ಬೂದಿ ಪಡಗ ಗ್ರಾಮದಲ್ಲಿ ಘಟನೆ । ಒಣ ಮರ ತೆರವಿಗೆ ಆಗ್ರಹ
ಹನೂರು ತಾಲೂಕಿನ ಕೊಳ್ಳೇಗಾಲ ಒಡೆಯರ್ ಪಾಳ್ಯ ಮುಖ್ಯ ರಸ್ತೆಯ ಬೂದಿಪಡಗ ಗ್ರಾಮದ ಬಳಿ ಬರುವ ಆಂಡಿಪಾಳ್ಯ ಗ್ರಾಮದ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವ ಭಾರಿ ಗಾತ್ರದ ಒಣಗಿದ ಮರ ಒಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು.
ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆಯವರೆಗೆ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಸ್ಥಳಾವಕಾಶವಿಲ್ಲದೆ ಸತತವಾಗಿ ನಾಲ್ಕು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಹಾಗೂ ಇತರೆ ಕೆಲಸ ಕಾರ್ಯಗಳಿಗೆ ತೆರಳುವವರು ಪರದಾಡಿದರು.ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಬಂದು ಒಣ ಮರವನ್ನು ತೆರವುಗೊಳಿಸಿ ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟರು.
ಒಣಮರಗಳನ್ನು ತೆರವುಗೊಳಿಸಿ:ತಮಿಳುನಾಡಿನ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ 20ಕ್ಕೂ ಹೆಚ್ಚು ಒಣ ಮರಗಳು ಒಣಗಿ ರಸ್ತೆಗೆ ಬಾಗಿದೆ. ಭಾರಿ ಬಿರುಗಾಳಿಗೆ ಮರಗಳು ಉರುಳಿ ರಸ್ತೆಗೆ ಅಡ್ಡಲಾಗಿ ಬೀಳುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸಹ ಭಾರಿ ಮರ ರಸ್ತೆಗೆ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು .ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಒಣಗಿರುವ ಮರಗಳನ್ನು ತೆರವುಗೊಳಿಸಲಿ ಎಂದು ಬಿಎಸ್ ದೊಡ್ಡಿ ಗ್ರಾಮದ ಬಸವರಾಜ್ ಒತ್ತಾಯಿಸಿದ್ದಾರೆ.