ಶಿರಸಿ: ತಾಲೂಕಿನಾದ್ಯಂತ ಶುಕ್ರವಾರದ ಆರ್ಭಟದ ಗಾಳಿ, ಮಳೆಗೆ ವಿದ್ಯುತ್ ಕಂಬಗಳ ಮೇಲೆ ಹಾಗೂ ರಸ್ತೆಯ ಮೇಲೆ ಮರ ಮುರಿದು ಬಿದ್ದು ವಾಹನ ಸವಾರರು ಪರದಾಡುವಂತಾಯಿತು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮನೆಗಳ ಮೇಲೆ ಮರ ಮುರಿದು ಬಿದ್ದು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.ತಾಲೂಕಿನ ಹುಸರಿ ರಸ್ತೆಯ ಮರದಲ್ಲಿ ಮಾರುತಿ ದೇವಸ್ಥಾನದ ಸಮೀಪ ವಿದ್ಯುತ್ ತಂತಿ ಮೇಲೆ ಮರ ಮುರಿದು ಬಿದ್ದು ಕಂಬ ಉರುಳಿ ಬಿದ್ದಿದೆ.
ಇಲ್ಲಿನ ಗಾಂಧಿನಗರದ ಪ್ರೊಗ್ರೆಸ್ಸಿವ್ ಕಾಲೇಜು ಸಮೀಪ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬದ್ದಿದೆ. ಮತ್ತಿಘಟ್ಟ ಕ್ರಾಸ್‌ನಿಂದ ಕಲ್ಲೇಶ್ವರ ಕೂಡು ರಸ್ತೆಯು ಸಂಪೂರ್ಣ ಕುಸಿದು ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಕಲ್ಲೇಶ್ವರ, ಕಮ್ಮಾಣಿ, ಹಳವಳ್ಳಿ ಭಾಗದವರಿಗೆ ಮತ್ತಿಘಟ್ಟ ಸಂಪರ್ಕ ಕಡಿತಗೊಂಡಿದೆ.ಗೋಳಿ ದೇವಸ್ಥಾನಕ್ಕೆ ತೆರಳುವ ಹಲಸನಳ್ಳಿ- ಗೋಳಿ ರಸ್ತೆಯ ಅಂಚು ಕುಸಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದಾರೆ. ನಗರದ ಹೊಸ ಬಸ್ ನಿಲ್ದಾಣದ ಸಮೀಪ ಮರ ಮುರಿದು ಬಿದ್ದು ಮನೆ ಜಖಂಗೊಂಡಿದೆ. ಬನವಾಸಿ ರಸ್ತೆಯ ಮಾರಿಕಾಂಬಾ ವೆಜಿಟೆಬಲ್ ಅಂಗಡಿ ಮೇಲೆ ಮರ ಮುರಿದು ಬಿದ್ದು ಹಾನಿಯಾಗಿದೆ.ಮುಂಡಗೋಡ ತಾಲೂಕಿನ ಮಳಗಿಯ ಧರ್ಮಾ ಜಲಾಶಯದಲ್ಲಿ ನೀರು ತುಂಬಿ ಕೋಡಿ ಬಿದ್ದಿರುವ ಪರಿಣಾಮ ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತಗೊಂಡಿದೆ. ನಗರದ ಗೊಲಗೇರಿಓಣಿ ಯಾತ್ರಿ ನಿವಾಸಿ ಸಮೀಪ ಮರ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಕಂಬಗಳು ಉರುಳಿವೆ. ತಾಲೂಕಿನ ನೈಗಾರ ಗ್ರಾಮದ ಹಾಸಣಗಿಯ ಗೌರಿ ಗೌಡ ಅವರ ಮನೆ ಗೋಡೆ ಕುಸಿದು ₹೩೦ ಸಾವಿರ, ಮಣದೂರು ಗ್ರಾಮದ ಶಿರ್ಲಬೈಲ್ ಕಮಲಾಕರ ಗೌಡ ಅವರ ಮನೆಯ ಚಾವಣಿ ಬಿದ್ದು ₹೨೦ ಸಾವಿರ, ಚಿಪಗಿ ಗ್ರಾಮದ ಸುರೇಶ ಶೆಟ್ಟಿ ಅವರ ಮನೆ ಮತ್ತು ಕಾಂಪೌಂಡ್ ಕುಸಿದಿದೆ. ಹಾನಿಯಾದ ಸ್ಥಳಕ್ಕೆ ಕಂದಾಯ ಇಲಾಖೆ ಮತ್ತು ಸ್ಥಳೀಯ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.ಗಾಳಿ, ಮಳೆಗೆ ಜನಜೀವನ ಅಸ್ತವ್ಯಸ್ತ
ಗೋಕರ್ಣ: ಗುರುವಾರ ರಾತ್ರಿಯಿಂದ ಈ ಭಾಗದಲ್ಲಿ ಬೀಸುತ್ತಿರುವ ರಭಸದ ಗಾಳಿಗೆ ಸಾಲು, ಸಾಲು ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.ವಿವಿಧೆಡೆ ರಸ್ತೆ ಸಂಚಾರ, ವಿದ್ಯುತ್ ಕಡಿತ, ದೂರವಾಣಿ, ಮೊಬೈಲ್ ಸಂಪರ್ಕ ಕಡಿತ ಹೀಗೆ ವಿವಿಧ ಸಮಸ್ಯೆಗಳಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಶುಕ್ರವಾರ ಮುಂಜಾನೆ ಗೋಕರ್ಣ- ಗಂಗಾವಳಿ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪದವಿ ಕಾಲೇಜು ತರಗತಿಯ ಪರೀಕ್ಷೆಗೆ ಅಂಕೋಲಾಕ್ಕೆ ತೆರಳಲು ವಿದ್ಯಾರ್ಥಿಗಳು ಪರದಾಡಿದರು. ಇದರಂತೆ ಬಂಕಿಕೊಡ್ಲದಿಂದ ಅಗ್ರೋಣ ಸಾಗುವ ರಸ್ತೆಯಲ್ಲಿ ಮರ ಬಿದ್ದಿರುವುದರಿಂದ ಆ ಭಾಗದ ವಿದ್ಯಾರ್ಥಿಗಳು, ಜನರು ವಿವಿಧೆಡೆ ತೆರಳಲಾಗದೆ ತೊಂದರೆಯಾಯಿತು. ಮಧ್ಯಾಹ್ನದ ವೇಳೆ ಮರ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.ಇಲ್ಲಿನ ತಾರಮಕ್ಕಿ, ಬಿಜ್ಜೂರು, ಶಶಿಹಿತ್ತಲ ಸೇರಿದಂತೆ ಹಲವೆಡೆ ಮರಗಳೂ ಧರಾಶಾಹಿ ಆಗಿದೆ. ಅನೇಕ ಮನೆಗಳ ಚಾವಣಿಗಳು ಗಾಳಿಗೆ ಕಿತ್ತು ಬಿದ್ದು ಮನೆಗಳು ಹಾನಿಯಾಗಿದೆ.