ಕನ್ನಡಪ್ರಭ ವಾರ್ತೆ ಬೆಂಗಳೂರು
ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿದವರು, ವಾಪಸ್ ಆ ಸಮಾಜದ ಒಳಿತಿಗೆ ಸ್ವಲ್ಪವಾದರೂ ಕೊಡುಗೆ ನೀಡಿದಾಗ ಮಾತ್ರ ಜೀವನ ಸಾರ್ಥಕ ಎನಿಸಿಕೊಳ್ಳುತ್ತದೆ. ಈ ವಿಚಾರದಲ್ಲಿ ಆರ್ಯವೈಶ್ಯ ಮಹಾಸಭಾದ ಕಾರ್ಯಗಳು ಅತ್ಯಂತ ಅಭಿನಂದನಾರ್ಹ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.ಭಾನುವಾರ ನಗರದ ಪುರಭವನದಲ್ಲಿ ‘ಏಷ್ಯಾನೆಟ್ ಸುವರ್ಣ ನ್ಯೂಸ್-ಕನ್ನಡಪ್ರಭ’ ಸಹಯೋಗದಲ್ಲಿ ಆರ್ಯವೈಶ್ಯ ಮಹಾಸಭಾ ಸಮಾಜದ ಸಾಧಕರಿಗೆ ‘ವಾಸವಿ ಎಕ್ಸ್‌ಲೆನ್ಸ್ ಅವಾರ್ಡ್-2024’ ಪ್ರದಾನ ಮಾಡಿ ಮಾತನಾಡಿದ ಅವರು, ಆರ್ಯವೈಶ್ಯ ಸಮಾಜವು ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸೇವಾ ಕೆಲಸಗಳನ್ನು ಮಾಡುತ್ತಿದೆ. ಸ್ವಂತ ಶ್ರಮ ಮತ್ತು ನಿಷ್ಠೆಯಿಂದ ಈ ಸಮಾಜದ ಅನೇಕರು ಬ್ಯಾಂಕಿಂಗ್, ವ್ಯಾಪಾರ, ಉದ್ಯಮ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ತಮ್ಮ ಸಮುದಾಯದ ಜೊತೆಗೆ ಎಲ್ಲ ವರ್ಗದವರು, ದೇಶದ ಒಳಿತಾಗಿಯು ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸಗಳು ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಡಾ। ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಆರ್ಯವೈಶ್ಯ ಸಮಾಜದವರ ಮಾಡಿರುವ ದಾನ-ಧರ್ಮ, ಸಮಾಜ ಸೇವಾ ಕಾರ್ಯಗಳು ಎಲ್ಲ ಕಡೆ ಕಣ್ಣಿಗೆ ಕಾಣಿಸುತ್ತವೆ. ಆಟದ ಮೈದಾನದ ಅಭಿವೃದ್ಧಿಯಿಂದ ಹಿಡಿದು ಸಾಫ್ಟ್‌ವೇರ್ ಪಾರ್ಕ್ ಅಭಿವೃದ್ಧಿವರೆಗೆ ಎಲ್ಲ ಕಡೆಯು ಛಾಪು ಮೂಡಿಸಿದ್ದಾರೆ. ಸ್ವಂತ ಸಾಮರ್ಥ್ಯದ ಮೇಲೆ ಮಾದರಿಯಾಗುವಂತೆ ಬೆಳೆದಿರುವ ಸಮಾಜದ ಅನೇಕರ ಕಾರ್ಯಗಳು ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗಿವೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ರಾಜ್ಯದಲ್ಲಿ ಸಣ್ಣ ಸಮಾಜವಾಗಿದ್ದರೂ ರಾಜ್ಯದ ಆರ್ಥಿಕತೆಗೆ ಸುಮಾರು ಶೇ.30ರ ವರೆಗೆ ಕೊಡುಗೆ ನೀಡುತ್ತಿದೆ. ಪ್ರಾಮಾಣಿಕತೆ, ಪರಿಶ್ರಮ, ಸಮರ್ಪಣೆ ಮನೋಭಾವದಿಂದ ಕೆಲಸ ಮಾಡುವ ಕಾರಣ ಎತ್ತರದ ಸ್ಥಾನಕ್ಕೆ ಬೆಳೆದಿದ್ದಾರೆ. ಸಮಾಜದ ಯುವಕರು ನೌಕರಿಯ ಹಿಂದೆ ಹೋಗದೆ ನೌಕರಿಗಳನ್ನು ಸೃಷ್ಟಿಸುವವರು ಆಗಬೇಕು. ತಾವು ಇರುವ ಊರಿನಲ್ಲೇ ಏನಾದರೂ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್ ಮಾತನಾಡಿ, ರಾಜ್ಯಕ್ಕೆ, ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಸಮಾಜದ ಬಾಂಧವರ ಸಾಧನೆಗಳ ಪಟ್ಟಿ ದೊಡ್ಡದಿದೆ. ಪ್ರಾಮಾಣಿಕತೆಯಿಂದ ತಾವು ಬೆಳೆಯುವ ಜೊತೆಗೆ ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಎಲ್ಲ ವರ್ಗದವರಿಗೂ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ನೂರು ವರ್ಷಗಳ ಹಿಂದೆ ಆರಂಭವಾದ ಬ್ಯಾಂಕ್‌ಗಳು ಇಂದಿಗೂ ಯಶಸ್ವಿಯಾಗಿ ಲಾಭದಲ್ಲಿ ನಡೆಯುತ್ತಿರುವುದು ಆರ್ಯವೈಶ್ಯ ಸಮಾಜದ ಶಕ್ತಿಗೆ ಸಾಕ್ಷಿಯಾಗಿದೆ. ಉಳಿದ ಸಮುದಾಯದವರ ಸಹಕಾರ, ಬೆಂಬಲ ಇದೆ ಎಂದು ಹೇಳಿದರು.ತೀರ್ಪುಗಾರರಾದ ಡಾ.ಜೆ.ವಿ. ನಂದನ್ ಕುಮಾರ್, ಪ್ರೊ.ವೆಂಕಟೇಶ್ವರಲು ಮತ್ತು ಉಮಾ ಸಾಯಿರಾಂ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮುಖ್ಯ ಸಂಪಾದಕ ಅಜಿತ್ ಹನುಮಕ್ಕನವರ್, ಆರ್ಯವೈಶ್ಯ ಮಹಾಸಭಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರಶಸ್ತಿ ಪುರಸ್ಕೃತರು
ಬ್ರಿಗೇಡ್ ಗ್ರೂಪ್ ಚೇರ್ಮನ್ ಡಾ। ಎಂ.ಆರ್.ಜೈಶಂಕರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಡಾ। ಎಂ.ಕೆ.ಶ್ರೀಧರ್ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಡಬಮ್ಸ್ ರಮೇಶ್, ಬಿ.ಸಿ.ಪ್ರಭಾಕರ್, ರಾಘವೇಂದ್ರ ಮೈಲಾಪುರ, ಬಿ.ವಿ.ಶ್ರೀನಿವಾಸ ಗುಪ್ತಾ, ಗುರುಮೂರ್ತಿ ಪೆಂಡೂಕರ್, ಟಿ.ಕೆ.ಪ್ರಭಾಕರ್, ಕು.ನಂದಿನಿ ರಘೋಜಿ, ಶ್ಯಾಮ್ ಸುಂದರ್ ಗುಪ್ತಾ, ಆರ್.ಎಸ್.ಶ್ರೀಕರ್ ಪುನೀತ್, ಶ್ರೀನಿವಾಸ್ ಗುಪ್ತಾ, ಕೆ.ಎಸ್.ನವೀನ್, ಕೆ.ಜಿ.ಸುಬ್ಬರಾಜು, ಕು. ಎ.ಎನ್.ಸಿರಿ, ಕು.ಅಥರ್ವ ರಾ. ಘಂಟಣ್ಣೆವರ ಮತ್ತು ಕನ್ಯಕಾಪರಮೇಶ್ವರಿ ಕೋ ಅಪರೇಟಿವ್ ಬ್ಯಾಂಕ್, ಮೈಸೂರು.