಳ್ಳಾಪುರಕ್ಕೆ ಈ ಬಾರಿ ಹಿಂದೆ ಘೋಷಿಸಿದ ಮತ್ತು ಈ ಬಾರಿ ಘೋಷಿಸುವ ಯೋಜನೆಗಳು ಬರೀ ಘೋಷಣೆಗಳಾಗಿ ಮಾತ್ರ ಉಳಿಯದೆ ಕಾರ್ಯರೂಪಕ್ಕೆ ಬರಲೆಂಬುದು ಜಿಲ್ಲೆಯ ಜನತೆಯ ಬೇಡಿಕೆಯಾಗಿತ್ತು.