ಐಟಿಎಂಇಯಿಂದ ಎರಡು ದಿನಗಳ ಪ್ರವಾಸೋದ್ಯಮ ಮೇಳಕ್ಕೆ ಚಾಲನೆ

KannadaprabhaNewsNetwork |  
Published : Jun 29, 2024, 12:35 AM IST
3 | Kannada Prabha

ಸಾರಾಂಶ

ಮೈಸೂರು, ಕರ್ನಾಟಕ ಚಾರಿತ್ರಿಕ ನಗರಗಳಲ್ಲಿ ಒಂದಾಗಿದ್ದು, ಅನೇಕ ಪ್ರವಾಸಿ ಆಕರ್ಷಣೆಯ ಸ್ಥಳಗಳಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರವಾಸೋದ್ಯಮ ಪ್ರದರ್ಶನ ಕ್ಷೇತ್ರದ ಐಟಿಎಂಇ (ಇಂಡಿಯಾ ಟ್ರಾವೆಲ್‌ ಮಾರ್ಟ್‌ ಎಕ್ಸಿಬಿಷನ್ಸ್) ನಗರದ ಹುಣಸೂರು ರಸ್ತೆಯಲ್ಲಿರುವ ಲೆ ರುಚಿ ದಿ ಪ್ರಿನ್ಸ್‌ ಹೊಟೇಲ್‌ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಭಾರತ ಪ್ರವಾಸೋದ್ಯಮ ಮೇಳವನ್ನು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಶುಕ್ರವಾರ ಉದ್ಘಾಟಿಸಿದರು.

ನಂತರ ಎಂ.ಕೆ. ಸವಿತಾ ಮಾತನಾಡಿ, ಮೈಸೂರು, ಕರ್ನಾಟಕ ಚಾರಿತ್ರಿಕ ನಗರಗಳಲ್ಲಿ ಒಂದಾಗಿದ್ದು, ಅನೇಕ ಪ್ರವಾಸಿ ಆಕರ್ಷಣೆಯ ಸ್ಥಳಗಳಿವೆ. ಅರಮನೆ, ಚಾಮುಂಡಿಬೆಟ್ಟ, ಬೃಂದಾವನ ಉದ್ಯಾನ ಮತ್ತು ಮೃಗಾಲಯ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ ಎಂದರು.

ದಸರಾ ಉತ್ಸವ ವೀಕ್ಷಿಸಲು ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ವರ್ಷವಿಡೀ ಇರುವ ಉತ್ತಮ ಹವಾಮಾನವೂ ಅನುಕೂಲಕರವಾಗಿದೆ. ಪ್ರತಿ ವರ್ಷ 40 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಿದ್ದು, ಇಂತಹ ಪ್ರವಾಸೋದ್ಯಮ ಪ್ರದರ್ಶನಗಳಿಗೆ ಇದು ಯೋಗ್ಯವಾಗಿದೆ ಎಂದು ಅವರು ಹೇಳಿದರು.

ಜುಪಿಟರ್‌ ಟ್ರಾವೆಲ್‌ ಎಕ್ಸಿಬಿಷನ್ಸ್ ನಿರ್ದೇಶಕ ಟಿ.ಜೆ.ಪಿ. ರಾಜು ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಮೈಸೂರಿನಲ್ಲಿ ವಿಪುಲ ಅವಕಾಶಗಳಿವೆ. ನಗರಕ್ಕೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆಯಲ್ಲಿ ಪ್ರತಿ ವರ್ಷ ಸರಾಸರಿ ಶೇ.20 ರಷ್ಟು ಹೆಚ್ಚಳವಾಗುತ್ತಿದ್ದು, ನಗರದ ಅರ್ಥ ವ್ಯವಸ್ಥೆಗೆ ಆತಿಥ್ಯ ಕ್ಷೇತ್ರ ಶೇ.25 ರಷ್ಟು ಕೊಡುಗೆ ನೀಡುತ್ತಿದೆ ಎಂದರು.

ಐಟಿಎಂಇ ಪ್ರವಾಸೋದ್ಯಮ ಮೇಳಕ್ಕೆ ಮೈಸೂರು ಪ್ರಶಸ್ತವಾಗಿದೆ. ಭವಿಷ್ಯದ ಪ್ರವಾಸೋದ್ಯಮ ಸ್ವರೂಪವನ್ನು ರೂಪಿಸಲು ಮೈಸೂರು ಮಹತ್ವದ ಪಾತ್ರ ವಹಿಸುತ್ತಿದೆ. ಆಧುನಿಕತೆ ಮತ್ತು ಇತಿಹಾಸ ಸಂಗಮಿಸುವ ಅಪರೂಪದ ಸ್ಥಳ ಇದಾಗಿದೆ ಎಂದು ಅವರು ತಿಳಿಸಿದರು.

ಈ ಮೇಳವು ಶನಿವಾರ (ಜೂನ್29) ಮುಕ್ತಾಯಗೊಳ್ಳಲಿದೆ. ಕರ್ನಾಟಕ ಮಾತ್ರವಲ್ಲದೇ ಕೇರಳ, ಚಂಡಿಗಢ, ಗೋವಾ, ತಮಿಳುನಾಡು, ಪುದುಚೇರಿ, ದೆಹಲಿ, ಅಂಡಮಾನ್‌ ಮತ್ತು ವಿದೇಶಗಳಿಂದ ನೇಪಾಳ ಮತ್ತು ಥಾಯ್ಲೆಂಡ್ ನ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಈ ಮೇಳದಲ್ಲಿ ಟ್ರಾವೆಲ್‌ ಏಜೆಂಟರು, ಟೂರ್‌ ಆಪರೇಟರ್ ಗಳು, ಕಾರ್ಪೊರೆಟ್‌ ಖರೀದಿದಾರರು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದ ಎಲ್ಲಾ ಪಾಲುದಾರರು ಭಾಗಹಿಸಿದ್ದಾರೆ. ಎಲ್ಲಾ ನಡುವೆ ನೆಟ್ ವರ್ಕ್‌ ಸೃಷ್ಟಿಸಿ ಪ್ರವಾಸೋದ್ಯಮವನ್ನು ಬೆಳೆಸುವ ಉದ್ದೇಶವನ್ನು ಈ ಮೇಳ ಹೊಂದಿದೆ.

ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಸೇಫ್ ವೀಲ್ಸ್ ಮಾಲೀಕ ಬಿ.ಎಸ್. ಪ್ರಶಾಂತ್, ಮೈಸೂರು ಟ್ರಾವೆಲ್ ಅಸೋಸಿಯೇಷನ್ ನ ಸಿ.ಟಿ. ಜಯಕುಮಾರ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು